ಮೈಸೂರು ಮಹಾರಾಜರು ಅಂದು ಕೋಲಾರ ರೈತರಿಗೆ ಕೊಟ್ಟ ಭೂಮಿ ಇಂದು ಸರ್ಕಾರದ ಪಾಲಾಗಿದೆ! ರೈತರು ಕಂಗಾಲು
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅನ್ನೋ ಹಾಗೆ ಹತ್ತಾರು ವರ್ಷಗಳಿಂದ ರೈತರು ಈ ಭೂಮಿಯ ಸ್ವಾಧೀನದಲ್ಲಿದ್ದಾರೆ. ಅದರೆ ಈ ಮಧ್ಯೆ ಅಧಿಕಾರಿಗಳು ಅದು ಕೆರೆಯಂಗಳ ಎನ್ನುತ್ತಿದ್ದಾರೆ. ಅಲ್ಲದೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ತಮ್ಮದೇನೂ ತಪ್ಪಿಲ್ಲ ಅನ್ನೋ ಹಾಗೆ ನಡೆದುಕೊಳ್ಳುತ್ತಿರುವುದು ರೈತರು ಹಾಗು ಅಧಿಕಾರಿಗಳ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ಅದು ಮೈಸೂರು ಮಹಾರಾಜರು (Mysore Maharaja) ಆ ಕಾಲಕ್ಕೇ ಆ ರೈತರಿಗೆ (Farmers distressed) ಕೊಟ್ಟಿರುವ ಹಿಡುವಳಿ ಭೂಮಿ. ಸುಮಾರು ೯೦ ವರ್ಷಗಳ ಹಿಂದೆಯೆ ರೈತರಿಗೆ ಅಂದಿನ ಅರಸರು ಕೊಟ್ಟ ಹಲವು ದಾಖಲೆಗಳು ಸಹ ಇದೆ. ಆದ್ರೆ ಸರ್ಕಾರಿ ಪುಸ್ತಕದಲ್ಲಿ ಕೆರೆ ಜಮೀನು ತೋರಿಸಲಾಗುತ್ತಿದೆ. ಇದು ಸದ್ಯ ರೈತರು ಹಾಗೂ ಅಧಿಕಾರಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಕೆರೆಯನ್ನ ಉಳಿಸಿ ಎಂದು ದಾಖಲೆಗಳೊಂದಿಗೆ ಹೋರಾಟಕ್ಕೆ ಇಳಿದಿರುವ ಹೋರಾಟಗಾರರು, ಮತ್ತೊಂದೆಡೆ ಇದು ಮೈಸೂರು ಮಹಾರಾಜರು ನಮಗೆ ಕೊಟ್ಟಿರುವ ಜಮೀನು (land scam) ಎಂದು ಸ್ಥಳದಲ್ಲಿ ದಾಖಲೆಗಳನ್ನ ತೋರಿಸುತ್ತಿರುವ ರೈತರು (Kolar farmers), ದಿಶಾಂಕ್ ಹಾಗು ಸದ್ಯದ ದಾಖಲೆಗಳಲ್ಲಿ ನಕ್ಷೆ, ಎಲ್ಲವೂ ಕೆರೆ ಎಂದು ನಮೂದಾಗಿರುವುದು… ಇದೆಲ್ಲಾ ವಿದ್ಯಮಾನಗಳು ಕಂಡು ಬಂದಿದ್ದು ಕೋಲಾರ ತಾಲೂಕಿನ ಚಲುವನಹಳ್ಳಿ ಬಳಿಯ ಕೆರೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹಗ್ಗಜಗ್ಗಾಟದಿಂದಾಗಿ.
ಹೌದು ಇತ್ತೀಚೆಗೆ ಜಿಲ್ಲಾಡಳಿತ ಭೂ ಗಳ್ಳರಿಂದ ೪೦ ಎಕರೆ ಸರ್ಕಾರಿ ಕೆರೆ ಜಾಗವನ್ನ ಉಳಿಸಿಕೊಳ್ಳಲಾಗಿದೆ ಎಂದು ಕೊಚ್ಚಿಕೊಳ್ಳುತಿತ್ತು, ಆದ್ರೆ ಅದಕ್ಕೆ ಸರಿಯಾದ ಮಾಹಿತಿ ಇಲ್ಲದೆ ತಾವೆ ಮಾಡಿದ ತಪ್ಪನ್ನ ಮುಚ್ಚಿಕೊಳ್ಳಲು ನಡೆದಿರುವ ಹೈ ಡ್ರಾಮ ಇದಾಗಿದೆ ಅನ್ನೋದು ಈ ಪ್ರಕರಣದಿಂದ ತಿಳಿಯುತ್ತೆ. ಹೌದು ನಿನ್ನೆ ವಿಧಾನ ಪರಿಷತ್ ಬಜೆಟ್ ಮೇಲಿನ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಕೇಳಿದ ಚುಕ್ಕೆ ಪ್ರಶ್ನೆ ಸಂದರ್ಭದಲ್ಲಿ ಚಲುವನಹಳ್ಳಿಯ ಸರ್ವೆ ನಂ.73 ರಲ್ಲಿರುವ 40 ಎಕರೆ ಭೂಮಿ ದುರಸ್ತಿ ಮತ್ತು ಪೋಡಿಯಾಗಿದೆಯಾ ಎಂಬ ಪ್ರಶ್ನೆಗೆ ಕೋಲಾರ ಜಿಲ್ಲಾಡಳಿತ ತಾವು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ತಪ್ಪು ಮಾಹಿತಿ ಕೊಟ್ಟಿದೆ.
ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ಚಲುವನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 73 ಮತ್ತು 74ರ ಕೆರೆ ಜಮೀನಿನ ಪೈಕಿ 40 ಎಕರೆ ಜಮೀನಿಗೆ ಪೋಡಿ ದಾಖಲೆಗಳನ್ನು ಸೃಷ್ಟಿಸಿ ಪಹಣಿ ಇಂಡಿ ಮಾಡಿರುವುದು ಸರಕಾರದ ಗಮನಕ್ಕೆ ಬಂದಿಲ್ಲ. ಆದ್ರೆ ಕೆರೆ ಜಮೀನಿಗೆ ದಾಖಲೆಗಳನ್ನ ಕೊಟ್ಟಿರುವ ಅಧಿಕಾರಿಗಳು ತಾವು ಮಾಡಿರುವ ತಪ್ಪು ಮಾಹಿತಿಯನ್ನು ಸರಕಾರದ ಗಮನಕ್ಕೆ ತಾರದೆ, ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡಿಲ್ಲವೆಂದು ಮಾಹಿತಿ ನೀಡಿದ್ದಾರೆ. ಹಾಗಾದ್ರೆ ತಪ್ಪು ಯಾರದ್ದು ಅನ್ನೋ ಪ್ರಶ್ನೆ ಉದ್ಬವವಾಗಿದೆ. ಅಲ್ಲದೆ ರೈತರು ತಮ್ಮದು ಎನ್ನುವ ಜಾಗವನ್ನು, ಕೆರೆ ಸಂರಕ್ಷಣೆ ಹೋರಾಟಗಾರ್ತಿ ನಳಿನಿ ಗೌಡ ಕೆರೆ ಸರ್ಕಾರದ್ದು ಅನ್ನೋದು ವಾದವಾಗಿದೆ.
ಸ.ನಂ.73 ದುರಸ್ತಿಯಾಗಿ ಹೊಸ ನಂಬರ್ 127 ಆಗಿದ್ದು, ಒಟ್ಟು 30 ಎಕರೆ ಜಮೀನನ್ನು ನಂಜೇಗೌಡ ಎಂಬ ವ್ಯಕ್ತಿಗೆ 20-05-2013ರಲ್ಲಿ ದಾಖಲೆಗಳನ್ನ ಮಾಡಲಾಗಿದೆ. ಜಮೀನಿನ ನಕ್ಷೆ ಮೂಲತಃ ಕೆರೆಯಾಗಿರುವ ಸ.ನಂ.73ರಲ್ಲಿ73/1 ಎಂದು 29.29 ಎಕರೆಗೆ 2013-14ರಲ್ಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ, ಆದ್ರೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೆಲ ಅಧಿಕಾರಿಗಳು ದುರಸ್ತಿಯಾದ ಕಡತಗಳನ್ನು ನಾಪತ್ತೆ ಮಾಡಿದ್ದಾರೆ.
ಸದ್ಯದ ವಾಸ್ತವದಲ್ಲಿ ಚಲುವನಹಳ್ಳಿಯ ಸ. ನಂ. 73ಕ್ಕೆ ಸಂಬಂಧಿಸಿದಂತೆ 30 ಎಕರೆ ದುರಸ್ತಿಯಾಗಿದ್ದು, ಪೋಡಿಯಾಗಿ ನಕ್ಷೆಯೂ ಆಗಿರುವ ದಾಖಲೆಗಳು ಇವೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ತಪ್ಪನ್ನ ಮರೆ ಮಾಚಲು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅಂದ್ರೆ ಮೈಸೂರು ಮಹಾರಾಜರು ನೀಡಿರುವ ದಾಖಲೆಗಳು ರೈತರ ಬಳಿ ಇದೆ. ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ರೈತರ ಮುಂದಿಟ್ಟಿದ್ದಾರೆ.
ಅದಕ್ಕಾಗಿ ಪೋಡಿ ಸೇರಿದಂತೆ ಜಿಲ್ಲಾಧಿಕಾರಿಗಳೆ ಕೆಲ ಜಮೀನಿಗೆ ಭೂ ಪರಿವರ್ತನೆ ಮಾಡಿದ್ದಾರೆ. ಮತ್ತಷ್ಟು ಸಾಲ ಸೌಲಭ್ಯಗಳನ್ನ ನೀಡಲಾಗಿದೆ. ಇದೆಲ್ಲಾ ದಾಖಲೆಗಳನ್ನ ಹೊಂದಿರುವ ರೈತರಿಗೆ ಅಧಿಕಾರಿಗಳೆ ಮೋಸ ಮಾಡಿದ್ರಾ ಇಲ್ಲಾ ಸರ್ಕಾರಕ್ಕೆ ಅಧಿಕಾರಿಗಳೆ ತಪ್ಪು ಮಾಹಿತಿ ನೀಡುತ್ತಿದ್ದಾರಾ? ಹೀಗೆ ಹಲವು ಪ್ರಶ್ನೆಗಳು ಸದ್ಯ ಅನುಭವದಲ್ಲಿರುವ 32 ರೈತರನ್ನ ಕಾಡ ತೊಡಗಿದೆ. ಹಾಗಾಗಿ ಕೆರೆ ಜಮೀನಿಗೆ ದಾಖಲೆಗಳನ್ನು ಸೃಷ್ಟಿಸಿ ಆಕ್ರಮವೆಸಗಿರುವ ಅಧಿಕಾರಿಗಳ ಯಡವಟ್ಟಿನಿಂದ ಇಂದು ರೈತರು ವಿಷ ಕುಡಿಯುವ ಸ್ಥಿತಿ ತಲುಪಿದೆ. ಆದ್ರೆ ಜಿಲ್ಲಾಡಳಿತ ಮಾತ್ರ ಅಂತಹ ಯಾವುದೆ ತಪ್ಪು ಮಾಡಿಲ್ಲ, ಅದು ಕೆರೆ ಜಾಗ. ಹಾಗಾಗಿ ಸರ್ಕಾರಿ ಜಾಗ ಎಂದೇ ನಮೂದಾಗಿದೆ ಅನ್ನೋದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ಮಾತು.




