ಪಿಎಸ್ಐ ನೇಮಕಾತಿ ಹಗರಣವನ್ನೇ ಇನ್ನೂ ಜೀರ್ಣಿಸಿಕೊಳ್ಳಲು ಆಗಿಲ್ಲ, ಈ ಮಧ್ಯೆ ರಾಜ್ಯದಲ್ಲಿ ಮತ್ತೊಂದು ನೇಮಕಾತಿ ಹಗರಣ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಡೆದ ನೇಮಕಾತಿ ಹಗರಣ ಇನ್ನೂ ತನಿಖೆ ಪೂರ್ಣವಾಗುವ ಮೊದಲೇ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಮತ್ತೊಂದು ಶಿಫಾರಸ್ಸು ಆಧಾರದ ಮೇಲೆ ನೇಮಕಾತಿ ಹಗರಣ (recruitment scam) ನಡೆದಿರುವ ವಾಸನೆ ಬರುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿಯೊಂದು ಅಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೇಮಕಾತಿ ಪಟ್ಟಿ, ಅಭ್ಯರ್ಥಿಗಳ ಹೆಸರಿನ ಪಕ್ಕದಲ್ಲೇ ಜಿಲ್ಲೆಯ ಶಾಸಕರ ಹಾಗೂ ಹಾಲು ಒಕ್ಕೂಟದ ನಿರ್ದೇಶಕರುಗಳ ಶಿಫಾರಸ್ಸು ಮಾಡಿರುವ ಹೆಸರುಗಳು, ಮತ್ತೊಂದಡೆ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲವೆಂದು ಸಮಜಾಯಿಷಿ ನೀಡುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (Kolar Chikkaballapur Milk Union) ಅಧ್ಯಕ್ಷರು ಮತ್ತು ನಿರ್ದೇಶಕರುಗಳು,ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು ಕೋಲಾರದಲ್ಲಿ.
ಹೌದು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಖಾಲಿಯಿರುವ 81 ಹುದ್ದೆಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು, ಇದಾದ ನಂತರ ಲಿಖಿತ ಪರೀಕ್ಷೆ ಸಹ ನಡೆದಿದ್ದು, ಇನ್ನೇನು ಸಂದರ್ಶನ ಮುಗಿದಿದ್ದು ಅಂತಿಮ ಪಟ್ಟಿ ಇನ್ನರೆಡು ದಿನಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇಲ್ಲಿ ಕೆಲಸ ಬೇಕೆಂದ್ರೆ ಖಡ್ಡಾಯವಾಗಿ ಒಕ್ಕೂಟದ ನಿರ್ದೇಶಕರುಗಳು ಹಾಗೂ ಶಾಸಕರುಗಳ ಕೆಲವು ಶಿಫಾರಸ್ಸು ಇರಬೇಕು ಎನ್ನುವ ಅಭ್ಯರ್ಥಿಗಳ ಹೆಸರ ಮುಂದೆ ಶಿಫಾರಸ್ಸು ಮಾಡಿರುವ ಮುಖಂಡರ ಹೆಸರಿರುವ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ ಹಿನ್ನೆಲೆಯಲ್ಲಿ ನೇಮಕಾತಿಯಲ್ಲಿ ಲಕ್ಷ ಲಕ್ಷ ಡೀಲ್ ನಡೆದಿರುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಶಿಫಾರಸ್ಸುಗಳ ಪಟ್ಟೆಯಲ್ಲಿ ಒಕ್ಕೂಟದ ನಿರ್ದೇಶಕರು ಸೇರಿ ಡಿಸಿಎಂ ಡಿಕೆ ಶಿವಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೆಲ ನಿರ್ದೇಶಕರುಗಳ ಹೆಸರು ಬರೆಯಲಾಗಿದೆ. ಇನ್ನು ಒಂದೊಂದು ಹುದ್ದೆಗೆ ಸುಮಾರು 40 ರಿಂದ 60 ಲಕ್ಷ ರೂ.ಗಳು ಪಡೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಒಟ್ಟು 81 ಹುದ್ದೆಗಳಿಗೆ ಸುಮಾರು 44 ಕೋಟಿಯಷ್ಟು ಸಂಗ್ರಹ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನು ರಾಜ್ಯದಲ್ಲಿ ಕಮೀಷನ್ ಮತ್ತು ವರ್ಗಾವಣೆ ದಂಧೆ ಆರೋಪ ಕೇಳಿ ಬರುತ್ತಿರುವಾಗಲೇ ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಸರ್ಕಾರಕ್ಕೆ ಹಾಗೂ ಒಕ್ಕೂಟಕ್ಕೂ ಮುಜಗರ ತಂದಿದೆ. ಕಾರಣ ಒಕ್ಕೂಟದ ಅಧ್ಯಕ್ಷರು ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗಡರು ಇರುವ ಹಿನ್ನೆಲೆಯಲ್ಲಿ ಇದು ಸರ್ಕಾರಕ್ಕೆ ಮುಜುಗರ ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಈ ಹಿನ್ನೆಲೆಯಲ್ಲಿ ಹಗರಣದ ಕುರಿತು ಟಿವಿ9 ವರದಿ ಪ್ರಸಾರ ಮಾಡಿದ ತಕ್ಷಣವೇ ಒಕ್ಕೂಟದಲ್ಲಿ ಇಂದು ನಿರ್ದೇಶಕರುಗಳ ಆಡಳಿತ ಮಂಡಳಿಯ ಸಭೆ ಕರೆದು ನಡೆದ ವಿದ್ಯಮಾನಗಳ ಕುರಿತು ಚರ್ಚೆ ಮಾಡಲಾಗಿದೆ.
Also Read: ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ಬಳ್ಳಾರಿಯಲ್ಲಿಯೂ ಅಶಾಂತಿ ಸೃಷ್ಟಿಸುವ ವಿಫಲ ಯತ್ನ ನಡೆದಿತ್ತು- NIA
ಜೊತೆಗೆ ಈ ಕುರಿತು ಎಲ್ಲಾ 13 ನಿರ್ದೇಶಕರುಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅಧ್ಯಕ್ಷ ಕೆ.ವೈ.ನಂಜೇಗೌಡ, ಯಾವುದೇ ಅಕ್ರಮ ನಡೆದಿದಲ್ಲ ಎಲ್ಲವನ್ನು ಪಾರದರ್ಶಕ ವಾಗಿ ಮಾಡಲಾಗಿದೆ. ಒಕ್ಕೂಟದಲ್ಲಿ 81 ಪೋಸ್ಟ್ ಗೆ ನೇಮಕಾತಿ ಕರೆಯಲಾಗಿದೆ. ಇದರಲ್ಲಿ 1:5 ಅನುಪಾದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ನೇಮಕಾತಿ ಆದೇಶ ಇನ್ನು ಫೈನಲ್ ಆಗಿಲ್ಲ. ಒಕ್ಕೂಟಕ್ಕೆ ಕೆಟ್ಟ ಹೆಸರು ತರಲು ಕೆಲವರು ಈ ಕೆಲಸ ಮಾಡಿದ್ದಾರೆ. ಬೋಗಸ್ ಪಟ್ಟಿ ಮಾಡಿಕೊಂಡು ಕೆಲವರು ಜಾಲತಾಣಗಳಲ್ಲಿ ಬಿಟ್ಟಿದ್ದು, ಕಾನೂನಾತ್ಮಕವಾಗಿ ಫೈನಲ್ ಪಟ್ಟಿ ಪ್ರಕಟ ಆದ್ಮೇಲೆ ಗೊತ್ತಾಗುತ್ತೆ, ಇನ್ನು ಇವತ್ತಿನ ಆಡಳಿತ ಮಂಡಳಿ ಸಭೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ ಲಾಗಿರುವ ಪಟ್ಟಿಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿಯೂ ಒಕ್ಕೂಟದ ಅಂತಿಮ ಪಟ್ಟಿಯೂ ಒಂದೇ ಆಗಿದ್ರೆ ಇಲ್ಲಿ ಅಕ್ರಮ ನಡೆದಿದೆ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಹಲವಾರು ಅಕ್ರಮಗಳ ವಾಸನೆ ಬರುತ್ತಿರುವಾಗಲೇ ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬರುತ್ತಿರುವುದು ಸರ್ಕಾರಕ್ಕೆ ಮುಜಗರ ತಂದಿರುವುದಂತೂ ಸುಳ್ಳಲ್ಲ, ರೈತರ ಸಂಸ್ಥೆಯಾಗಿರುವ ಒಕ್ಕೂಟದಲ್ಲಿ ಅಕ್ರಮ ನಡೆದ್ದೀಯಾ ಇಲ್ಲವೋ ಎಂಬುದು ಸದ್ಯ ಒಕ್ಕೂಟದ ನೇಮಕಾತಿ ಪಟ್ಟಿ ಹೊರಬಿಟ್ಟ ನಂತರವಷ್ಟೇ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.