ಕೋಲಾರ, ಜುಲೈ 6: ವಾಲ್ಮೀಕಿ ಹಗರಣದಲ್ಲಿ ಹಣ ತಿಂದವರಿಗೆ ಕುಷ್ಟರೋಗ ಬಂದು ಹಾರ್ಟ್ ಅಟ್ಯಾಕ್ ಆಗಿ ಸಾಯಲಿ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜನಾಥ್ ಶಾಪ ಹಾಕಿದ್ದಾರೆ. ಕೋಲಾರದಲ್ಲಿ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಣ ವರ್ಗಾವಣೆ ಆಗಿರುವುದು. ಈ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಹಗರಣದಲ್ಲಿ ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಲಿ. ಹಗರಣ ಕುರಿತು ಸಿಐಡಿ ತನಿಖೆ ಸರಿಯಾಗಿ ಆಗುತ್ತಿಲ್ಲ, ಇಲ್ಲಿ ನ್ಯಾಯ ಸಿಗುವುದು ಅನುಮಾನ ಎನಿಸಿದರೆ, ಸಿಬಿಐ ತನಿಖೆಗೆ ವಹಿಸಬೇಕು ಎಂದು ನಾನೂ ಕೂಡಾ ಒತ್ತಾಯ ಮಾಡುತ್ತೇನೆ ಎಂದರು.
ಮುಡಾ ಹಗರಣ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಹೆಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಸುದ್ದಿ ತೆಗಿಯಲೇ ಬೇಡಿ. ಅವರ ಸಹವಾಸವೇ ಬೇಡ ಎಂದರು. ಮುಡಾ ಆಗಲಿ ವಾಲ್ಮೀಕಿ ನಿಗಮದ್ದಾಗಲೀ ಸರಿಯಾದ ತನಿಖೆಯಾಗಿ ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸ್ವಾಮೀಜಿ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ವಾಮೀಜಿಗಳೇ ನೀವು ನಿಮ್ಮ ಕೆಲಸ ಮಾಡಿ. ದಯಮಾಡಿ ರಾಜಕೀಯಕ್ಕೆ ಬರಬೇಡಿ. ಕರ್ನಾಟಕದಲ್ಲಿನ ಸರ್ವ ಜನಾಂಗದ ಸ್ವಾಮೀಜಿಗಳಲ್ಲಿ ಮನವಿ, ಯಾವುದೇ ಸ್ವಾಮೀಜಿ ಒಂದು ಜಾತಿಗೆ ಸಂಬಂಧಿಸಿದ ಸ್ವಾಮೀಜಿ ಆಗಿರುವುದಿಲ್ಲ. ಸ್ವಾಮೀಜಿಗಳಲ್ಲಿ ಪಾದಕ್ಕೆ ನಮಸ್ಕರಿಸಿ ಕೇಳಿಕೊಳ್ಳುತ್ತೇನೆ, ಸ್ವಾಮೀಜಿಗಳು ನೀವು ದಯಮಾಡಿ ರಾಜಕೀಯಕ್ಕೆ ಬರಬೇಡಿ. ಸ್ವಾಮೀಜಿಗಳ ಮೇಲಿರುವ ಗೌರವ ಕಡಿಮೆಯಾಗುತ್ತದೆ. ದಯವಿಟ್ಟು ಧರ್ಮವನ್ನು ಉಳಿಸಿ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿ, ಕಷ್ಟ ಎಂದು ಬಂದ ಜನರಿಗೆ ಆಶೀರ್ವಾದ ಮಾಡಿ, ಪ್ರವಚನ ಮಾಡಿ ಎಂದು ಮನವಿ ಮಾಡಿದರು.
ಸ್ವಾಮೀಜಿಗಯಿಂದ ಯಾರೂ ಹೇಳಿಸಿರುವುದಲ್ಲ, ಅವರೇ ಪ್ರೀತಿಯಿಂದ ಹೇಳಿದ್ದಾರೆ. ದಯಮಾಡಿ ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂದರು.
ಕೋಚಿಮುಲ್ನಿಂದ ಹಾಲು ಉತ್ಪಾದಕರಿಗೆ 2 ರೂ. ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಕೊತ್ತೂರು ಮಂಜುನಾಥ್, ಕೋಚಿಮುಲ್ ನಿರ್ಧಾರ ಸರಿ ಇಲ್ಲ. ಈ ಬಗ್ಗೆ ಸೋಮವಾರ ಸಭೆ ಕರೆಯಲಾಗಿದೆ. ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಒಕ್ಕೂಟಕ್ಕೆ ನಷ್ಟವಾದರೂ ಪರವಾಗಿಲ್ಲ ರೈತರಿಗೆ ತೊಂದರೆಯಾಗಬಾರದು ಎಂದರು.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಯ ಜಮೀನೇ ಇಲ್ಲ, ನಕಲಿ ದಾಖಲೆ ಸೃಷ್ಟಿ ಎಂದ ಆರ್ಟಿಐ ಕಾರ್ಯಕರ್ತ
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲು ಹಾಗೂ ಶುಚಿತ್ವ ಕಾಪಾಡಲು ಸೂಚನೆ ನೀಡಲಾಗಿದೆ. ಸೊಳ್ಳೆ ನಿಯಂತ್ರಣ ಮಾಡುವುದು ಕಷ್ಟ. ಅವುಗಳನ್ನು ಕಂಟ್ರೋಲ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ