ಕಾವಾಡಿಗಳ ನೇಮಕಾತಿಯಲ್ಲಿ ಅಕ್ರಮದ ವಾಸನೆ: ಆನೆಯೊಂದಿಗೆ ಒಡನಾಟವಿಲ್ಲದವರಿಗೆ ಹುದ್ದೆ ಬಿಕರಿ?

ಮೈಸೂರಿನಲ್ಲಿ ನಡೆದ 26 ಆನೆ ಕಾವಡಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆನೆಗಳ ಜೊತೆ ಒಡನಾಟವಿಲ್ಲದವರು, ವಯೋಮಿತಿ ಮೀರಿದವರು, ನಕಲಿ ದಾಖಲೆ ಸಲ್ಲಿಸಿದವರಿಗೆ ಹುದ್ದೆ ನೀಡಿ, ಹಲವು ವರ್ಷಗಳ ಅನುಭವವಿರುವ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಈ ಅಕ್ರಮದ ಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಲಾಗಿದೆ.

ಕಾವಾಡಿಗಳ ನೇಮಕಾತಿಯಲ್ಲಿ ಅಕ್ರಮದ ವಾಸನೆ: ಆನೆಯೊಂದಿಗೆ ಒಡನಾಟವಿಲ್ಲದವರಿಗೆ ಹುದ್ದೆ ಬಿಕರಿ?
ಆನೆ ಕಾವಡಿಗಳ ನೇಮಕಾತಿ
Edited By:

Updated on: Nov 07, 2026 | 5:07 PM

ಮುಖ್ಯಾಂಶಗಳು

  • ಆನೆ ಕಾವಾಡಿಗಳ ಹುದ್ದೆ ನೇಮಕಾತಿಯಲ್ಲೂ ಅಕ್ರಮ ಆರೋಪ
  • ಆನೆಗಳೊಂದಿಗೆ ಒಡನಾಟವೇ ಇಲ್ಲದವರಿಗೆ ಕಾವಾಡಿ ಹುದ್ದೆ ಬಿಕರಿ
  • ಮಾವುತ ವಸಂತನ ಪುತ್ರ ಆಯ್ಕೆಯಾಗುವಲ್ಲಿ ವಿಫಲ

ಕೊಡಗು, ನವೆಂಬರ್​ 07: ಇತ್ತೀಚೆಗೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಅಂದರೆ ಸಾಕು ಅಲ್ಲಿ ಅಕ್ರಮದೇ ಕಾರುಬಾರು ಎನ್ನುವಂತಾಗಿದೆ. ಇದೀಗ ಆನೆ ಕಾವಾಡಿಗಳ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬರುತ್ತಿದೆ. ಅರ್ಹರನ್ನು ಕೈ ಬಿಟ್ಟು ಸ್ವಜನ ಪಕ್ಷಪಾತ ಮಾಡಿ ಅನರ್ಹರಿಗೆ ಹುದ್ದೆಗಳನ್ನ ಬಿಕರಿ ಮಾಡಿರುವ ಆರೋಪ ಕೇಳಿ ಬಂದಿದೆ.

ಅನರ್ಹರಿಗೆ ಹುದ್ದೆಗಳನ್ನ ನೀಡಿರುವ ಆರೋಪ

ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರದಿಂದ ಇತ್ತೀಚೆಗೆ ಮೈಸೂರು ವೃತ್ತದ 26 ಹುದ್ದೆಗಳಿಗೆ ಕಾವಾಡಿಗಳ ನೇಮಕಾತಿಗೆ ನೇರ ಸಂದರ್ಶನ ನಡೆದಿತ್ತು. ಇದೇ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಮೈಸೂರಿನಲ್ಲೇ ನಡೆದಿದ್ದ ನೇರ ಸಂದರ್ಶನದಲ್ಲಿ 26 ಕಾವಾಡಿಗರನ್ನ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಪ್ರಕಟಿಸಿತ್ತು. ಆದರೆ ಇಲ್ಲಿ ಆಯ್ಕೆಯಾಗಿರುವ 26 ಅಭ್ಯರ್ಥಿಗಳ ಪೂರ್ವಾಪರ ನೋಡಿದರೆ ಹಲವು ಅನುಮಾನಗಳು ಮೂಡಿವೆ. ಅರ್ಹ ಅಭ್ಯರ್ಥಿಗಳನ್ನ ಕಡೆಗಣಿಸಿ ಇಲ್ಲಿ ಅನರ್ಹರಿಗೆ ಹುದ್ದೆಗಳನ್ನ ನೀಡಿರುವ ಆರೋಪ ಕೇಳಿಬಂದಿದೆ.

Loading...

ಆನೆಗಳ ಬಗ್ಗೆ ಗಂಧ-ಗಾಳಿ ಗೊತ್ತಿಲ್ಲದವರಿಗೆ ಕಾವಡಿ ಹುದ್ದೆ

ಆನೆಗಳ ಜೊತೆ ಒಡನಾಟ ಇರುವುದು ಕಡ್ಡಾಯ ಎಂಬುದು ಆನೆ ಕಾವಾಡಿ ಹುದ್ದೆಗೆ ಇರುವ ಮೊದಲ ಮಾನದಂಡ. ಆದರೆ ಇಲ್ಲಿ ಆಯ್ಕೆಯಾಗಿರುವ ಬಹಳಷ್ಟು ಅಭ್ಯರ್ಥಿಗಳಿಗೂ ಹಾಗೂ ಆನೆಗಳಿಗೂ ಯಾವುದೇ ಸಂಬಂಧವೇ ಇಲ್ಲ. ಇವರಿಗೆ ಯಾವ ಆಧಾರದ ಮೇಲೆ ಹುದ್ದೆ ನೀಡಲಾಗಿದೆ ಎಂಬ ಪ್ರಶ್ನೆ ಇದೀಗ ಮೂಡಿದೆ.

ಅರಣ್ಯದಂಚಿನಲ್ಲಿ ವಾಸ ಇರುವುದಾಗಿ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ

ಕಾವಾಡಿ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ಅರಣ್ಯದಂಚಿನಲ್ಲಿ ವಾಸ ಇರುವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಅಭ್ಯರ್ಥಿಗಳು ಅರಣ್ಯದಂಚಿನಲ್ಲೇ ವಾಸ ಇದ್ದಾರೆ ಎಂಬುದಕ್ಕೆ ಸ್ಥಳೀಯ ಗ್ರಾಮ ಲೆಕ್ಕಿಗ ಮತ್ತು ರೆವಿನ್ಯು ಇನ್ಸ್​ಪೆಕ್ಟರ್ ಪರಿಶೀಲನೆ ಮಾಡಿ ತಹಶೀಲ್ದಾರ್​ಗೆ ವರದಿ ನೀಡಬೇಕು. ಇದನ್ನ ಆಧರಿಸಿ ತಹಶೀಲ್ದಾರ್, ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಆಯ್ಕೆಯಾಗಿರುವ ಬಹಳಷ್ಟು ಅಭ್ಯರ್ಥಿಗಳು ಪಟ್ಟಣ ಪ್ರದೇಶದಲ್ಲಿ ವಾಸವಿರುವ ಬಗ್ಗೆ ಅಧಿಕೃತ ದಾಖಲೆಗಳಿವೆ.

ಗರಿಷ್ಠ ವಯೋಮಿತಿ ನೀತಿಯನ್ನ ಗಾಳಿಗೆ ತೂರಿದ್ರಾ ಅಧಿಕಾರಿಗಳು?

ಕಾವಾಡಿಗಳ ನೇಮಕಾತಿಗೆ ಏಳು ವಿಭಾಗಗಳಲ್ಲಿ ಅರ್ಜಿ ಕರೆಯಲಾಗಿದ್ದು, ವಿವಿಧ ವಯೋಮಾನ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಆಯ್ಕೆಯಾಗಿರುವ ಕೆಲ ಅಭ್ಯರ್ಥಿಗಳ ವಯಸ್ಸು 36, 38 ಮತ್ತು 40 ವರ್ಷ ಇರುವುದು ಹಲವು ಅನುಮಾನಗಳನ್ನ ಸೃಷ್ಟಿಸಿದೆ.

ಮಾವುತ ವಸಂತನ ಪುತ್ರ ಆಯ್ಕೆಯಾಗುವಲ್ಲಿ ವಿಫಲ

ಒಂದೆಡೆ ನೇಮಕಾತಿಗೊಂಡವರು ಮಾನದಂಡಗಳ ಬಗ್ಗೆ ಹಲವು ಗೊಂದಲ, ಅನುಮಾನಗಳು ಇರುವಂತೆಯೇ ಆಯ್ಕೆಯಲ್ಲಿ ಅನರ್ಹಗೊಂಡ ಅಭ್ಯರ್ಥಿಗಳ ಅರ್ಹತೆಗಳು ಅಚ್ಚರಿ ತರುವಂತಿದೆ. ಉದಾಹರಣೆಗೆ ಅಂಬಾರಿ ಹೊರುವ ಅಭಿಮನ್ಯು ಆನೆಯ ಮಾವುತ ವಸಂತನ ಪುತ್ರ ಆಕಾಶ್​, ಕಾವಡಿಯಾಗಿ ಹುದ್ದೆಗಿಟ್ಟಿಸುವಲ್ಲಿ ವಿಫಲವಾಗಿದ್ದಾನೆ. ಅದೇ ರೀತಿ ದುಬಾರೆ ಆನೆ ಶಿಬಿರದಲ್ಲೇ ಹುಟ್ಟಿ ಬೆಳೆದು ಆನೆಗಳ ಜೊತೆ ಒಡನಾಟವಿರುವ ಬಹಳಷ್ಟು ಅಭ್ಯರ್ಥಿಗಳು ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ.

ಸಿಎಂ ಕಾರ್ಯದರ್ಶಿಗೆ ದೂರು 

ಅನರ್ಹರನ್ನ ಕೈಬಿಟ್ಟು, ಕೆಲ ಅರಣ್ಯಾಧಿಕಾರಿಗಳ ಚಾಲಕರ ಮಕ್ಕಳು, ಪಶುವೈದ್ಯರ ಚಾಲಕರ ಮಕ್ಕಳು, ಅರಣ್ಯ ಭವನದಲ್ಲಿ ಕೆಲಸ ಮಾಡುವ ತಮ್ಮ ಆಪ್ತರಿಗೆ ಹುದ್ದೆ ನೀಡಿರುವ ಆರೋಪ ಕೇಳಿಬಂದಿದೆ. ಇಂತಹ ಅರ್ಹ ಅಭ್ಯರ್ಥಿಗಳನ್ನ ಅನರ್ಹ ಮಾಡಿರುವ ಅಧಿಕಾರಿಗಳ ನಡೆ ಹಲವು ಅನುಮಾಗಳಿಗೆ ಕಾರಣವಾಗಿದೆ. ಈ ಬಗ್ಗೆ ಹಲವು ಮಾವುತರು ಮತ್ತು ಕಾವಾಡಿಗಳು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಎಸ್ ಪೊನ್ನಣ್ಣ ಅವರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: 5 ತಿಂಗಳ ಬಳಿಕ ಪ್ರವಾಸಿಗರಿಗೆ ಓಪನ್ ಆಯ್ತು ಹಾರಂಗಿ, ಮತ್ತಿಗೋಡು ಆನೆ ಶಿಬಿರ: ಕಟ್ಟುನಿಟ್ಟಿನ ರೂಲ್ಸ್ ಜಾರಿ!

ಸದ್ಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ನೇಮಕಾತಿ ಪಟ್ಟಿಯನ್ನ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲು ಕೆಲವು ಸಂಘಟನೆಗಳು ಮುಂದಾಗಿವೆ.

Elephant Mahout Recruitment Scam In Karnataka?: Fake Certificates Submitted To Get Jobs!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:06 pm, Sat, 7 November 26

ಗೋಪಾಲ್​ ಸೋಮಯ್ಯ
Loading...
Unable to load recommendations.
Follow Us