ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಯ ಜಮೀನೇ ಇಲ್ಲ, ನಕಲಿ ದಾಖಲೆ ಸೃಷ್ಟಿ ಎಂದ ಆರ್ಟಿಐ ಕಾರ್ಯಕರ್ತ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಆರ್ಟಿಐ ಕಾರ್ಯಕರ್ತ ಗಂಗರಾಜು ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳ ವಿವರವನ್ನೂ ನೀಡಿದ್ದಾರೆ. ಆ ವಿವರ ಇಲ್ಲಿದೆ.
ಮೈಸೂರು, ಜುಲೈ 6: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಅಧಿಕಾರ ದುರುಪಯೋಗ ಆರೋಪ ವಿಚಾರಕ್ಕೆ ಸಂಬಂಧಿಸಿ ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಅವರು, ದಾಖಲೆಗಳನ್ನು ನೋಡಿದರೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಜಮೀನೇ ಇಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಜಮೀನು ಇರುವುದು ಗೊತ್ತಾಗಿದೆ. ಅಸಲಿಗೆ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಯೇ ಮಾಡಿಲ್ಲ. ಕೇವಲ ಈ ಸಂಬಂಧ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ.
ದಾಖಲೆಗಳ ಪ್ರಕಾರ 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಯಿಂದ ಖರೀದಿಯಾಗಿದೆ. ಆದರೆ 2003ರಲ್ಲಿ ಆ ಜಾಗದಲ್ಲಿ ಮುಡಾದಿಂದ ನಿವೇಶನ ಹಂಚಿಕೆಯಾಗಿದೆ. ನಿವೇಶನ ಇದ್ದ ಜಾಗವನ್ನು ನೋಡದೆ ಮಲ್ಲಿಕಾರ್ಜುನ ಸ್ವಾಮಿಯಿಂದ ಹೇಗೆ ಖರೀದಿ ಸಾಧ್ಯ? ಇದೆಲ್ಲಾ ನಕಲಿ ದಾಖಲೆ ಸೃಷ್ಟಿ ಮಾಡಿರುವ ವಂಚನೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಎಲ್ಲವೂ ನಡೆದಿತ್ತು!
1998ರಲ್ಲಿ ಈ ಜಮೀನು ಭೂಸ್ವಾಧೀನ ಕೈ ಬಿಟ್ಟಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. 2014ರಲ್ಲಿ ಮೊದಲ ಬಾರಿಗೆ ಪಾರ್ವತಿ ಮುಡಾಗೆ ದೂರು ನೀಡಿದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಜಮೀನಿನ ಬದಲು ಪರಿಹಾರವಾಗಿ ನಿವೇಶನ ನೀಡಿದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಎಲ್ಲವೂ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗಲೇ ಆಗಿದೆ. ಸಿದ್ದರಾಮಯ್ಯ ಅವರ ಮೇಲೆ ನನಗೆ ಅಪಾರವಾದ ಗೌರವ ಇದೆ. ಈಗಲೂ ನಾನು ಹೇಳುವುದು ಸಿದ್ದರಾಮಯ್ಯ ಅವರು ಪರಿಹಾರದ ನಿವೇಶನ ಹಿಂದಿರುಗಿಸಲಿ. ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ದಾಖಲೆಗಳಲ್ಲಿ ಮೇಲ್ನೋಟಕ್ಕೆ ಸಾಬೀತಾದ ಅಕ್ರಮ
ಮುಡಾದಲ್ಲಿ 50:50 ಅನುಪಾತದ ಭೂ ಪರಿಹಾರ ನೀಡಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2004ರಲ್ಲಿ 3.16 ಎಕರೆ ಖರೀದಿಸಿದ್ದರು. ಆದರೆ 2003ರಲ್ಲೇ ಅದೇ ಜಾಗದಲ್ಲಿ ನಿವೇಶನ ಮಾಡಿ ಜನರಿಗೆ ಮುಡಾ ಹಂಚಿದೆ. 2005ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಕೃಷಿ ಭೂಮಿಯಿಂದ ವಸತಿ ಉದ್ದೇಶದ ಬಳಕೆಗೆ ಅನುಮತಿ ನೀಡಿದೆ. ಆದರೆ 2003ರಲ್ಲೇ ಭೂ ಪರಿವರ್ತನೆ ಆಗಿ ನಿವೇಶನ ರಚಿಸಿ ಮುಡಾ ಹಂಚಿತ್ತು.
ಇದನ್ನೂ ಓದಿ: ಮುಡಾ ಅಕ್ರಮ: ಸಿದ್ದರಾಮಯ್ಯ ಪತ್ನಿಗೆ ನೀಡಿದ್ದೆನ್ನಲಾದ ಜಮೀನಿನ ವಿವರ, ಪ್ರಕರಣದ ಸಂಪೂರ್ಣ ಟೈಮ್ಲೈನ್ ಇಲ್ಲಿದೆ
ನಿವೇಶನವಾಗಿದ್ದ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದ್ದು ಹೇಗೆ ? ಅದಾಗಲೇ ನಿವೇಶನ ಮಾಡಿ ಹಂಚಿಕೆಯಾಗಿದ್ದ ಭೂಮಿಯನ್ನು ಪರಿವರ್ತನೆ ಮಾಡಲು ಆದೇಶ ಮಾಡಿದ್ದು ಹೇಗೆ? ಈ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿ ಏಕೆ ಮುಡಾಗೆ ದೂರು ನೀಡಿಲ್ಲ? ನಿವೇಶನ ಮಾಡಿ ಹಂಚಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಸಹೋದರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ದಾನ ಮಾಡಿದ್ದಾದರೂ ಹೇಗೆ? ಸ್ಥಳವನ್ನೇ ನೋಡದೆ ದಾನ ಪಡೆದುಕೊಂಡರಾ ಸಿದ್ದರಾಮಯ್ಯ ಪತ್ನಿ? 2010ರಲ್ಲಿ ದಾನ ಪಡೆದುಕೊಂಡರು 2014ರವರೆಗೂ ಏಕೆ ಪಾರ್ವತಿ ಸುಮ್ಮನಿದ್ದರು? 4 ವರ್ಷದ ನಂತರ 2014ರಲ್ಲಿ ಮುಡಾಗೆ ಮೊದಲ ಬಾರಿಗೆ ಪಾರ್ವತಿ ದೂರು ನೀಡಿದ್ದೇಕೆ? ಈ ಎಲ್ಲ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ