ಕೋಲಾರ ಟಿಕೆಟ್​: ಮುನಿಸು ಮರೆತು ಹೈಕಮಾಂಡ್ ನಿರ್ಧಾರ ಸ್ವಾಗತಿಸಿದ ಸಚಿವ ಮುನಿಯಪ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 30, 2024 | 5:59 PM

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ವಿ.ಗೌತಮ್​ಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಬಳಿಕ  ಮುನಿಸು ಮರೆತು ಹೈಕಮಾಂಡ್ ನಿರ್ಧಾರವನ್ನು ಸಚಿವ ಮುನಿಯಪ್ಪ ಸ್ವಾಗತಿಸಿದ್ದಾರೆ. ಯಾವುದೇ ತರಹದ ಬೇಸರ ನನಗೆ ಇಲ್ಲ ಎಂದು ಹೇಳಿದ್ದಾರೆ.

ಕೋಲಾರ ಟಿಕೆಟ್​: ಮುನಿಸು ಮರೆತು ಹೈಕಮಾಂಡ್ ನಿರ್ಧಾರ ಸ್ವಾಗತಿಸಿದ ಸಚಿವ ಮುನಿಯಪ್ಪ
ಸಚಿವ ಕೆ.ಹೆಚ್.ಮುನಿಯಪ್ಪ
Follow us on

ಬೆಂಗಳೂರು, ಮಾರ್ಚ್​ 30: ನಮ್ಮ ಬಣಕ್ಕೆ ಟಿಕೆಟ್ ಬೇಕು, ನಮಗೇ ಕೊಡ್ಬೇಕು ಎಂದು ಕೋಲಾರ ಕಾಂಗ್ರೆಸ್ ಟಿಕೆಟ್ ಪ್ರಹಸನ ಕಾಂಗ್ರೆಸ್​ ನಾಯಕರಿಗೆ ಭಾರೀ ತಲೆ ನೋವು ತಂದಿಟ್ಟಿತ್ತು. ಮುನಿಯಪ್ಪ (KH Muniyappa) ಅಳಿಯನಿಗೆ ಟಿಕೆಟ್ ಕೊಡುವುದಕ್ಕೆ ಮುಂದಾದಾಗ ರಮೇಶ್ ಬಣ ರಾಜೀನಾಮೆ ನೀಡಲು ಮುಂದಾಗಿದ್ದರು. ಇತ್ತ ರಮೇಶ್ ಬಣ ಹೇಳುತ್ತಿರುವ ಹೆಸರಿಗೆ ಮಣೆ ಹಾಕಿದರೆ ಮುನಿಯಪ್ಪಗೆ ಮುನಿಸು. ಇವರಿಬ್ಬರ ಸಿಟ್ಟನ್ನ ಶಮನ ಮಾಡುವಲ್ಲಿ ಸುಸ್ತಾಗಿ ಹೋಗಿದ್ದ ಕಾಂಗ್ರೆಸ್​ ನಾಯಕರು ಕೊನೆಗೆ 3ನೇ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಅಚ್ಚರಿ ಅಭ್ಯರ್ಥಿ ಕೆ.ವಿ.ಗೌತಮ್​ಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಬಳಿಕ  ಮುನಿಸು ಮರೆತು ಹೈಕಮಾಂಡ್ ನಿರ್ಧಾರವನ್ನು ಸಚಿವ ಮುನಿಯಪ್ಪ ಸ್ವಾಗತಿಸಿದ್ದಾರೆ.

ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ ಸಚಿವ ಮುನಿಯಪ್ಪ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೌತಮ್​ಗೆ ಟಿಕೆಟ್​ ನೀಡಿರುವುದನ್ನು ಸ್ವಾಗತಾರ್ಹ. ಟಿಕೆಟ್​ ಕೇಳಿದ್ದೆ, ಎಲ್ಲಾ ಶಾಸಕರು ಒಗ್ಗಟ್ಟಾಗಿ ಬರೋದಕ್ಕೆ ಆಗಲಿಲ್ಲ. ಹೀಗಾಗಿ ಬೇರೆಯವರಿಗೆ ಅನಿವಾರ್ಯವಾಗಿ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದು ನನಗೆ ಅನಿರೀಕ್ಷಿತವಾಗಿ ಬಂದ ಅವಕಾಶ: ಗೆದ್ದು ತೋರಿಸ್ತೇನೆ ಎಂದ ಕೋಲಾರ ಕೈ ಅಭ್ಯರ್ಥಿ

ಗೌತಮ್​ಗೆ ರಾಜಕೀಯ ಹಿನ್ನೆಲೆ ಇದೆ, ತಂದೆ ಮೇಯರ್ ಆಗಿದ್ದವರು. ಕಾಂಗ್ರೆಸ್ ಪಕ್ಷದ ಗೆಲುವಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಿದೆ. 7 ಬಾರಿ ಸಂಸದ, 10 ವರ್ಷಗಳ ಕಾಲ ಮಂತ್ರಿ, CWC ಸದಸ್ಯನಾಗಿದ್ದೆ. ಲೋಕಸಭೆಯಲ್ಲಿ ಸೋತ ಬಳಿಕ ಶಾಸಕನಾಗಿ ಮಾಡಿ ಮಂತ್ರಿ ಮಾಡಿದ್ದಾರೆ ಎಂದಿದ್ದಾರೆ.

ಟಿಕೆಟ್​ ತಪ್ಪಿಸಿದ ವಿರೋಧಿ ಬಣದ ವಿರುದ್ಧ ಮುನಿಯಪ್ಪ ಅಸಮಾಧಾನ

ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ನಮ್ಮ ಹೆಸರು ತೀರ್ಮಾನಿಸಿದ್ದರು. ನಮ್ಮಲ್ಲಿ ಒಮ್ಮತ ಅಭಿಪ್ರಾಯ ಬಾರದಿದ್ದಕ್ಕೆ ಕೆ.ವಿ.ಗೌತಮ್​ಗೆ ಕೊಟ್ಟಿದ್ದಾರೆ. ನಮಗೆ ಟಿಕೆಟ್ ತಪ್ಪಿಸಿದ್ದವರ ಬಗ್ಗೆ ಮಾತಾಡುವುದು ಬೇಡ. ನಾವೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು. ಆದ್ದರಿಂದ ಅವರು ಸಹ ಕೆಲಸ ಮಾಡಲಿ, ನಾನು ಕೆಲಸ ಮಾಡುತ್ತೇನೆ. ಅಂತಿಮವಾಗಿ ಕಾಂಗ್ರೆಸ್​ ಗೆಲ್ಲಬೇಕಲ್ವೇ? ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಳಿಯನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ

ನನ್ನ ಅಳಿಯನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಯಾವುದೇ ರೀತಿಯ ಬೇಸರವಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನೆಂದು ನಾನು ಮೊದಲಿನಿಂದಲೂ ಹೇಳ್ತಿದ್ದೇನೆ. ಹೈಕಮಾಂಡ್‌ ನನ್ನ ಕರೆದು ಮಾತನಾಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸಂತೋಷವಾಗಿ ಕೆಲಸ ಮಾಡುತ್ತೇನೆ. ನಾನೂ ಕೇಂದ್ರದಲ್ಲಿ ಕೆಲಸ ಮಾಡಿದ್ದೇನೆ, ಸ್ವಪ್ರತಿಷ್ಠೆಗಳು ಏನೂ ಇಲ್ಲ. ಈ ರೀತಿಯ ಘಟನೆಗಳು ನನಗೆ ಎರಡರಿಂದ ಮೂರು ಸಲ ಆಗಿದೆ. ನಾನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲ್ಲವೆಂದು ಮೊದಲೇ ಹೇಳಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಇಬ್ಬರ ಘಟಾನುಘಟಿ ನಾಯಕರ ಬಣ ಜಗಳದಲ್ಲಿ ಕೋಲಾರ ಟಿಕೆಟ್​​ ಗಿಟ್ಟಿಸಿಕೊಂಡ ಗೌತಮ್ ಯಾರು?

ಕೋಲಾರ ಮಾತ್ರವಲ್ಲ ಚಿಕ್ಕಬಳ್ಳಾಪುರದಲ್ಲೂ ಪಕ್ಷದ ಅಭ್ಯರ್ಥಿ ಗೆಲ್ಲಿಸ್ತೇವೆ. ದೇವನಹಳ್ಳಿಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಇದರಂತೆ ನಾನು ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:53 pm, Sat, 30 March 24