ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸಾಲಗಾರನಾದ ತಂದೆ, ನಿಜ ಬಣ್ಣ ಬಯಲಾಗುವ ಭಯದಲ್ಲಿ ಹೆತ್ತ ಮಗನನ್ನೇ ಸಾಯಿಸಿಬಿಟ್ಟ!
ಕಾಣೆಯಾಗಿದ್ದ ಮಗ ಸಾವನ್ನಪ್ಪಿದ್ದಾನೆ, ಅದೂ ತನ್ನ ತಂದೆಯಿಂದಲೇ ಕೊಲೆಯಾಗಿ ಹೋಗಿದ್ದಾನೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ತಾಯಿ ಲಕ್ಷ್ಮೀದೇವಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು. ಹತ್ತಾರು ಜನ ಹಿಡಿದರೂ ಸಮಾಧಾನ ಪಡಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಮನುಷ್ಯತ್ವ ಮರೆತು ತನ್ನ ಮಗನನ್ನು ಕೊಂದ ಮಣಿಕಂಠನನ್ನು ತಾನೇ ಕೊಲೆ ಮಾಡುವುದಾಗಿ ಆಕ್ರೋಶಭರಿತಳಾಗಿದ್ದಳು.
ಅದೊಬ್ಬ ತಂದೆ ನಿರಾಯಾಸವಾಗಿ ಹಣ ಮಾಡೋದಕ್ಕೆಂದು ಹೋಗಿ ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಹಾಳಾಗಿದ್ದ, ಹೀಗೆ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಅಪ್ಪನಿಗೆ ಸಿಂಹಸ್ವಪ್ನವಾಗಿದ್ದ ಮಗ, ಅಪ್ಪನ ಬೆಟ್ಟಿಂಗ್ ವಿಷಯವನ್ನು ಎಲ್ಲಿ ಮನೆಯವರ ಮುಂದೆ ಬಯಲು ಮಾಡಿಬಿಡುತ್ತಾನೋ ಎನ್ನುವ ಭಯದಲ್ಲಿ ತನ್ನ ಕೈಯಾರೆ ಸಾಕಿ ಬೆಳೆಸಿದ್ದ ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಂದು ಮಲಗಿಸಿದ್ದಾನೆ.
ಶಾಲೆಗೆಂದು ಹೋಗಿದ್ದ ಯುವಕ ನಾಪತ್ತೆಯಾಗಿ ಹೋಗಿದ್ದ..!
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾದರಕಲ್ಲು ಗ್ರಾಮದ ಮಣಿಕಂಠ ಹಾಗೂ ಲಕ್ಷ್ಮೀದೇವಮ್ಮ ಎಂಬುವರ ಮಗ ನಿಖಿಲ್ ಕುಮಾರ್ ಆರನೇ ತರಗತಿ ಓದುತ್ತಿದ್ದ. ಸೋಮವಾರ ಎಂದಿನಂತೆ ಶಾಲೆಗೆ ಪಕ್ಕದೂರಿನ ಹಿರೇಕಟ್ಟಿಗೇನಹಳ್ಳಿ ಗ್ರಾಮಕ್ಕೆ ಶಾಲೆಗೆಂದು ಹೋಗುತ್ತಿದ್ದ ಈ ವೇಳೆ ತಂದೆ ಮಣಿಕಂಠ ಮಗನನ್ನು ಶಾಲೆಗೆ ಬಿಡುವುದಾಗಿ ಹೇಳಿ ತನ್ನ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದ. ಆದರೆ ಶಾಲೆಗೆಂದು ಹೋಗಿದ್ದ ನಿಖಿಲ್ ಕುಮಾರ್ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ವೇಳೆ ತಂದೆ ಮಣಿಕಂಠ ಸೇರಿದಂತೆ ಸಂಬಂಧಿಕರೆಲ್ಲರೂ ನಿಖಿಲ್ ಕುಮಾರ್ಗಾಗಿ ಅಕ್ಕಪಕ್ಕದ ಗ್ರಾಮದಲ್ಲಿ ಕೆರೆ ಕಟ್ಟೆ, ಬೆಟ್ಟ ಗುಡ್ಡಗಳಲ್ಲಿ ಹುಡುಕಾಟ ನಡೆಸಿ ಕೊನೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮೌಕಿಕ ದೂರು ನೀಡಿ ಬಂದಿದ್ದರು. ಆದರೆ ನಿಖಿಲ್ ಕುಮಾರ್ ಸುಳಿವು ಸಿಕ್ಕಿರಲಿಲ್ಲ.
ಬೆಳ್ಳಂಬೆಳಿಗ್ಗೆಯೇ ಶೆಟ್ಟಿಮಾದಮಂಗಲ ಕೆರೆಯಲ್ಲಿ ಶವವಾಗಿ ಪತ್ತೆ..!
ಮಂಗಳವಾರ ಬೆಳಗ್ಗೆ ಕೋಲಾರ ತಾಲ್ಲೂಕು ಶೆಟ್ಟಿಮಾದಮಂಗಲ ಗ್ರಾಮದ ಕೆರೆಯಲ್ಲಿ 12 ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದೆ. ಮೃತ ಬಾಲಕ ಯಾರೆಂದು ವಿಚಾರಣೆ ಮಾಡಲಾಗಿ, ಮೃತ ಬಾಲಕ ಚಿಂತಾಮಣಿ ತಾಲ್ಲೂಕು ಮಾದರಕಲ್ಲು ಗ್ರಾಮದ ಮಣಿಕಂಠ ಹಾಗೂ ಲಕ್ಷ್ಮೀದೇವಮ್ಮ ಎಂಬುವರ ಮಗ ನಿಖಿಲ್ ಕುಮಾರ್ ಅನ್ನೋದು ತಿಳಿದು ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ ನಿಖಿಲ್ ಕುಮಾರ್ ಪೊಷಕರು ಓಡೋಡಿ ಬಂದಿದ್ದರು. ಮೃತ ಬಾಲಕನನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಮಧ್ಯೆ, ಸ್ಥಳಕ್ಕೆ ಮೃತ ನಿಖಿಲ್ ಕುಮಾರ್ ತಾತ ಮುನಿಯಪ್ಪ ಹಾಗೂ ಮಾವ ಮಾರುತಿ ಓಡೋಡಿ ಬಂದರಾದರೂ ತಂದೆ ಮಣಿಕಂಠ ಮಾತ್ರ ಸ್ಥಳಕ್ಕೆ ಬಂದಿರಲಿಲ್ಲ!
ನಿಖಿಲ್ನನ್ನು ಅವನ ತಂದೆಯೇ ಕೊಂದುಹಾಕಿರುವುದಾಗಿ ಹೇಳಿದ ತಾತ ಮುನಿಯಪ್ಪ..!
ನಿಖಿಲ್ ಶವ ಶೆಟ್ಟಿಮಾದಮಂಗಲ ಕೆರೆಯಲ್ಲಿ ಸಿಕ್ಕಿದೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ಏಕಾಏಕಿ ಸ್ಥಳಕ್ಕೆ ಬಂದು ಮಗುವಿನ ಶವವನ್ನು ನೋಡುತ್ತಿದ್ದಂತೆ ನಿಖಿಲ್ ತಾತ ಮುನಿಯಪ್ಪ ಅವರು ನಿಖಿಲ್ನನ್ನು ಅವನ ತಂದೆಯೇ ಕೊಂದು ಹಾಕಿರುವುದಾಗಿ ಹೇಳಿದ್ದರು. ಅಷ್ಟೊತ್ತಿಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಈ ವಿಷಯ ಕೇಳಿ ಒಂದು ಕ್ಷಣ ಎಲ್ಲರಿಗೂ ಗಾಬರಿಯಾಗಿತ್ತು.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ತಂದೆ ಮಣಿಕಂಠ ಮಗನನ್ನೇ ಕೊಂದಿದ್ದೇಕೆ ಅಸಲು ಕಥೆ ಏನು..!
ಮಣಿಕಂಠ ಊರಿನಲ್ಲಿ ಒಂದು ಸಲೂನ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದವ. ಹಲವಾರು ವರ್ಷಗಳಿಂದ ಅವನಿಗೆ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಜೂಜಾಡುವ ಚಟ ಇತ್ತು. ಈಗಾಗಲೇ ನಾಲ್ಕೈದು ಬಾರಿ ಸಾಲ ಮಾಡಿಕೊಂಡು ಊರು ಬಿಟ್ಟು ಹೋಗಿದ್ದ. ಮಣಿಕಂಠ ಮಾಡಿದ್ದ ಸಾಲವನ್ನೆಲ್ಲಾ ಅವರ ಮಾವ ಮುನಿಯಪ್ಪ ತೀರಿಸಿ, ಮತ್ತೆ ಊರಿಗೆ ಕರೆದುಕೊಂಡು ಬಂದಿದ್ದರು. ಆದರೆ, ಮಣಿಕಂಠ ಮಾತ್ರ ಹಳೇ ಚಾಳಿ ಬಿಟ್ಟಿರಲಿಲ್ಲ. ಮತ್ತೆ ಕ್ರಿಕೆಟ್ ಬೆಟ್ಟಿಂಗ್ ಆಡಿ ಸಾಲ ಮಾಡಿಕೊಂಡಿದ್ದ.
ಕಳೆದ ಶನಿವಾರ ಊರ ಬಳಿ ಸಾಲಗಾರರು ಹಣ ವಾಪಸ್ ಕೊಡುವಂತೆ ಬಾಯಿಗೆ ಬಂದಂತೆ ತಂದೆ ಮಣಿಕಂಠನನ್ನು ಬೈದಿದ್ದಾರೆ. ಅದನ್ನು ನೋಡಿದ್ದ ನಿಖಿಲ್ ಕುಮಾರ್ ಮನೆಗೆ ಹೋಗಿ ತಾಯಿ ಲಕ್ಷ್ಮೀದೇವಮ್ಮನಿಗೆ ಹೇಳಿದ್ದಾನೆ. ಇದರಿಂದ ಮನೆಯಲ್ಲಿ ಮಣಿಕಂಠ ಹಾಗೂ ಲಕ್ಷ್ಮೀದೇವಮ್ಮರ ನಡುವೆ ಗಲಾಟೆ ನಡೆದಿದೆ. ಇದಕ್ಕೆ ಕೋಪಗೊಂಡಿದ್ದ ಮಣಿಕಂಠ ಸೋಮವಾರ ಶಾಲೆಗೆಂದು ಸ್ಕೂಲಿನತ್ತ ಹೊರಟಿದ್ದ ನಿಖಿಲ್ ಕುಮಾರ್ನನ್ನು ಶಾಲೆಗೆ ಬಿಡ್ತೀನಿ ಬಾ ಎಂದು ಹೇಳಿ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿ… ಮಾಡಬಾರದ್ದನ್ನು ಮಾಡಿಬಂದಿದ್ದಾನೆ.
ಹಿರೇಕಟ್ಟಿಗೇನಹಳ್ಳಿ ಗ್ರಾಮದ ಶಾಲೆಗೆ ಹೋಗಬೇಕಿದ್ದ ಮಗನನ್ನು ಸೀದಾ ಶೆಟ್ಟಿಮಾದಮಂಗಲ ಕೆರೆಯ ಬಳಿ ಕೆರೆದುಕೊಂಡು ಬಂದು ನೀರಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ. ನಂತರ ಅವನ ಸ್ಕೂಲ್ ಬ್ಯಾಕ್ನನ್ನು ಬೇರೊಂದು ನೀಲಗಿರಿ ತೋಪಿನಲ್ಲಿ ಬಿಸಾಡಿ ಮನೆಗೆ ಬಂದಿದ್ದ. ನಂತರ ಸಂಜೆ ವೇಳೆ ಮಗ ಮನೆಗೆ ಬಂದಿಲ್ಲ ಎಂದು ಎಲ್ಲರಿಗೂ ಪೋನ್ ಮಾಡಿ ನಾಪತ್ತೆಯಾಗಿದ್ದಾನೆ ಅನ್ನೋ ವದಂತಿ ಸೃಷ್ಟಿಮಾಡಿದ್ದ.
ತಂದೆಯೇ ಕೊಲೆ ಮಾಡಿದ್ದಾನೆ ಅನ್ನೋ ಅನುಮಾನ ಬಂದಿದ್ದೇಗೆ..!
ಸೋಮವಾರ ಶಾಲೆಗೆ ಹೊರಟಿದ್ದ ಮಗನನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದನ್ನು ಕೆಲವರು ಗಮನಿಸಿದ್ದರು. ಅಲ್ಲದೆ ಸ್ವತ: ಮಣಿಕಂಠನೇ ತಾನೇ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾಗಿ ಹೇಳಿದ್ದ. ಈ ವೇಳೆ ಅನುಮಾನ ಬಂದು ಹಾಲಿನ ಡೈರಿಯಲ್ಲಿದ್ದ ಸಿಸಿಟಿವಿ ಕ್ಯಾಮರಾ ಪರೀಕ್ಷೆ ಮಾಡಿದಾಗ ಹಿರೇಕಟ್ಟಿಗೇನಹಳ್ಳಿಗೆ ಶಾಲೆಗೆ ಹೋಗದೆ ಮಣಿಕಂಠ ಜೇಡರಹಳ್ಳಿಯತ್ತ ಹೋಗಿದ್ದ. ಹೋಗುವಾಗ ಮಣಿಕಂಠ ತನ್ನ ಮಗನನ್ನೂ ಕರೆದುಕೊಂಡು ಹೋಗಿದ್ದ. ವಾಪಸ್ ಈ ರಸ್ತೆಯಲ್ಲಿ ಬಂದೇ ಇರಲಿಲ್ಲ. ಅಲ್ಲದೆ ಮೊದಲಿನಿಂದಲೂ ಮಣಿಕಂಠ ತನ್ನ ಮಗ ನಿಖಿಲ್ ಕುಮಾರ್ ನನ್ನು ಕಂಡರೆ ಅಷ್ಟಕ್ಕಷ್ಟೇ.. ಯಾವಾಗಲೂ ಹೊಡೆಯೋದು ಬಡಿಯೋದು ಮಾಡುತ್ತಿದ್ದ. ಹಾಗಾಗಿ ಇವನೇ ಸಾಯಿಸಿರುವ ಅನುಮಾನ ಬಂದು ತಂದೆಯ ಮೇಲೆಯೇ ಕೊಲೆ ಆರೋಪ ಮಾಡಿದ್ರು.
ಮಗನ ಶವ ಸಿಗುತ್ತಿದ್ದಂತೆ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾದ ತಂದೆ..!
ಇನ್ನು ಮಂಗಳವಾರ ಬೆಳಗ್ಗೆವರೆಗೂ ತನಗೇನು ಗೊತ್ತಿಲ್ಲ ಎಂದು ನಾಟಕವಾಡುತ್ತಿದ್ದ ತಂದೆ ಮಣಿಕಂಠ ಮಗನ ಶವ ಶೆಟ್ಟಿಮಾದಮಂಗಲ ಕೆರೆಯಲ್ಲಿ ಸಿಗುತ್ತಿದ್ದಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ. ತಾನೇ ಮಗನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ತಾನು ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಜೂಜಾಟವಾಡಿ ಹಣ ಕಳೆದುಕೊಂಡಿದ್ದು, ಸಾಲ ಮಾಡಿದ್ದು, ಸಾಲಗಾರರು ನನ್ನ ಮೇಲೆ ಗಲಾಟೆ ಮಾಡುವ ವಿಷಯವನ್ನು ಮಗ ನಿಖಿಲ್ ಕುಮಾರ್ ಮನೆಯಲ್ಲಿ ಹೇಳುತ್ತಿದ್ದ. ಇದರಿಂದ ಮನೆಯಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು. ಅದಕ್ಕಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ.
ಮುಗಿಲು ಮುಟ್ಟಿದ ಹೆತ್ತಮ್ಮನ ಆಕ್ರಂಧನ..!
ಕಾಣೆಯಾಗಿದ್ದ ಮಗ ಸಾವನ್ನಪ್ಪಿದ್ದಾನೆ, ಅದೂ ತನ್ನ ತಂದೆಯಿಂದಲೇ ಕೊಲೆಯಾಗಿ ಹೋಗಿದ್ದಾನೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ತಾಯಿ ಲಕ್ಷ್ಮೀದೇವಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು. ಹತ್ತಾರು ಜನ ಹಿಡಿದರೂ ಸಮಾಧಾನ ಪಡಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಮನುಷ್ಯತ್ವ ಮರೆತು ತನ್ನ ಮಗನನ್ನು ಕೊಂದ ಮಣಿಕಂಠನನ್ನು ತಾನೇ ಕೊಲೆ ಮಾಡುವುದಾಗಿ ಆಕ್ರೋಶಭರಿತಳಾಗಿದ್ದಳು. ತಾಯಿಯನ್ನು ಸಮಾಧಾನ ಮಾಡಲಾಗದ ಸ್ಥಿತಿ ಒಂದೆಡೆಯಾದರೆ ಮತ್ತೊಂದೆಡೆ ತಾನು ಮಾಡಿದ ತಪ್ಪಿಗೆ ಪಾಪ ಪ್ರಜ್ಞೆಯೇ ಇಲ್ಲದವನಂತೆ ಪೊಲೀಸ್ ಠಾಣೆಗೆ ಹೋಗಿದ್ದ ತಂದೆ ಮಣಿಕಂಠ ನಿಜಕ್ಕೂ ಮನುಷ್ಯನೇನಾ ಇಲ್ಲಾ ಮನುಷ್ಯ ರೂಪದ ರಾಕ್ಷಸನಾ ಅನ್ನೋ ಅನುಮಾನ ಅಲ್ಲಿದ್ದ ಜನರನ್ನು ಕಾಡಲಾರಂಭಿಸಿತ್ತು.
-ರಾಜೇಂದ್ರ ಸಿಂಹ
Published On - 7:38 pm, Thu, 30 June 22