ಆತಂಕಕಾರಿ ಬೆಳವಣಿಗೆ: ಗಡಿ ಜಿಲ್ಲೆ ಕೋಲಾರದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ನೂರರತ್ತ! ಕಾರಣವೇನು
ಗಡಿ ಜಿಲ್ಲೆಯಾಗಿರುವ ಕೋಲಾರದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರನ್ನು ರಕ್ಷಿಸಲು ರಾಜ್ಯ ಸರ್ಕಾರ ಸಮಿತಿಗಳನ್ನು ರಚನೆ ಮಾಡಿದೆ. ಆದ್ರೆ ಸಮನ್ವಯ ಹಾಗೂ ಪರಿಶೀಲನಾ ಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು, ಕೋಲಾರದಲ್ಲಿ ಎಂಟು ತಿಂಗಳಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಶತಕದ ಅಂಚಿಗೆ ತಲುಪಿರುವ ಆತಂಕಕಾರಿ ಅಂಶ ಬಯಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೋಲಾರಕ್ಕೆ ಆಗಮಿಸಿದ್ದಾಗ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಜಿಲ್ಲೆಯ ಪ್ರಗತಿ ಕುರಿತು ಮಾಹಿತಿ ಸಂಗ್ರಹ ಮಾಡಿದ್ರು. ಸಭೆಯಲ್ಲಿ ಅಪ್ರಾಪ್ತರು ಗರ್ಭೀಣಿಯಾಗುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಕೇಳಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ರು. ಕೋಲಾರ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ಸುಮಾರು 98 ಬಾಲಕಿಯರು ಗರ್ಭಿಣಿಯರಾಗಿರುವ ಪ್ರಕರಣಗಳಾಗಿರುವ ವಿಷಯ ಕೇಳಿ ಸಿಎಂ ಸಿದ್ದರಾಮಯ್ಯ ಶಾಕ್ ಆಗಿದ್ರು.
ಕೋಲಾರದಲ್ಲಿ ಕೇವಲ 8 ತಿಂಗಳಲ್ಲಿ ಸುಮಾರು 98 ಅಪ್ರಾಪ್ತೆಯರು ಗರ್ಭಿಣಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೋಲಾರ ಜಿಲ್ಲೆ ಆಂಧ್ರ ಮತ್ತು ತಮಿಳುನಾಡಿನ ಗಡಿಯನ್ನು ಹೊಂದಿಕೊಂಡಿರುವ ಜಿಲ್ಲೆಯಾಗಿದ್ದು, 18 ವರ್ಷ ತುಂಬುವ ಮುನ್ನವೇ ಗರ್ಭಿಣಿ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಎಂಟೇ ತಿಂಗಳಲ್ಲಿ 98 ಈ ರೀತಿಯ ಪ್ರಕರಣಗಳು ದಾಖಲಾಗಿದ್ದು, ಇದರ ಮಾಹಿತಿಯನ್ನು ಪಡೆದ ಸಿಎಂ ಸಿದ್ದರಾಮಯ್ಯ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ರು. ಇದಾದ ನಂತರ ಈಗಾಗಲೇ ಈ ಸಂಬಂಧ 39 ಪ್ರಕರಣಗಳು ದಾಖಲಾಗಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇನ್ನು ಆತಂಕಕಾರಿ ವಿಚಾರ ಜಿಲ್ಲೆಯ ಆರೋಗ್ಯ ಇಲಾಖೆಯ ಆರ್.ಸಿ.ಎಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ) ಪೋರ್ಟಲ್‌ನಲ್ಲಿ 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ದಾಖಲಾಗಿರುವ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. 2021-22ನೇ ಸಾಲಿನಲ್ಲಿ 123 ಪ್ರಕರಣ ದಾಖಲಾಗಿದ್ದು, ಈ ವರ್ಷ ಮುಳಬಾಗಿಲು ಹಾಗೂ ಮಾಲೂರು ತಾಲ್ಲೂಕಿನ 14 ರ ಪ್ರಾಯದ ಇಬ್ಬರು ಬಾಲೆಯರು ಗರ್ಭಿಣಿಯರಾಗಿರುವುದು ಗೊತ್ತಾಗಿದೆ.
Also Read: ಕೇರಳದಲ್ಲಿ 12 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ ಸಹೋದರ.. ಕೋರ್ಟಿನ ಮೊರೆ ಹೋದ ಪಾಲಕರು
ಗರ್ಭಿಣಿಯರು ತಾಯಿ ಕಾರ್ಡ್ ಪಡೆಯಲು ಬಂದಾಗ ಅವರ ವಯಸ್ಸು ತಿಳಿಯುತ್ತದೆ. ಇನ್ನು ಜಿಲ್ಲೆಯು ಗಡಿ ಭಾಗದಲ್ಲಿರುವುದರಿಂದ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ಪ್ರಕರಣ ಹೆಚ್ಚುತ್ತಿದ್ದು, 18 ವರ್ಷದೊಳಗಿನ ಗರ್ಭಿಣಿಯರ ಪ್ರಕರಣ ನೋಂದಣಿ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ಕೊಡುತ್ತಿದ್ದಾರೆ.
ಬಾಲ ಗರ್ಭಿಣಿ ಪ್ರಕರಣಗಳ ನಮ್ಮ ಗಮನಕ್ಕೆ ಬಂದಾಗ ನೋಂದಣಿ ಮಾಡಿ ಮೊದಲು ಅವರಿಗೆ ಅಗತ್ಯ ಚಿಕಿತ್ಸೆ, ಔಷಧ ಕೊಡುತ್ತೇವೆ. ಪ್ರಸ್ತಕ ಸಾಲಿನಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಮಾಲೂರು 27, ಬಂಗಾರಪೇಟೆ 24 ಹಾಗೂ ಕೋಲಾರ 22 ಇದ್ದು ಈ ಮೂರು ತಾಲ್ಲೂಕಿನಲ್ಲಿ ಹೆಚ್ಚಿರುವುದು ಕಂಡುಬಂದಿದೆ. ಅದರಂತೆ ಪೋಕ್ಸೊ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಒಟ್ಟಾರೆ ಗಡಿ ಜಿಲ್ಲೆಯಾಗಿರುವ ಕೋಲಾರದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ