AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನ: ಕಾಳಜಿ ಇಲ್ಲದ ಶಿಕ್ಷಣ ಇಲಾಖೆಗೆ ಗಾಢ ನಿದ್ರೆ!

ರಾಜ್ಯದ ಮೂಡಣ ಬಾಗಿಲು ಎಂದು ಕರೆಯಲಾಗುವ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮ ಕರ್ನಾಟಕ ರಾಜ್ಯದ ಗಡಿ ಗ್ರಾಮ. ಇಲ್ಲಿಂದ ಕೇವಲ ಐದು ಕಿಲೋಮೀಟರ್ ದೂರ ಕ್ರಮಿಸಿದರೆ ಸಾಕು ಪಕ್ಕದ ಆಂಧ್ರ ಪ್ರದೇಶ ಸಿಗುತ್ತದೆ. ಇಂಥ ಗ್ರಾಮದಲ್ಲಿ ಶಿಕ್ಷಣ ವ್ಯವಸ್ಥೆಯ ದುಸ್ಥಿತಿ ನಿಜಕ್ಕೂ ಹೇಳತೀರದಾಗಿದೆ.

ಗಡಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನ: ಕಾಳಜಿ ಇಲ್ಲದ ಶಿಕ್ಷಣ ಇಲಾಖೆಗೆ ಗಾಢ ನಿದ್ರೆ!
ಹಳೆ ವಿದ್ಯಾರ್ಥಿಗಳಿಂದ ಶಾಲೆ ಪುನಶ್ಚೇತನ, ಪ್ರಾರಂಭಿಸಲು ಅನುಮತಿಗೆ ಕಾದು ಕುಳಿತ ನಂಗಲಿ ಗ್ರಾಮಸ್ಥರು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​|

Updated on:Jul 06, 2024 | 3:41 PM

Share

ಕೋಲಾರ, ಜುಲೈ 05: ರಾಜ್ಯದಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಂದರೆ ಸಾಕು ಅಂತ ಗೋಗರೆಯುವ ಸ್ಥಿತಿ ರಾಜ್ಯದಲ್ಲಿದೆ. ಇನ್ನು ಖಾಸಗಿ ಶಾಲೆಗಳ (School) ವ್ಯಾಮೋಹಕ್ಕೆ ಬಿದ್ದಿರುವ ಪೊಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು (students) ಕಳಿಸಲು ಸಿದ್ಧರಿಲ್ಲ. ಜೊತೆಗೆ ಪ್ರತಿ ವರ್ಷ ಹಾಜರಾತಿ ಇಲ್ಲದೆ ನೂರಾರು ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಸ್ಥಿತಿ ಇದೆ ಅನ್ನೋ ಆತಂಕ ರಾಜ್ಯದ ಶಿಕ್ಷಣ ಇಲಾಖೆಯಲ್ಲಿದೆ. ಹೀಗಿರುವಾಗ ಇಲ್ಲೊಂದು ರಾಜ್ಯದ ಗಡಿ ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ಬರಲು ಮಕ್ಕಳೇ ಸಿದ್ಧವಿದ್ದರೂ ಕೂಡ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಮೀನ-ಮೇಷ ಎಣಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.

ರಾಜ್ಯದ ಮೂಡಣ ಬಾಗಿಲು ಎಂದು ಕರೆಯಲಾಗುವ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮ ಕರ್ನಾಟಕ ರಾಜ್ಯದ ಗಡಿ ಗ್ರಾಮ. ಇಲ್ಲಿಂದ ಕೇವಲ ಐದು ಕಿಲೋಮೀಟರ್ ದೂರ ಕ್ರಮಿಸಿದರೆ ಸಾಕು ಪಕ್ಕದ ಆಂಧ್ರ ಪ್ರದೇಶ ಸಿಗುತ್ತದೆ. ಇಂಥ ಗ್ರಾಮದಲ್ಲಿ ಶಿಕ್ಷಣ ವ್ಯವಸ್ಥೆಯ ದುಸ್ಥಿತಿ ನಿಜಕ್ಕೂ ಹೇಳತೀರದಾಗಿದೆ. ನಂಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 370 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸೋರುತ್ತಿವೆ ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ಕೊಠಡಿಗಳು

ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಮಾತ್ರ ಇದ್ದು, 9 ಮತ್ತು 10 ನೇ ತರಗತಿಗೆ ಮಕ್ಕಳು ಬೇರೆ ಅನುದಾನಿತ ಶಾಲೆಗೆ ಹೋಗಬೇಕು ಇಲ್ಲವಾದರೆ 15 ಕಿಲೋಮೀಟರ್ ದೂರದ ಮುಳಬಾಗಿಲು ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. 8ನೇ ತರಗತಿ ತೇರ್ಗಡೆಯಾಗಿರುವ 48 ಜನ ವಿದ್ಯಾರ್ಥಿಗಳ ಶಿಕ್ಷಣ ಡೋಲಾಯಮಾನವಾಗಿದೆ. ಕಾರಣ ಸರ್ಕಾರಿ ಅನುದಾನಿತ ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ಮನಸ್ಸಿಲ್ಲ, ಪೊಷಕರಿಗೂ ಇಷ್ಟವಿಲ್ಲ ಕಾರಣ ಇಷ್ಟು ವರ್ಷ ಆಂಗ್ಲ ಮಾಧ್ಯಮದಲ್ಲಿ ಕಲಿತಿರುವ ಮಕ್ಕಳು ಈಗ ಕನ್ನಡ ಮಾಧ್ಯಮಕ್ಕೆ ಹೋಗಬೇಕು ಅನ್ನೋ ಬೇಸರ.

ಸರ್ಕಾರಿ ಅನುದಾನಿತ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ಕೊರತೆ ಇದೆ. ಅಲ್ಲಿರುವುದು ಕೇವಲ ಇಬ್ಬರು ಶಿಕ್ಷಕರು. ಇದರಿಂದ ಗೊತ್ತಿದ್ದು ಗೊತ್ತಿದ್ದು ಮಕ್ಕಳ ಭವಿಷ್ಯ ಆತಂಕಕ್ಕೆ ದೂಡಲು ಯಾವ ಪೂಷಕರು ಮುಂದೆ ಬರುವುದಿಲ್ಲ. ಹಾಗಾಗಿ ಈಗಿರುವ ಸರ್ಕಾರಿ ಶಾಲೆಯಲ್ಲಿ ಸುಸರ್ಜಿತವಾದ ಕಟ್ಟಡವಿದೆ, ಈಗಿರುವ ಶಾಲೆಯಲ್ಲೇ ಹೊಸದಾಗಿ 9 ಮತ್ತು 10 ನೇ ತರಗತಿ ಆರಂಭ ಮಾಡಿರೆ ಸಾಕು ಗಡಿ ಭಾಗದ 48 ಜನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ.

150 ವರ್ಷ ಇತಿಹಾಸ ಹೊಂದಿರುವ ಶಾಲೆಯಲ್ಲಿ ಶಿಕ್ಷಣಕ್ಕೆ ಬಡತನ

1853ರಲ್ಲಿ ಆರಂಭವಾಗಿರುವ ಸರ್ಕಾರಿ ಶಾಲೆಯಲ್ಲಿ ಸಾವಿರಾರು ಜನ ಶಿಕ್ಷಣ ಕಲಿತಿದ್ದಾರೆ. ಇಂದು ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಶಾಲೆಯ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಉನ್ನತ ಸ್ಥಾನಕ್ಕೇರಿದ ವ್ಯಕ್ತಿಯೊಬ್ಬ ತಾನು ಕಲಿತ ಶಾಲೆಯನ್ನು ಒಮ್ಮೆ ನೆನಪಿಸಿಕೊಂಡರೆ ಸಾಕು ರಾತ್ರೋರಾತ್ರಿ ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗಿ ಹೋಗುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಈಗ ಸರ್ಕಾರಿ ಶಾಲೆಗಳಿಗಿಂತ ಲಕ್ಷಾಂತರ ರೂ. ಹಣ ಪಡೆದು ಕಲರ್ ಕಲರ್​ ಪಾಠ ಮಾಡುವ ಖಾಸಗಿ ಶಾಲೆಗಳೇ ಚೆಂದ.

ಇದನ್ನೂ ಓದಿ: ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ; ಮಳೆ ಬಂದರೆ ಮಕ್ಕಳ ಪಾಡು ಅಧೋಗತಿ

ಸರ್ಕಾರವೂ ಕೂಡ ಖಾಸಗಿ ಶಾಲೆಗಳ ಮುಲಾಜಿಗೆ ಒಳಗಾಗಿ ಸರ್ಕಾರಿ ಶಾಲೆಗಳನ್ನು ಲೆಕ್ಕಕ್ಕಿಟ್ಟಿಲ್ಲ ಇಂಥ ಪರಿಸ್ಥಿತಿಯಲ್ಲಿ ಬಡವರು, ರೈತರು, ಮತ್ತು ದಲಿತ ಕುಟುಂಬಗಳ ಮಕ್ಕಳೇ ಹೆಚ್ಚು ವ್ಯಾಸಾಂಗ ಮಾಡುವ ನಂಗಲಿ. ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್​ ತರಗತಿ ಆರಂಭ ಮಾಡಲು ಸರ್ಕಾರಕ್ಕೇನು ಕೋಟಿ ಕೋಟಿ ರೂ. ಖರ್ಚು ಮಾಡಬೇಕಾ, ಅನುಮತಿ ಕೊಟ್ಟರೆ ಸಾಕು ನಾವೇ ಶಾಲೆಯನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತೇವೆ ಎನ್ನುತ್ತಿದ್ದಾರೆ.

ಅದಕ್ಕಾಗಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ಪತ್ರ ಮುಖೇನ ಮನವಿ ಮಾಡಿದ್ದಾರೆ ಆದರೂ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ 48 ಜನ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಭವಿಷ್ಯ ದೊಡ್ಡದಾಗಿ ಕಾಣಿಸುತ್ತಿಲ್ಲ ಅನ್ನೋದು ಶೋಚನೀಯ ವಿಚಾರ. ನಂಗಲಿ ಗ್ರಾಮದ ಪೊಷಕರ ಬೇಡಿಕೆ ಒಂದೇ ನಮ್ಮೂರಿನಲ್ಲಿ ಸುಸರ್ಜಿತವಾದ ಕಟ್ಟವಿದೆ, ಹೈಸ್ಕೂಲ್​ ಆರಂಭಿಸೋದಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಗಳಿವೆ. ಸರ್ಕಾರದ ಮಟ್ಟದಲ್ಲಿ ಅನುಮತಿ ನೀಡಿದರೆ, ಸಾಕು ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲೇ ಹೈಸ್ಕೂಲ್​ ವ್ಯಾಸಂಗ ಮಾಡಿ ಮುಗಿಸುತ್ತಾರೆ. ಅದಕ್ಕಾಗಿ ಸಂಬಂಧಪಟ್ಟ ಶಿಕ್ಷಣ ಇಲಾಖೆ ಸಚಿವರು, ಶಿಕ್ಷಣ ಇಲಾಖೆ ಆಯುಕ್ತರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:31 pm, Fri, 5 July 24