ಇಬ್ಬರ ಘಟಾನುಘಟಿ ನಾಯಕರ ಬಣ ಜಗಳದಲ್ಲಿ ಕೋಲಾರ ಟಿಕೆಟ್ ಗಿಟ್ಟಿಸಿಕೊಂಡ ಗೌತಮ್ ಯಾರು?
Who Is KV Gautam: ಕೋಲಾರ (Kolar) ಲೋಕಸಭೆ ಕ್ಷೇತ್ರದ (Lok Sabha Election 2024) ಕಾಂಗ್ರೆಸ್ ಟಿಕೆಟ್ ಸಂಬಂಧ ಕಾಂಗ್ರೆಸ್ನಲ್ಲಿ ನಡೆದ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಚಿವ ಕೆಎನ್ ಮುನಿಯಪ್ಪ ಬಣ ನಡುವೆ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆದಿದ್ದು, ಅಂತಿಮವಾಗಿ ಹೈಕಮಾಂಡ್ ಎರಡೂ ಬಣ ಬಿಟ್ಟು ಮೂರನೇ ವ್ಯಕ್ತಿಗೆ ಮಣೆ ಹಾಕಿದೆ, ಈ ಹಿನ್ನೆಲೆಯಲ್ಲಿ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಕ್ಕೆ ಮುಖಭಂಗವಾಗಿದೆ., ಹಾಗಾದ್ರೆ, ಸೈಲೆಂಟ್ ಆಗಿ ಟಿಕೆಟ್ ಗಿಟ್ಟಿಸಿಕೊಂಡು ಕೆ.ವಿ ಗೌತಮ್ ಯಾರು ಎನ್ನುವ ವಿವರ ಇಲ್ಲಿದೆ.
ಕೋಲಾರ, ಮಾರ್ಚ್ 30): ತೀವ್ರ ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕಾಂಗ್ರೆಸ್ ಟಿಕೆಟ್ ಕೊನೆಗೂ ಹೈಕಮಾಂಡ್ ಮೂರನೇ ವ್ಯಕ್ತಿಗೆ ನೀಡಿದೆ. ಸಚಿವ ಕೆಎಚ್ ಮುನಿಯಪ್ಪ (KH Muniyappa) ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಬಣ ಗುದ್ದಾಟ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ವಿ ಗೌತಮ್ ಎಂಬುವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ಗಾಗಿ ಗುದ್ದಾಡುತ್ತಿದ್ದ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಕ್ಕೆ ತೀವ್ರ ಮುಖಂಭಗವಾಗಿದೆ. ಟಿಕೆಟ್ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಕೊಡಬೇಕು ಎಂದು ಕೆ.ಎಚ್. ಮುನಿಯಪ್ಪ ಪಟ್ಟು ಹಿಡಿದಿದ್ದರು. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎಂದು ರಮೇಶ್ ಕುಮಾರ್, ಎಂಸಿ ಸುಧಾಕರ್ ಟೀಮ್ ಪಟ್ಟು ಹಿಡಿದಿತ್ತು. ಹೀಗಾಗಿ ಉಭಯ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಈ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಇಬ್ಬರ ಜಗಳದ ನಡುವೆ ಟಿಕೆಟ್ ಗಿಟ್ಟಿಸಿಕೊಂಡ ಕೆ.ವಿ. ಗೌತಮ್ ಯಾರು ಎನ್ನುವುದನ್ನು ನೋಡಿದರೆ ಅವರಿಗೆ ರಾಜಕೀಯ ಹಿನ್ನೆಲೆ ಇದೆ. ಗೌತಮ್ ಅವರ ತಂದೆ ಈ ಹಿಂದೆ ಬಿಬಿಎಂಪಿ ಮೇಯರ್ ಆಗಿದ್ದವರು. ಇನ್ನು ಗೌತಮ್ ಸಹ ಕಾಂಗ್ರೆಸ್ ಯುವ ಘಟಕದಿಂದ ಬಂದಿದ್ದಾರೆ.
ಇದನ್ನೂ ಓದಿ: ಇದು ನನಗೆ ಅನಿರೀಕ್ಷಿತವಾಗಿ ಬಂದ ಅವಕಾಶ: ಗೆದ್ದು ತೋರಿಸ್ತೇನೆ ಎಂದ ಕೋಲಾರ ಕೈ ಅಭ್ಯರ್ಥಿ
ಯಾರು ಈ ಕೆ.ವಿ ಗೌತಮ್?
48 ವರ್ಷದ ಕೆವಿ ಗೌತಮ್ ಅವರು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಬಿಇ ಸಿವಿಲ್ ಇಂಜಿನಿಯರ್ ಪದವಿ ಮುಗಿಸಿದ್ದಾರೆ. ಇನ್ನು ಇವರ ತಂದೆ ಕೆ.ಸಿ ವಿಜಯ್ 1991ರಲ್ಲಿ ಬೆಂಗಳೂರು ಮೇಯರ್ ಆಗಿದ್ದರು. ಬಳಿಕ 2002ರಲ್ಲಿಎಸ್ಸಿ ಎಸ್ಟಿ ಕಾರ್ಪೊರೇಷನ್ ಡೆವಲಪ್ಮೆಂಟ್ ಚೇರ್ಮನ್ ಆಗಿದ್ದರು.
- KV ಗೌತಮ್ ದಲಿತ ಎಡ ಸಮುದಾಯಕ್ಕೆ ಸೇರಿದ ನಾಯಕ
- KV ಗೌತಮ್ ಹಾಗೂ ತಂದೆ ವಿಜಯ್ ಕುಮಾರ್ ಇಬ್ಬರು ಮಲ್ಲಿಕಾರ್ಜುನ ಖರ್ಗೆ ಆಪ್ತರು.
- ಎನ್ಎಸ್ ಯುಐ ನಲ್ಲಿ ಕಾರ್ಯರ್ಶಿಯಗಿದ್ದರು.
- ಯುವ ಕಾಂಗ್ರೆಸ್ ಕಾರ್ಯದರ್ಶಿ ಆಗಿರುವ KV ಗೌತಮ್
- ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡ್ತಿದ್ದಾರೆ.
ಕಳೆದ ನಾಲ್ಕೈದು ದಿನದಿಂದ ನಡೆದಿತ್ತು ಭಾರಿ ರಾಜಕೀಯ ಪ್ರಹಸನ
ಕೋಲಾರ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದ ಕಳೆದ ನಾಲ್ಕೈದು ದಿನದಿಂದ ಬಾರೀ ಹೈಡ್ರಾಮಾಗಳೇ ನಡೆದಿದ್ದವು. ರಾಜಕೀಯ ಪ್ರಹಸನ ನಡೆಸಿದ್ದ ಶಾಸಕರು, ವಿಧಾನಪರಿಷತ್ತಿನ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ವಿಶೇಷ ಎಂದರೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಬಣದ ಮುಂಚೂಣಿಯಲ್ಲಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಿದ ಬಳಿಕ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಮೂರನೇ ವ್ಯಕ್ತಿಗೆ ಟಿಕೆಟ್ ನೀಡುವ ಬಗ್ಗೆ ಸುಳಿವು ನೀಡಿದ ಪ್ರದೀಪ್ ಈಶ್ವರ್
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಚ್ಚರಿಯ ಅಭ್ಯರ್ಥಿಯನ್ನು ಪ್ರಕಟಿಸಿ ಗಮನಸೆಳೆದಿದೆ. ಈ ವಿಚಾರವಾಗಿ ನಿನ್ನೆ (ಮಾರ್ಚ್ 29) ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತ, ಕೋಲಾರದಲ್ಲಿ ಇಬ್ಬರ ಜಗಳದ ಕಾರಣ ಮೂರನೆಯವರಿಗೆ ಪಕ್ಷ ಟಿಕೆಟ್ ನೀಡುವ ಸಾಧ್ಯತೆ ಇದೆ. ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ ಎಂದು ಸೂಚ್ಯವಾಗಿ ಕೆ ಎಚ್ ಮುನಿಯಪ್ಪ ಅಥವಾ ಅವರ ಅಳಿಯನಿಗೆ ಟಿಕೆಟ್ ಸಿಗಲ್ಲ ಎಂಬುದನ್ನು ಸುಳಿವು ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.