ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ, ಯಾವುದೇ ಕ್ಷಣ ಬಸ್ ರೈಟ್.. ರೈಟ್!
ರಾಜ್ಯದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಸಿಬ್ಬಂದಿ ಮುಷ್ಕರ ಇದೀಗ ತಾನೆ ಅಂತ್ಯವಾಗಿದೆ. ಸಾರಿಗೆ ಸಿಬ್ಬಂದಿ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಫ್ರೀಡಂಪಾರ್ಕ್ನಲ್ಲಿ ನೌಕರರ ಸಮ್ಮುಖದಲ್ಲಿ ಘೋಷಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಸಿಬ್ಬಂದಿ ಮುಷ್ಕರ ಇದೀಗ ತಾನೆ ಅಂತ್ಯವಾಗಿದೆ. ಸಾರಿಗೆ ಸಿಬ್ಬಂದಿ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಫ್ರೀಡಂಪಾರ್ಕ್ನಲ್ಲಿ ನೌಕರರ ಸಮ್ಮುಖದಲ್ಲಿ ಘೋಷಿಸಿದ್ದಾರೆ. ಸರ್ಕಾರದಿಂದ ಲಿಖಿತ ಭರವಸೆ ದೊರತಿರುವ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯವಾಗಿದೆ ಎಂದು ಅವರು ಪ್ರಕಟಿಸಿದರು.
ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದರು. ರಾಜ್ಯಾದ್ಯಂತ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಸಾರಿಗೆ ಸಂಸ್ಥೆ ಸಿಬ್ಬಂದಿಯ 4 ದಿನಗಳ ಮುಷ್ಕರ ವಾಪಸ್ ಪಡೆಯುತ್ತೇವೆ. ಮುಷ್ಕರದಿಂದ ತೊಂದರೆಯಾಗಿದ್ದಕ್ಕೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಿಮ್ಮ ವಾದ ಏನಿದೆ ಅದು 100ಕ್ಕೆ 100ರಷ್ಟು ಸರಿ ಇದೆ. ನಮ್ಮ ಮೊದಲ ಬೇಡಿಕೆ ಸರ್ಕಾರಿ ನೌಕರರಾಗಿ ಮಾಡುವುದು. ಆ ವಿಷಯದಿಂದ ನಾವು ಹಿಂದಕ್ಕೆ ಹೋಗುವುದೇ ಇಲ್ಲ. ನಿನ್ನೆ ಸರ್ಕಾರ ಒಪ್ಪಿದ್ದ 9 ಬೇಡಿಕೆಗಳು ಪರಿಷ್ಕರಣೆಯಾಗಿದೆ. ನಮ್ಮ ಮೊದಲ ಬೇಡಿಕೆ ಮಾತ್ರ ಘೋಷಣೆ ಆಗಿಲ್ಲ. ಜೊತೆಗೆ, 6ನೇ ವೇತನ ಆಯೋಗದ ಜಾರಿ 2021ರ ಜನವರಿಗೆ ಜಾರಿಯಾಗುತ್ತದೆ. ಕಾನೂನು ಪ್ರಕಾರವಾಗಿ ಜಾರಿಗೆ ಬರುತ್ತೆ, ತಡೆಯಲಾಗಲ್ಲ. ಈ ಎರಡೂ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದರು.
‘ಸರ್ಕಾರಕ್ಕೆ 3 ತಿಂಗಳ ಗಡುವು ನೀಡುತ್ತೇವೆ’ ಸರ್ಕಾರಕ್ಕೆ 3 ತಿಂಗಳ ಗಡುವು ನೀಡುತ್ತೇವೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ 8-10 ಸಚಿವರು ನನ್ನ ಮೇಲೆ ಮುಗಿಬಿದ್ದಿದ್ದಾರೆ. ನನ್ನ ಮನೆಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ತಿಂಗಳೊಳಗೆ ಯಾವ ಕೆಲಸ ಆಗಬೇಕೋ ಅವು ಆಗುತ್ತೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರಾಗಿ ಘೋಷಿಸಲಿ. ಇದು ಒಂದಲ್ಲ ಎರಡು ವರ್ಷವಾದರೂ ಬಿಡುವುದಿಲ್ಲ ಎಂದು ಕೋಡಿಹಳ್ಳಿ ಹೇಳಿದರು.
ಈ ಹಿಂದೆ, ಸರ್ಕಾರ ವತಿಯಿಂದ ನಂದೀಶ್ ರೆಡ್ಡಿ ಫ್ರೀಡಂಪಾರ್ಕ್ ಸ್ಥಳಕ್ಕೆ ಬಂದು ಲಿಖಿತ ರೂಪದಲ್ಲಿದ್ದ ಸರ್ಕಾರದ ನಿರ್ಧಾರವನ್ನು ಮುಷ್ಕರ ನಿರತ ನೌಕರರ ಪ್ರತಿನಿಧಿಗಳ ಕೈಗೆ ಹಸ್ತಾಂತರಿಸಿ, ತಕ್ಷಣವೇ ಸ್ಥಳದಿಂದ ಹೊರಟರು.
ಅದಾಗುತ್ತಿದ್ದಂತೆ, ಸದ್ಯಕ್ಕೆ ಮುಷ್ಕರ ನಿರತ ನೌಕರರ ಪ್ರಾತಿನಿಧ್ಯ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಸರ್ಕಾರದ ಪತ್ರದಲ್ಲಿದ್ದ ಅಷ್ಟೂ ಅಂಶಗಳನ್ನು ಜೋರಾಗಿ ಓದಿ ಸಾರಿಗೆ ಸಿಬ್ಬಂದಿಗೆ ಮಾಹಿತಿ ತಲುಪಸಿದರು. ಜೊತೆಗೆ, ಸರ್ಕಾರದ ನಿರ್ಧಾರ ಈ ರೀತಿಯಾಗಿದೆ. ಇದಕ್ಕೆ ನಾವು ಯಾವ ನಿರ್ಧಾರ ಕೈಗೊಳ್ಳೋಣ ಎಂಬುದನ್ನು ನೀವೇ, ಇಲ್ಲೇ ತಿಳಿಸಿ ಎಂದು ಸೂಚಿಸಿದರು.
ಸರ್ಕಾರ ನೀಡಿದ ಭರವಸೆ ಪತ್ರದಲ್ಲಿರುವ ಅಂಶಗಳು 1. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆಯನ್ನು ಅಳವಡಿಸಲು ತೀರ್ಮಾನಿಸಲಾಗಿದೆ 2. ಕೊವಿಡ್19 ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು 3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನಿಸಲಾಗಿದೆ 4. ತರಬೇತಿಯಲ್ಲಿರುವ ನೌಕರರನ್ನು ತರಬೇತಿ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಸಲು ತೀರ್ಮಾನಿಸಲಾಗಿದೆ 5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್ (ಮಾನವ ಸಂಪನ್ಮೂಲ) ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು 6. ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆಯನ್ನು (ಬಾಟಾ) ಕೊಡಲು ತೀರ್ಮಾನಿಸಲಾಗಿದೆ 7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗುವುದು 8. ಎನ್.ಐ.ಎನ್.ಸಿ. (ನಾಟ್ ಇಶ್ಯೂಡ್ – ನಾಟ್ ಕಲೆಕ್ಟೆಡ್) ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು 9. ವೇತನ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಕೋರಿದ್ದು, ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಾಗುವುದು.
ಕಾರ್ಮಿಕರ ಕೋರಿಕೆಯಂತೆ.. ಲಿಖಿತ ಪತ್ರ ಹಸ್ತಾಂತರಿಸಿದ BMTC ಅಧ್ಯಕ್ಷ ನಂದೀಶ್ ರೆಡ್ಡಿ
Published On - 4:04 pm, Mon, 14 December 20



