AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ನಂಜೇಗೌಡಗೆ ಸತತ 10 ಗಂಟೆ ಇಡಿ ಡ್ರಿಲ್; ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ಅಧ್ಯಕ್ಷ, ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜನವರಿ 8 ರಂದು ಜಾರಿ ನಿರ್ದೇಶನಾಲಯದ (ಇಡಿ ದಾಳಿ) ಅಧಿಕಾರಿಗಳು ರೈಡ್ ಮಾಡಿದ್ದರು. ಮನೆಯಲ್ಲಿ ಸಿಕ್ಕ ದಾಖಲಾತಿಗಳನ್ನು ಅಧಿಕಾರಿಗಳು ಕೊಂಡೊಯ್ದಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ಇಂದು ನಂಜೇಗೌಡ ಮತ್ತು ಅವರ ಪುತ್ರ ಸತತ 10 ಗಂಟೆಗಳ ಕಾಲ ಇಡಿ ವಿಚಾರಣೆ ಎದುರಿಸಿದ್ದಾರೆ.

ಶಾಸಕ ನಂಜೇಗೌಡಗೆ ಸತತ 10 ಗಂಟೆ ಇಡಿ ಡ್ರಿಲ್; ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ
ಶಾಸಕ ಕೆವೈ ನಂಜೇಗೌಡಗೆ ಸತತ 10 ಗಂಟೆ ಇಡಿ ಡ್ರಿಲ್; ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ
Shivaprasad B
| Updated By: Rakesh Nayak Manchi|

Updated on: Feb 23, 2024 | 10:28 PM

Share

ಬೆಂಗಳೂರು, ಫೆ.23: ಕೋಚಿಮುಲ್ (Kochimul) ನೇಮಕಾತಿಯಲ್ಲಿ ಅವ್ಯವಹಾರ ಆರೋಪ ಸಂಬಂಧ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ಅಧ್ಯಕ್ಷರೂ ಆಗಿರುವ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ (KY Nanjegowda) ಅವರಿಗೆ ಇಂದು ಇಡಿ (ED) ಗ್ರಿಲ್ ಮಾಡಿದೆ. ನಂಜೇಗೌಡ ಮತ್ತು ಇವರ ಮಗನನ್ನು ಸತತ 10 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿ ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇಡಿ ವಿಚಾರಣೆ ಮುಕ್ತಾಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನಂಜೇಗೌಡ, ನನ್ನ ಜೊತೆ ಮಗನನ್ನೂ ವಿಚಾರಣೆಗೆ ಕರೆದಿದ್ದರು. ಬೆಳಗ್ಗೆ 11.30 ಕ್ಕೆ ವಿಚಾರಣೆಗೆ ಬಂದಿದ್ದೆವು. ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇವೆ. ನಾಳೆ 11 ಗಂಟೆಗೆ ಮತ್ತೆ ಬರಲು ಹೇಳಿದ್ದಾರೆ ಎಂದರು.

ನೇಮಕಾತಿಯಲ್ಲಿ ಅವ್ಯವಹಾರದ ಆರೋಪದ ವಿಚಾರವಾಗಿ ಮಾತನಾಡಿದ ನಂಜೇಗೌಡ, ಮಂತ್ರಿಗಳು ಸಹಜವಾಗಿ ರೆಕಮಂಡೇಷನ್ ಮಾಡುತ್ತಾರೆ. ಆದರೆ ಅದರಲ್ಲಿ ಅಕ್ರಮವೇನು ನಡೆದಿಲ್ಲ. ಮೆರಿಟ್ ಯಾರ್ ಬಂದಿದ್ದಾರೋ ಅವರನ್ನು ನೇಮಕಾತಿ ಮಾಡಲಾಗಿದೆ ಎಂದರು.

ಇದನ್ನೂ ಓದಿ: ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್: ಖುದ್ದು ಹಾಜರಿಗೆ ಕೋರ್ಟ್ ಸೂಚನೆ

ಅಕ್ರಮ ಭೂಮಂಜೂರಾತಿ ಆರೋಪ ವಿಚಾರವಾಗಿ ಮಾತನಾಡಿದ ನಂಜೇಗೌಡ, ಈ ಹಿಂದೆ ತಹಶಿಲ್ದಾರ್ ಮೇಲೆ ಕೇಸ್ ಹಾಕಿದ್ದರು. ಅದನ್ನ ಬಿ ರಿಪೋರ್ಟ್ ಹಾಕಲಾಗುತ್ತದೆ. ಇದನ್ನು ಆರ್ ಟಿ ಐ ಕಾರ್ಯಕರ್ತರೊಬ್ಬರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಅಧ್ಯಕ್ಷರ ಮೇಲೆ ಎಫ್​ಐಆರ್ ಮಾಡಿ ಅಂತ ಹೇಳುತ್ತಾರೆ. ಹೀಗಾಗಿ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿತ್ತು. ಹೀಗಾಗಿ ನಾನು ಇದಕ್ಕೆ ಸಂಬಂಧ ಪಟ್ಟ ದಾಖಲಾತಿಗಳನ್ನ ಒದಗಿಸಿ ಸಮರ್ಥನೆ ಮಾಡಿಕೊಳ್ಳುತ್ತೇನೆ. ಇದರಲ್ಲಿ ಆಪ್ತ ಸಹಾಯಕ ಹರೀಶ್ ಪಾತ್ರ ಏನೂ ಇಲ್ಲ. ಮಗ ಬಿಸಿನೆಸ್ ನೋಡಿಕೊಳ್ಳುತ್ತಿರುವುದರಿಂದ ಅವನನ್ನೂ ಕರೆದಿದ್ದಾರೆ ಅಷ್ಟೇ ಎಂದರು.

ಕೆವೈ ನಂಜೇಗೌಡರ ನಿವಾಸದ ಮೇಲೆ ಇಡಿ ದಾಳಿ

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ಅಧ್ಯಕ್ಷ, ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜನವರಿ 8 ರಂದು ದಾಳಿ ನಡೆಸಿದ್ದರು. ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿರುವ ನಂಜೇಗೌಡರಿಗೆ ಸೇರಿದ ಮನೆ, ಹುತ್ತೂರು ಹೋಬಳಿ ಕೋಚಿಮುಲ್ ಕಚೇರಿ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್​ನಲ್ಲಿ ಪರಿಶೀಲನೆ ನಡೆಸಿದ್ದರು.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್, ಕೋಚಿಮುಲ್​​ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್​ಮೂರ್ತಿ ನಿವಾಸದ ಮನೆ ಮೇಲೂ ದಾಳಿ ಮಾಡಿದ್ದರು.

ಇಡಿ ಅಧಿಕಾರಿಗಳು ಪರಿಶೀಲನೆ ಮಾಡಿ ವಾಪಸ್ ಹೋದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ನಂಜೇಗೌಡ, ಇಡಿ ಅಧಿಕಾರಿಗಳು ನಮ್ಮ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಅವರು ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಮುಂದೆ ಸಹ ಏನೂ ಆಗಲ್ಲ ಅನ್ನೋ ನಂಬಿಕೆ ಇದೆ. ಮೂರು ವಿಚಾರವಾಗಿ ನನ್ನ ಬಳಿ ಮಾಹಿತಿ ಕೇಳಿದರು, ಒಂದು ಕೋಚಿಮುಲ್ ನೇಮಕಾತಿ, ಎರಡನೆಯದು ಭೂ ಮಂಜೂರಾತಿ ಹಾಗೂ ನನ್ನ ಬಿಸಿನೆಸ್ ಬಗ್ಗೆ ಮಾಹಿತಿ ಕೇಳಿದ್ದರು ಎಂದು ವಿವರಿಸಿದ್ದರು.

ಭಾವುಕರಾಗಿದ್ದ ನಂಜೇಗೌಡ, ಇದನ್ನು ನೋಡಿ ಕಣ್ಣೀರಾದ ಪತ್ನಿ

ನನ್ನ ಮುಗಿಸಲು ಸಾಕಷ್ಟು ಜನರ ಸಂಚು ರೂಪಿಸಿದ್ದಾರೆ. ಕೆಲವು ದಾಖಲೆ ಹಾಗೂ ತಮ್ಮನ ಮಗಳ ಮದುವೆಗೆ ಬಟ್ಟೆ ತರಲು ಹಣ ಹೊಂದಿಸಿದ್ದೆ, ಆ ಹಣ ಹಾಗೂ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. 16 ಲಕ್ಷ ರೂ. ಹಣ ತೆಗೆದುಕೊಂಡು ಹೋಗಿದ್ದಾರೆ. ಹಣ ವಾಪಸ್ ಕೊಡಿ ಎಂದು ನಮ್ಮ ಮನೆಯವರು ಸಹ ಕೇಳಿಕೊಂಡೆವು. ಆದರೂ ಹಣ ಹಾಗೂ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಕರೆದಿದ್ದಾರೆ ಹೋಗುವೆ. ಇಡಿ ಮೂಲಕ ಕಾಂಗ್ರೇಸ್ ಮೇಲೆ ಯಾವ ರೀತಿ ದಾಳಿ‌ ಮಾಡಿಸಲಾಗುತ್ತಿದೆ ಎಂದು ಗೊತ್ತಿದೆ. ಅದರ ಕುರಿತು ನಾನೇನು ಮಾತನಾಡುವುದಿಲ್ಲ ಎಂದು ಭಾವುಕರಾಗಿದ್ದರು. ಇದನ್ನು ನೋಡಿ ಪಕ್ಕದಲ್ಲೇ ಇದ್ದ ಪತ್ನಿ ರತ್ನಮ್ಮ ಸಹ ಕಣ್ಣೀರು ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ