Talacauvery Theerthodbhava: ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’, ಜೀವನದಿಯ ದರ್ಶನಕ್ಕೆ ಕ್ಷಣಗಣನೆ
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನದ ವೇಳೆಗೆ ಕಾವೇರಿ, ತೀರ್ಥರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆ ಕೈಗೊಂಡಿದೆ.
ಮಡಿಕೇರಿ: ಕಾವೇರಿ… ಇದೊಂದು ಕೇವಲ ನದಿಯಲ್ಲ. ಕೋಟ್ಯಾಂತರ ಮಂದಿಗೆ ತಾಯಿ. ಜೀವನದಿ. ದೈವೀ ಸ್ವರೂಪಿಣಿ. ಹೀಗಾಗಿಯೇ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇವತ್ತು ಸಂಭ್ರಮ ಮನೆ ಮಾಡಿದೆ. ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿರುವ ಜೀವನದಿಯ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ.
ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಅನ್ನೋದು ಪ್ರತೀತಿ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಅದೇ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ. ಈ ಬಾರಿ ಮಧ್ಯಾಹ್ನದ ವೇಳೆ ತೀರ್ಥೋದ್ಭವ ಆಗಲಿರೋದ್ರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಬೆಳಗ್ಗೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿವೆ.
ಇನ್ನು ಬೆಳಗ್ಗೆ 11 ಗಂಟೆಯ ಬಳಿಕ ಬ್ರಹ್ಮ ಕುಂಡಿಕೆ ಬಳಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದ್ದು, ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ದೇವಸ್ಥಾನದ ಆವರಣದಲ್ಲಿ ಬ್ಯಾರಿಕೇಡ್, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಭದ್ರತೆಗಾಗಿ ಕೆಎಸ್ಆರ್ಪಿ ಮತ್ತು ಡಿಆರ್ ಪೊಲೀಸರನ್ನ ನಿಯೋಜಿಸಿದ್ದು, ತಲಕಾವೇರಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.
ಕೊರೊನಾ ಕಾರಣಕ್ಕೆ ಕಳೆದ ವರ್ಷ ಈ ಪವಿತ್ರ ತೀರ್ಥೋದ್ಭವದ ಜಾತ್ರೆ ಸರಳವಾಗಿ ಆಚರಣೆಗೊಂಡಿತ್ತು. ಹೀಗಾಗಿ ಬೇಸರಗೊಂಡಿದ್ದ ಭಕ್ತರಿಗೆ, ಈ ಬಾರಿ ತೀರ್ಥೋದ್ಭವ ಕಣ್ತುಂಬಿಕೊಳ್ಳೋ ಅವಕಾಶ ಸಿಕ್ಕಿದೆ. ಕಲ್ಯಾಣಿಗೆ ಇಳಿದು ಪುಣ್ಯ ಸ್ನಾನ ಮಾಡಲು ಅವಕಾಶವಿಲ್ಲ ಎನ್ನುವುದನ್ನು ಬಿಟ್ರೆ, ತೀರ್ಥ ರೂಪದಲ್ಲಿ ದರ್ಶನ ನೀಡುವ ಜೀವನದಿಯನ್ನು ನೋಡಿ ಪುನೀತರಾಗಲು ಯಾವುದೇ ಅಡೆತಡೆ ಇರಲ್ಲ.
ವರದಿ: ಗೋಪಾಲ್ ಸೋಮಯ್ಯ ಐಮಂಡ
ಇದನ್ನೂ ಓದಿ: ನಾಳೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಕೊರೊನಾ ಕಾರಣದಿಂದ ಹಲವು ನಿರ್ಬಂಧ: ಇಲ್ಲಿದೆ ವಿವರ