ಕೋಲಾರ, ಆಗಸ್ಟ್ 19: ಮನೆಗೆ ನುಗ್ಗಿ ಕತ್ತು ಕೊಯ್ದು ಸರ್ಕಾರಿ ಶಾಲೆಯ ಶಿಕ್ಷಕಿ (teacher) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಆಗಸ್ಟ್ 14ರ ಸಂಜೆ ಮುಳಬಾಗಿಲು ನಗರದ ಮುತ್ಯಾಲಪೇಟೆಯಲ್ಲಿರು ಮನೆಯಲ್ಲಿ ಅವರ ಮಗಳ ಮುಂದೆಯೇ ಶಿಕ್ಷಕಿ ದಿವ್ಯಶ್ರೀ (43) ಕೊಲೆ ನಡೆದಿತ್ತು. ಎ1 ಆರೋಪಿ ರಂಜಿತ್, ರಾಹುಲ್, ನಂದೀಶ್ ಸೇರಿದಂತೆ ಒಟ್ಟು 8 ಆರೋಪಿಗಳ ಬಂಧನ ಮಾಡಲಾಗಿದೆ. ಬಂಧಿತರು ಮುಳಬಾಗಿಲು ಮೂಲದವರಾಗಿದ್ದಾರೆ.
ಆ.14ರಂದು ಆರೋಪಿಗಳು ಸಿನಿಮಾ ಸ್ಟೈಲ್ನಲ್ಲಿ ಮನೆ ಕಬ್ಜಾ ಮಾಡಲು ಮುಂದಾಗಿದ್ದಾರೆ. ಈ ವೇಳೆ ಶಿಕ್ಷಕಿ ದಿವ್ಯಶ್ರೀ ಬೆದರಿಕೆ ಹಾಕಿ ಅವರು ವಾಸವಿದ್ದ ಮನೆ ಬರೆದುಕೊಡುವಂತೆ ಹೆದರಿಸಿದ್ದಾರೆ. ಇದೇ ವೇಳೆ ಚಾಕುವಿನಿಂದ ಕತ್ತು ಕೊಯ್ದು ದಿವ್ಯಶ್ರೀ ಹತ್ಯೆ ಮಾಡಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾಹಿತಿ ನೀಡಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ಮಗಳೊಂದಿಗೆ ಇದ್ದಾಗಲೇ ತಾಯಿಯ ಕೊಲೆ: ಕತ್ತು ಕೊಯ್ದು ಶಿಕ್ಷಕಿಯ ಹತ್ಯೆಗೈದ ಮೂವರು ಹಂತಕರು
ಮುಳಬಾಗಿಲು ತಾಲ್ಲೂಕು ಮುಡಿಯನೂರು ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ದಿವ್ಯಶ್ರೀ ತಮ್ಮ ಮನೆಯಲ್ಲಿ ಮಗಳೊಂದಿಗೆ ಇದ್ದಾಗ ಮನೆಗೆ ನುಗ್ಗಿದ ಮೂರು ಜನ ಹಂತಕರು ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು. ಮನೆಯ ಮಹಡಿ ಮೇಲೆ ಓದುತ್ತಾ ಕುಳಿತಿದ್ದ ಮಗಳನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ. ಆದರೂ ಆಕೆ ಕೂಡಲೇ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಹಂತಕರು ಪರಾರಿಯಾಗಿದ್ದರು.
ಕೂಡಲೇ ಮಗಳು ಮನೆಯಲ್ಲಿ ನಡೆದ ಘಟನೆಯನ್ನು ತಂದೆ ಪದ್ಮನಾಭ ಅವರಿಗೆ ಪೋನ್ ಮಾಡಿ ತಿಳಿಸಿದ ವೇಳೆ ಘಟನೆ ಬಯಲಾಗಿದೆ. ದಿವ್ಯಶ್ರೀ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು, ಪತಿ ಪದ್ಮನಾಭ್ ಉದುಬತ್ತಿ ಬ್ಯುಸಿನೆಸ್ ಹಾಗೂ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಇನ್ನು ಮಗಳು ನಿಶಾ ರೇವಾ ಯೂನಿವರ್ಸಿಟಿಯಲ್ಲಿ ಬಿಇ ಪದವಿ ಮಾಡುತ್ತಿದ್ದಾರೆ. ಕೊಲೆಯಾದ ನಂತರ ಮನೆಯಲ್ಲಿ ಯಾವುದೇ ಒಡವೆ, ವಸ್ತ್ರ, ಹಣ ಯಾವುದೂ ಕಳುವಾಗಿಲ್ಲ ಹಾಗಾಗಿ ಇದು ಯಾರೋ ಉದ್ದೇಶಪೂರ್ವಕವಾಗಿ ಅಥವಾ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಬಗ್ಗೆ ಅನುಮಾನ ಮೂಡಿತ್ತು.
ಇದನ್ನೂ ಓದಿ: ಕೋಲಾರ: ಬಡ್ಡಿ ರಹಿತ ಸಾಲ ಕೊಡಿಸೋದಾಗಿ ಹಣ ಪಡೆದು ವಂಚನೆ; ಕಚೇರಿಗೆ ಮುತ್ತಿಗೆ ಹಾಕಿದ ಜನ
ಆದರೆ ಕುಟುಂಬಸ್ಥರನ್ನು ಕೇಳಿದ್ರೆ ಯಾರು ಯಾವ ಕಾರಣಕ್ಕಾಗಿ, ಯಾಕೆ ಕೊಲೆ ಮಾಡಿದ್ದಾರೆ ಅನ್ನೋದು ತಿಳಿಯುತ್ತಿಲ್ಲ ಎಂದಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಕೂಡಾ ಭೇಟಿ ನೀಡಿದ್ದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದರು. ಅಲ್ಲದೆ ಮುಳಬಾಗಿಲಿನಲ್ಲಿ ಮಾದಕ ವಸ್ತುಗಳ ವಹಿವಾಟು ಹೆಚ್ಚಾಗಿದ್ದು ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.