ಯರಗೋಳ್ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆದೇಶಿಸಿದ ಸಿದ್ದರಾಮಯ್ಯ
ಕೋಲಾರ ಜಿಲ್ಲೆಯ ಯರಗೋಳ್ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ.

ಕೋಲಾರ/ಬೆಂಗಳೂರು, (ಜುಲೈ 15): ಯರಗೋಳ್ ನೀರಾವರಿ ಯೋಜನೆಯಲ್ಲಿ(yargol project) ಅವ್ಯವಹಾರ(corruption) ಆರೋಪ ಕೇಳಿಬಂದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯತಗೋಳ ಗ್ರಾಮದ ಬಳಿ ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿಯು 160 ಕೋಟಿ ರೂಪಾಯಿ ವೆಚ್ಚದಲ್ಲಿ ಯರಗೋಳ ಡ್ಯಾಂ ನಿರ್ಮಾಣ ಮಾಡಿದೆ. ಆದರೆ ಡ್ಯಾಂ ನಿರ್ಮಾಣ, ಪೈಪ್ ಲೈನ್ ಅಳವಡಿಕೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ನಿಗದಿಗಿಂತಲೂ ಹೆಚ್ಚುವರಿಯಾಗಿ ಹಣ ಮಂಜೂರು ಮಾಡಿದ ಆರೋಪ ಸಂಬಂಧ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ದೂರಿನ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ.
160 ಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ನೀರು ಪೂರೈಕೆಗೆ 79 ಕೋಟಿ ರೂ ಹಣ ವೆಚ್ಚ ಸೇರಿದಂತೆ ಒಟ್ಟು 249 ಕೋಟಿ ರೂಪಾಯಿ ಯೋಜನೆಗೆ ಹಣ ಮಂಜೂರು ಮಾಡಲಾಗಿತ್ತು. ಆದ್ರೆ, ಡ್ಯಾಂ ನಿರ್ಮಾಣ, ಪೈಪ್ ಲೈನ್ ಅಳವಡಿಕೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ನಿಗದಿಗಿಂತಲೂ ಹೆಚ್ಚುವರಿಯಾಗಿ ಹಣ ಮಂಜೂರು ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ದೂರಿನ ಮೇರೆಗೆ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದು, 15 ದಿನದಲ್ಲಿ ತನಿಖೆ ನಡೆಸಿ, ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
2007ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಅನುಮೋದನೆಗೊಂಡಿದ್ದ, ಕೋಲಾರ ಜಿಲ್ಲೆಯ ಬಹುನಿರೀಕ್ಷಿತ ಯರಗೋಳ್ ಕುಡಿಯುವ ನೀರಿನ ಕಾಮಗಾರಿ. ಈ ಕಾಮಗಾರಿಗೆ 2008 ರಲ್ಲಿ ಅಂದಾಜು 160 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. 3 ತಾಲೂಕಿನ ಜನರಿಗೆ ಕುಡಿಯುವ ನೀರು ಸಿಗುತ್ತದೆಂಬ ಆಸೆಯಿಂದ ಯರಗೋಳ್ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆದ್ರೆ, ಇದೀಗ ಈ ಯೋಜನೆ ದಿಕ್ಕು ತಪ್ಪಿದೆ.
ಯರಗೋಳ್ ಯೋಜನೆಯಲ್ಲಿ ಕೆಲಸವಾಗದೆ ಅನುದಾನ ಮಂಗಮಾಯವಾಗಿದ್ದರೂ, ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಬದಲಿಗೆ ಜಿಲ್ಲೆಯ ಜನರಿಗೆ ಅಂಗೈಯಲ್ಲಿ ಅರಮನೆ ತೋರಿಸಿ ಯೋಜನೆಗಳ ಹಣವನ್ನು ಲೂಟಿ ಮಾಡಿಸಿದ್ದಾರೆ ಎಂದು ಜಿಲ್ಲೆ ರೈತ ಸಂಘಟನೆಗಳು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Published On - 11:25 am, Sat, 15 July 23