ನಾಳೆ ಸಿವಿಲ್ ಕಾನ್​ಸ್ಟೇಬಲ್ ಪರೀಕ್ಷೆ: ಪರೀಕ್ಷಾರ್ಥಿಗಳಿಗೆ ಕೋಲಾರ ಪೊಲೀಸರಿಂದ ವಸತಿ, ಊಟದ ವ್ಯವಸ್ಥೆ

| Updated By: Rakesh Nayak Manchi

Updated on: Feb 24, 2024 | 10:23 PM

ನಾಳೆ ರಾಜ್ಯದೆಲ್ಲೆಡೆ ಸಿವಿಲ್​ ಪೊಲೀಸ್​ ನೇಮಕಾತಿ ಪರೀಕ್ಷೆ ನಡೆಯಲಿದೆ. ಕಳೆದ ಬಾರಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳಿಗೆ ಊಟ ವಸತಿ ಇಲ್ಲದೆ ನಡೆದ ಅವ್ಯವಸ್ಥೆಯನ್ನು ಮನಗಂಡಿದ್ದ ಕೋಲಾರ ಎಸ್​ಪಿ ನಾರಾಯಣ್ ಮುಂಚಿತವಾಗಿಯೇ ಕೋಲಾರದ ನಾಗರೀಕರ ನೆರವಿನಿಂದ ಪೊಲೀಸ್ ಪರೀಕ್ಷೆ ಬರೆಯಲು ಬಂದ ಸುಮಾರು 4000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ತಂಗಲು ವಸತಿ ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಾಳೆ ಸಿವಿಲ್ ಕಾನ್​ಸ್ಟೇಬಲ್ ಪರೀಕ್ಷೆ: ಪರೀಕ್ಷಾರ್ಥಿಗಳಿಗೆ ಕೋಲಾರ ಪೊಲೀಸರಿಂದ ವಸತಿ, ಊಟದ ವ್ಯವಸ್ಥೆ
ನಾಳೆ ಕಾನ್​ಸ್ಟೇಬಲ್ ಪರೀಕ್ಷೆ: ಕೋಲಾರ ಪೊಲೀಸರಿಂದ ಅಭ್ಯರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆ
Follow us on

ಕೋಲಾರ, ಫೆ.24: ಅವರೆಲ್ಲಾ ಪೊಲೀಸ್ ಆಗಬೇಕೆಂದು ಬಯಸಿ ದೂರದ ಊರುಗಳಿಂದ ಪೊಲೀಸ್​ ಪರೀಕ್ಷೆ ಬರೆಯಲು ಬಂದಿದ್ದ ಪರೀಕ್ಷಾರ್ಥಿಗಳು, ಗೊತ್ತಿಲ್ಲದ ಊರಲ್ಲಿ ತಂಗಲು ವ್ಯವಸ್ಥೆ ಇಲ್ಲದೆ, ತಿನ್ನಲು ಸರಿಯಾಗಿ ಊಟ ಸಿಗದೆ ಪರದಾಡುತ್ತಿದ್ದರು, ಹೀಗೊಂದು ಅವ್ಯವಸ್ಥೆಯ ಕುರಿತು ಟಿವಿ9 ಮಾಡಿದ ವರದಿಯಿಂದ ಎಚ್ಚೆತ್ತ ಕೋಲಾರ (Kolar) ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಕೋಲಾರದ ನಾಗರೀಕರ ನೆರವಿನಿಂದ ಸಿವಿಲ್ ಕಾನ್​ಸ್ಟೇಬಲ್ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 4000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ತಂಗಲು ವ್ಯವಸ್ಥೆ ಮಾಡಿದ್ದಾರೆ.

ಪೊಲೀಸರಿಗೆ ಮನುಷ್ಯತ್ವ ಇರೋದಿಲ್ಲ ಎನ್ನುವವರಿಗೆ ಇಲ್ಲಾ ಪೊಲೀಸರಿಗೂ ಹೃದಯ ವೈಶಾಲ್ಯತೆ ಇದೆ ಅನ್ನೋದಕ್ಕೆ ಇಲ್ಲೊಂದು ಜೀವಂತ ನಿದರ್ಶನವಿದೆ. ಕಳೆದ ಬಾರಿ ಅಂದರೆ ಎರಡು ತಿಂಗಳ ಹಿಂದೆ ಕೋಲಾರದಲ್ಲಿ ರಿಸರ್ವ್​ ಪೊಲೀಸ್​ ನೇಮಕಾತಿ ಪರೀಕ್ಷೆ ಬರೆಯಲು ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಿಂದ ಬಂದಿದ್ದ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದೆ ಬಸ್​ ನಿಲ್ದಾಣ, ಪುಟ್​ಪಾತ್ ಸೇರಿದಂತೆ ಎಲ್ಲೆಂದರಲ್ಲಿ ಮಲಗಿದ್ದರು. ಈ ಕುರಿತು ಟಿವಿ9 ವರದಿ ಪ್ರಸಾರ ಮಾಡಿತ್ತು.

ಈ ವೇಳೆ ರಾತ್ರಿ ಬೀಟ್​ನಲ್ಲಿದ್ದ ಪೊಲೀಸರು ಕೂಡಲೇ ಅವರಿಗೆ ಉಳಿದುಕೊಳ್ಳಲು ತಕ್ಷಣದ ವ್ಯವಸ್ಥೆ ಮಾಡಿದರು. ಆದರೆ ಅಂದು ಆಗಿದ್ದ ಘಟನೆಯನ್ನು ಮರೆಯದ ಕೋಲಾರ ಪೊಲೀಸರು ನಾಳೆ ರಾಜ್ಯದೆಲ್ಲೆಡೆ ನಡೆಯುತ್ತಿರುವ ಸಿವಿಲ್​ ಪೊಲೀಸ್​ ನೇಮಕಾತಿ ಪರೀಕ್ಷೆ ವೇಳೆ ಅದು ಮರುಕಳಿಸದಂತೆ ಮುಂಚಿತವಾಗಿಯೇ ಮಾಸ್ಟರ್ ಪ್ಲಾನ್​ ಮಾಡಿ ರಾಜ್ಯದಲ್ಲಿ ಎಲ್ಲೂ ಮಾಡದ ರೀತಿಯಲ್ಲಿ ವಿಭಿನ್ನವಾಗಿ ತಮ್ಮ ಪೊಲೀಸ್​ ಕರ್ತವ್ಯದಾಚೆಗೆ ಬಂದು ನೆರವಿಗೆ ನಿಂತಿದ್ದಾರೆ.

ಇದನ್ನೂ ಓದಿ: ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದು ಪೊಲೀಸ್​​​ ವೇಷ ತೊಟ್ಟು ಬಂದ ಅಣ್ಣ

ಕಳೆದ ಬಾರಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಊಟ ವಸತಿ ಇಲ್ಲದೆ ಅವ್ಯವಸ್ಥೆಯನ್ನು ಮನಗಂಡಿದ್ದ ಕೋಲಾರ ಎಸ್​ಪಿ ನಾರಾಯಣ್ ಮುಂಚಿತವಾಗಿಯೇ ಕೋಲಾರದ ನಾಗರೀಕರ ನೆರವಿನಿಂದ ಪೊಲೀಸ್ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 4000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ತಂಗಲು ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಎಸ್​ಪಿ ನಾರಾಯಣ್ ವ್ಯವಸ್ಥೆಗಳನ್ನು ಪರಿಶೀಲಿಸಿ ಪರೀಕ್ಷೆ ಬರೆಯಲು ಬಂದಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿ ಎಲ್ಲರೂ ಚೆನ್ನಾಗಿ ಪರೀಕ್ಷೆ ಬರೆದು ತಮ್ಮ ಇಲಾಖೆಗೆ ಸೇರುವಂತಾಗಲಿ ಎಂದು ಶುಭಕೋರಿದರು.

ನಾಳೆ ಕೋಲಾರ ಹಾಗೂ ಕೆಜಿಎಫ್​ನಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಪೊಲೀಸ್​ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯಲು ಬಂದಿರುವವರು ಬಹುತೇಕ ವಿದ್ಯಾರ್ಥಿಗಳು, ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾಂ, ಬಳ್ಳಾರಿ, ಬಾಗಲಕೋಟೆ, ಹೀಗೆ ಉತ್ತರ ಕರ್ನಾಟಕ ಭಾಗದಿಂದ ಬಂದಿರುವವರೇ ಆಗಿದ್ದಾರೆ. ಹಾಗಾಗಿ ಬರುವ ಎಲ್ಲರೂ ಕೂಡಾ ನಾಳಿನ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿಯೇ ಬರಬೇಕು.

ಹಾಗಾಗಿ ಬರುವ ಎಲ್ಲಾ ಅಭ್ಯರ್ಥಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಅನ್ನೋದನ್ನ ಅರಿತ ಕೋಲಾರ ಎಸ್ಪಿ ನಾರಾಯಣ್​ ಹಾಗೂ ಸಿಬ್ಬಂದಿ ಕೋಲಾರ ನಗರದಲ್ಲಿ ಬಿಂದುಮಾಳ್ಯಂ ಕಲ್ಯಾಣ ಮಂಟಪ, ಹಾಲಿಸ್ಟರ್​ ಭವನ, ಹಾಗೂ ಕನ್ನಡ ಭವನದಲ್ಲಿ ಬರುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

ಅಲ್ಲದೆ ಎಲ್ಲರಿಗೂ ರಾತ್ರಿ ಊಟ ಹಾಗೂ ಬೆಳಿಗ್ಗೆ ತಿಂಡಿ ವ್ಯವಸ್ಥೆಯನ್ನು ಮಾಡಿದ್ದಾರೆ. ಪರೀಕ್ಷೆ ಹೇಗೋ ಏನೋ ಎಂದು ಆತಂಕದಲ್ಲೇ ಕೋಲಾರಕ್ಕೆ ಬಂದಿಳಿದ ವಿದ್ಯಾರ್ಥಿಗಳಂತೂ ಪುಲ್​ ಖುಷಿಯಾಗಿದ್ದು, ತಮ್ಮ ತಮ್ಮ ಪೊಷಕರುಗಳಿಗೆ ಪೋನ್​ ಮಾಡಿ ಇಲ್ಲಿ ಪೊಲೀಸರು ಮಾಡಿರುವ ವ್ಯವಸ್ಥೆಯ ಬಗ್ಗೆ ವಿವರಿಸಿದ್ದಾರೆ. ಅದನ್ನು ಕೇಳಿ ವಿದ್ಯಾರ್ಥಿಗಳಷ್ಟೇ ಅಲ್ಲದೆ ಅವರ ಪೊಷಕರು ಸಂತೋಷಗೊಂಡಿದ್ದಾರೆ ಎಂದು ಪರೀಕ್ಷಾರ್ಥಿ ರೇಷ್ಮಾ ಹಾಗೂ ಸವಿತ ತಮ್ಮ ಅನಿಸಿಕೆಯನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಪೊಲೀಸರ ಮಾನವೀಯತೆಯನ್ನು ಶ್ಲಾಘಿಸಿದ್ದಾರೆ.

ಇನ್ನು ಸುಮಾರು 100 ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಹಾಗೂ ತೃತೀಯ ಲಿಂಗಿಗಳು ಕೂಡಾ ಪರೀಕ್ಷೆ ಬರೆಯಲು ಬಂದಿದ್ದು, ಅವರಿಗೂ ಕೂಡಾ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಒಟ್ಟಾರೆ ಪೊಲೀಸ್​ ಪರೀಕ್ಷೆ ಬರೆಯಲು ಬಂದು ಅವ್ಯವಸ್ಥೆ ಅನುಭವಿಸಿದವರ ಸಂಕಷ್ಟದ ಕುರಿತು ಟಿವಿ9 ಮಾಡಿದ್ದ ವರದಿ ಹಾಗೂ ಅದಕ್ಕೆ ಪ್ರತ್ಯುತ್ತರವಾಗಿ ಕೋಲಾರ ಪೊಲೀಸರ ಕಾರ್ಯವೈಕರಿ ನಿಜಕ್ಕೂ ಮೆಚ್ಚುವಂತದ್ದು. ಮತ್ತೆ ಅಂತ ಅವ್ಯವಸ್ಥೆ ಮರುಕಳಿಸದಂತೆ ಪೊಲೀಸರು ತಮ್ಮ ಕರ್ತವ್ಯದಾಚೆಗೂ ನೆರವಿಗೆ ನಿಂತೂ ಮಾನವೀಯತೆ ಮೆರೆಯುವ ಮೂಲಕ ಸಾವಿರಾರು ಅಭ್ಯರ್ಥಿಗಳಿಗೆ ನೆರವಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ