ಕೋಲಾರ, ಜು.04: ಮೊದಲಿನಿಂದಲೂ ರೈತರಿಗೆ ತೊಂದರೆ ತಪ್ಪಿದ್ದಲ್ಲ. ಒಮ್ಮೆ ಮಳೆ ಕೈಕೊಟ್ಟರೆ, ಇನ್ನೊಮ್ಮೆ ಬೆಲೆ ಕೈಕೊಡುತ್ತದೆ. ಅದರಂತೆ ಇದೀಗ ಹಾಲು ಉತ್ಪಾದಕರಿಗೆ ಕೋಚಿಮುಲ್(Kochimul) ಬಿಗ್ ಶಾಕ್ ನೀಡಿದೆ. ಹೌದು, ಹಾಲು ಉತ್ಪಾದಕರಿಗೆ ದಿಢೀರನೆ 2 ರೂಪಾಯಿ ಕಡಿತ ಮಾಡಿ ಕೋಚಿಮುಲ್ ಆಡಳಿತ ಮಂಡಳಿ ಆದೇಶಿಸಿದೆ. ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ(ಜು.05) ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ.
ಈ ಮೊದಲು ಹಾಲು ಉತ್ಪಾದಕರಿಗೆ 33.40 ರೂ ನೀಡಲಾಗುತ್ತಿತ್ತು, ಆದರೆ, ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್‌ಗೆ 31.40 ರೂ ನೀಡಲು ಆದೇಶಿಸಿದೆ. ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್ಗೆ ಬರೋಬ್ಬರಿ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್ಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹ ಹಿನ್ನೆಲೆ, ಕೋಲಾರ – ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ 2.50 ಲಕ್ಷ ಲೀಟರ್ನಷ್ಟು ಹಾಲು ಹೆಚ್ಚಳವಾಗಿತ್ತು. ಆದರೆ, ಹಾಲಿನ ಶೇಖರಣೆ ಹೆಚ್ಚಿಗೆ ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿದ್ದು, ಕೋಚಿಮುಲ್ ನಿರ್ಧಾರದಿಂದ ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಈಗಾಗಲೇ ಲೀಟರ್‌ಗೆ 4 ರೂ ಹೆಚ್ಚಳ ಮಾಡಿ ಗ್ರಾಹಕರ ಜೇಬಿಗೂ ಕತ್ತರಿ ಹಾಕಲಾಗಿತ್ತು.
ಇದನ್ನೂ ಓದಿ:ಕೋಚಿಮುಲ್ ನೇಮಕಾತಿ ಹಗರಣಕ್ಕೆ ಮಂಗಳೂರು ವಿವಿ ಲಿಂಕ್! ಪರೀಕ್ಷಾಂಗ ಕುಲಸಚಿವರ ವಿಚಾರಣೆ
ಇನ್ನು ಇತ್ತೀಚೆಗಷ್ಟೇ ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಮಹತ್ವದ ನಿರ್ಧಾರ ಕೈಗೊಂಡಿತ್ತು. ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಈ ಹಿನ್ನಲೆ ಸದ್ಯ ಇರುವ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೋಚಿಮುಲ್ ಹಾಲು ಉತ್ಪಾದಕರಿಗೆ ಬಿಗ್ ಶಾಕ್ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ