ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೆಪ್ಟೆಂಬರ್ 27 ರಂದು ಕರೆನೀಡಿರುವ ಭಾರತ್ ಬಂದ್‌ಗೆ ಹಲವು ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಫ್ರೀಡಂಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಚಾಲಕರ ಅಸೋಸಿಯೇಷನ್ ಗಂಡಸಿ ಸದಾನಂದಸ್ವಾಮಿ, ಕೆ.ಆರ್. ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಮಹೇಶ್ಗೌಡ, ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿ ಆಗಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಸೆ.27ಕ್ಕೆ ಭಾರತ್ ಬಂದ್‌ಗೆ ಬಹುತೇಕ ರೈತ ಸಂಘಟನೆಗಳು ಬೆಂಬಲ ನೀಡಿವೆ. ರೈತರೇ ಹೋರಾಟದ ಮುಂಚೂಣಿಯಲ್ಲಿ ಇರುತ್ತಾರೆ. ಪ್ರತಿಯೊಬ್ಬರೂ ಭಾರತ್ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಗಿದೆ ಎಂದು ಫ್ರೀಡಂಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಸೆ. 27 ರಂದು ಬೆಳಗ್ಗೆ 8ಕ್ಕೆ ಕೆ.ಆರ್. ಮಾರ್ಕೆಟ್ನಿಂದ ಮೆರವಣಿಗೆ ನಡೆಸಲಿದ್ದೇವೆ. ಬೆಳಗ್ಗೆ 11 ಗಂಟೆಗೆ ಟೌನ್ಹಾಲ್ ತಲುಪಲಿದ್ದೇವೆ. ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ಮಾಡುತ್ತೇವೆ. ಸರ್ಕಾರದ ಪರವಾಗಿ ಇರುವವರು ಬಂದ್‌ಗೆ ಆಕ್ಷೇಪಿಸುತ್ತಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ರೈಲು, ಬಂದರು, ಹೆದ್ದಾರಿ ಎಲ್ಲವೂ ಖಾಸಗೀಕರಣವಾಗಿದೆ. ರೈತರು ಖಾಸಗೀಕರಣ ಆಗಬಾರದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ನಮ್ಮ ಹೋರಾಟಕ್ಕೆ ಸಮಸ್ತ ನಾಗರಿಕರು ಸಹಕರಿಸಬೇಕು. ಬಂದ್‌ಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಕೋರಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ನೈತಿಕ ಬೆಂಬಲ ಇದೆ ಎಂದು ಟಿವಿ9ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ. ರೈತರ ಹೋರಾಟಕ್ಕೆ ಕೇವಲ ನೈತಿಕ ಬೆಂಬಲ ಮಾತ್ರ ಇದೆ. ಕೇಂದ್ರದ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು. ಅಕ್ಟೋಬರ್ 1 ಅಥವಾ 2ರಂದು ಪ್ರತಿಭಟನೆಗೆ ಚಿಂತನೆ ಮಾಡಲಾಗಿದೆ. ಸೆ. 27ರಂದು ಯಾವುದೇ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ ಎಂದು ಟಿವಿ9ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾಹಿತಿ ನೀಡಿದ್ದಾರೆ.
ಬಂದ್‌ಗೆ ಬೀದಿಬದಿ ವ್ಯಾಪಾರಿಗಳ ಸಂಘದಿಂದ, ಖಾಸಗಿ ಶಾಲೆಗಳ ಒಕ್ಕೂಟದಿಂದಲೂ ನೈತಿಕ ಬೆಂಬಲ ಇದೆ ಎಂದು ಹೇಳಿದ್ದಾರೆ. ಬೆಂಗಳೂರು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ, ಆದರ್ಶ ಆಟೋ ಚಾಲಕರ ಸಂಘದಿಂದ. ರುಪ್ಸಾ ಕರ್ನಾಟಕದಿಂದಲೂ ಬಂದ್‌ಗೆ ನೈತಿಕ ಬೆಂಬಲ ಇರುವ ಬಗ್ಗೆ ತಿಳಿಸಿದ್ದಾರೆ.
ಬಂದ್ ದಿನ ಕೆಎಸ್ಆರ್ಟಿಸಿ ಬಸ್ಗಳ ಕಾರ್ಯಚರಣೆ ಇರಲಿದೆ
ಭಾರತ್ ಬಂದ್ ಹಿನ್ನೆಲೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಆಯಾ ವಲಯದ ಪೋಲಿಸ್ ಠಾಣೆಗಳಿಗೆ ಭದ್ರತೆ ಕೋರುವುದು. ಬಂದ್ ದಿನ ಬಸ್ ಡಿಪೋ ಯಿಂದ ಹೊರಟು ವಾಪಸ್ ಆಗುವವರೆಗೂ ಹೆಚ್ಚಿನ ನಿಗಾವಹಿಸುವುದು. ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಪರಿಸ್ಥಿತಿ ನಿಭಾಯಿಸುವುದು. ಚಾಲಕ, ನಿರ್ವಾಹಕರು ಬಸ್ ಗಳು ಜಕಂ ಆಗದಂತೆ ಕ್ರಮವಹಿಸುವುದು. ಬಂದ್ ದಿನ ಬಸ್ಗಳಿಗೆ ಉಂಟಾಗುವ ಹಾನಿ, ಕಿ.ಮೀ ರದ್ಧತಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ಕೊಡಲಾಗಿದೆ.
ಈ ಬಗ್ಗೆ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ರಿಂದ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಭಾರತ್ ಬಂದ್ ದಿನ ಬಸ್ಗಳಿಗೆ, ಬಸ್ ನಿಲ್ದಾಣ, ಡಿಪೋ ಹಾಗೂ ವರ್ಕ್ ಶಾಪ್ ಗಳಿಗೆ ಪೊಲೀಸ್ ಭದ್ರತೆ ಕೋರಿ ಪತ್ರ ಬರೆಯಲಾಗಿದೆ. ಬಂದ್ ದಿನ ಕೆಎಸ್ಆರ್ಟಿಸಿ ಬಸ್ಗಳ ಕಾರ್ಯಚರಣೆ ಇರಲಿದೆ. ಕೆಲ ಕಿಡಿಗೇಡಿಗಳು ನಿಗಮದ ಆಸ್ತಿಪಾಸ್ತಿಗೆ ಹಾನಿ ಮಾಡುವ ಸಾಧ್ಯತೆ ಹಿನ್ನೆಲೆ ಭದ್ರತೆ ಕೋರಿ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bharat Bandh: ಕೃಷಿ ಕಾಯ್ದೆ ವಿರೋಧಿಸಿ ಸೆ. 27ರಂದು ಭಾರತ್ ಬಂದ್; ಯಾವ ಸೇವೆ ಲಭ್ಯ? ಏನಿರುವುದಿಲ್ಲ?
ಇದನ್ನೂ ಓದಿ: ಸೆ 27ರ ಭಾರತ್ ಬಂದ್‌ಗೆ ಹಾವೇರಿ, ದಾವಣಗೆರೆ ರೈತ ಸಂಘಟನೆಗಳು, ಓಲಾ-ಊಬರ್ ಕಾರ್ಮಿಕರ ಬೆಂಬಲ
Published On - 3:05 pm, Sat, 25 September 21