ಮಡಿಕೇರಿ, ಸೆಪ್ಟೆಂಬರ್ 14: ಕೊಡಗು ಜಿಲ್ಲೆಯ ಮಡಿಕೇರಿ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಎಸ್ಆರ್ಟಿಸಿ ಬಸ್ ಚಾಲಕರು ಶನಿವಾರ ಬೀದಿಗಿಳಿದು, ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಮಡಿಕೇರಿ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಇವರೆಲ್ಲರಿಗೂ ಕಳೆದ ಕೆಲವು ತಿಂಗಳಿನಿಂದ ಸರಿಯಾಗಿ ವೇತನ ಪಾವತಿಯಾಗಿಲ್ಲ. ಹಾಗಾಗಿ ಬೆಳಗ್ಗಿನಿಂದಲೇ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಇವರನ್ನು ಈ ಮೊದಲು ಬೇರೆಯೊಂದು ಸಂಸ್ಥೆ ಗುತ್ತಿಗೆ ಮೇಲೆ ನೇಮಕ ಮಾಡಿಕೊಂಡಿತ್ತು. ಆದರೆ, ಇದೀಗ ಕಳೆದ ಎರಡು ತಿಂಗಳಿನಿಂದ ಬಹುತೇಕ ಚಾಲಕರ ವೇತನವನ್ನು ಕಾರಣವೇ ಇಲ್ಲದೆ 8 ರಿಂದ 10 ಸಾವಿರ ರೂಪಾಯಿವರೆಗೆ ಕಡಿತ ಮಾಡಲಾಗಿದೆ. ಇವರ ಖಾತೆಗೆ ಇಎಫ್ ಹಣ ಕೂಡ ವರ್ಗಾವಣೆಯಾಗಿಲ್ಲ. ಇದರ ಬಗ್ಗೆ ಕೇಳಿದರೆ ‘‘ಪೂಜ್ಯಾಯ ಸಂಸ್ಥೆ’’ ಉಡಾಫೆಯ ಉತ್ತರ ನೀಡುತ್ತಿದೆ ಎಂಬುದು ಚಾಲಕರ ಆರೋಪವಾಗಿದೆ.
ಚಾಲಕರಿಗೆ 25 ಸಾವಿರ ರೂ. ಸಂಬಳದಲ್ಲಿ 2 ಸಾವಿರ ರೂ. ಪಿಎಫ್ ಕಡಿತ ಮಾಡಿ ಉಳಿದ 23 ಸಾವಿರ ರೂ. ಹಣ ಅಕೌಂಟ್ಗೆ ಹಾಕಬೇಕು. ಆದರೆ 23 ಸಾವಿರ ರೂ. ಬದಲು 10 ಸಾವಿರ, 14 ಸಾವಿರ ಹೀಗೆ ಅಲ್ಪ ಮೊತ್ತವನ್ನ ಜಮೆ ಮಾಡಲಾಗುತ್ತಿದೆ ಎಂಬುದು ಚಾಲಕರ ವಾದ. ಈ ಬಗ್ಗೆ ಡಿಪೋ ಡಿಸಿ ಬಳಿ ಪ್ರಶ್ನಿಸಿದಾಗ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಾರೆ. ಹಾಗೆ ಹೇಳುವುದು ಬಿಟ್ಟರೆ ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಚಾಲಕರ ದೂರಾಗಿದೆ.
ಎಷ್ಟೋ ಚಾಲಕರು ತಿಂಗಳಿಗೆ 30 ಗಂಟೆಗೂ ಅಧಿಕ ಒಟಿ ಮಾಡಿದ್ದಾರೆ. ಅದರ ಹಣ ಕೂಡ ಕೊಟ್ಟಿಲ್ಲ. ಅಲ್ಲದೆ, ಒಂದು ದಿನ ರಜೆ ಹಾಕಿದ್ರೆ 250 ರೂ. ಕಡಿತ ಮಾಡಲಾಗುತ್ತಿದೆ. ಈ ತಿಂಗಳು ಹಬ್ಬಕ್ಕಾದ್ರೂ ವೇತನ ಕೊಡಿ ಎಂದು ಮನವಿ ಮಾಡಿದರೂ ಹಣ ಕೊಡದೆ ಸತಾಯಿಸಿದ್ದಾರಂತೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕಳೆದ ಹಲವು ದಿನಗಳಿಂದ ಪೂಜ್ಯಾಯ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೆ, ಇದೀಗ ಪ್ರತಿಭಟನೆಗೆ ಇಳಿದಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಎಚ್‌ಎಸ್‌ಆರ್‌ಪಿಗೆ ನಾಳೆಯೇ ಗಡುವು: ಸ್ವಲ್ಪ ದಿನಗಳ ಮಟ್ಟಿಗೆ ಇದೆ ಗುಡ್ ನ್ಯೂಸ್!
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಈ ಸಮಸ್ಯೆಯ ಮೂಲ ರಾಜ್ಯ ಸರ್ಕಾರವೇ ಎಂದು ಸಾರ್ವಜನಿಕ ವಲಯದಲ್ಲಿ ಶಂಕೆ ಮೂಡಿದೆ. ಮಹಿಳೆಯರಿಗೆ ಉಚಿತ ಬಸ್ ಹೊರೆಯಿಂದಾಗಿ ಸರ್ಕಾರದಿಂದ ಸಾರಿಗೆ ಸಂಸ್ಥೆಯ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲದೆ ಸರ್ಕಾರವೇ ಎಡವಟ್ಟು ಮಾಡಿದೆಯಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Sat, 14 September 24