ಕೋಲಾರ: ಹಸಿರೇ ಉಸಿರು ಎನ್ನುವ ಮಾತು ಇತ್ತೀಚೆಗೆ ದೂರವಾಗುತ್ತಿದೆ. ಆದರೆ ಕೋಲಾರ ಜಿಲ್ಲೆಯ ಮನೆಯೊಂದರಲ್ಲಿ ಈ ವಾಕ್ಯವನ್ನೇ ಧ್ಯೇಯ ಮಾಡಿಕೊಂಡಿದ್ದಾರೆ. ಕೋಲಾರ ನಗರದ ಕಾಳಿದಾಸ ಬಡಾವಣೆಯ ರವಿಕುಮಾರ್ ಹಾಗೂ ಮೋನಿಕಾ ಅವರ ಮನೆಯಲ್ಲಿ ಹಸಿರು ತುಂಬಿ ತುಳುಕುತ್ತಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ್ ಅವರಿಗೆ ಹಸಿರು ಗಿಡಗಳನ್ನು ಬೆಳೆಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ದೊಡ್ಡಮ್ಮನವರಿಂದ ಪ್ರೇರೇಪಿತರಾದ ರವಿಕುಮಾರ್ ತಮ್ಮ ಮನೆಯಲ್ಲಿ ಹತ್ತಾರು ಬಗೆಯ ಗಿಡಗಳನ್ನು ಬೆಳೆಸುವ ಹವ್ಯಾಸ ಮಾಡಿಕೊಂಡಿದ್ದಾರೆ.
ತಮಗೆ ಸಿಗುವ ಯಾವುದೇ ಪ್ಲಾಸ್ಟಿಕ್ ಬಾಟಲ್ಗಳು, ಗಾಜಿನ ಬಾಟಲ್ಗಳು, ವಾಹನದ ಟಯರ್, ಖಾಲಿ ಕೋಳಿ ಮೊಟ್ಟೆ, ನೀರಿನ ಗ್ಲಾಸ್, ಪಾಟ್ಗಳು, ಹೀಗೆ ಸಿಕ್ಕ ವಸ್ತುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸ. ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಮನೆಯಲ್ಲಿನ ತಮ್ಮ ಗಿಡಗಳೊಂದಿಗೆ ಕಾಲ ಕಳೆಯುವ ರವಿಕುಮಾರ್ ದಂಪತಿ ತಮ್ಮ ಮನೆಯನ್ನೇ ಒಂದು ಸುಂದರ ಪಾರ್ಕ್ನ್ನಾಗಿ ಮಾಡಿಕೊಂಡಿದ್ದಾರೆ. ಇವರು ಅರಿಶಿಣ, ಅಲೋವೇರಾ, ಮರಗೆಣಸು, ತುಳಸಿ, ಒಂದೆಲಗ ಹೀಗೆ ಹಲವಾರು ಔಷಧೀಯ ಗಿಡಗಳ ಜತೆಗೆ, ಇಂಗಾಲವನ್ನು ಹೀರಿಕೊಂಡು ಆಕ್ಸಿಜನ್ ಕೊಡುವ ಗಿಡಗಳನ್ನು ಬೆಳೆಸಿದ್ದಾರೆ. ಇವರ ಮನೆಯ ಒಳಗೆ ಹಾಗೂ ಹೊರಗೆ ಎಲ್ಲೆಡೆ ಗಿಡಗಳೇ ತುಂಬಿಕೊಂಡಿದೆ.
ತಮ್ಮ ಮನೆಗೆ ನಿಸರ್ಗವನ ಎಂದು ಹೆಸರಿಟ್ಟಿರುವ ಈ ದಂಪತಿಗಳಿಗೆ ಮನೆಯಲ್ಲಿ ಗಿಡಗಳನ್ನು ಬೆಳೆಸುವುದೇ ಒಂದು ಹವ್ಯಾಸ. ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಗಿಡಗಳನ್ನು ನೋಡಬಹುದು. ಆದರೆ ಇವರ ಮನೆಯ ಬೆಡ್ರೂಂ ನಿಂದ ಹಿಡಿದು ಅಡುಗೆ ಮನೆಯವರೆಗೆ, ಹಾಲ್ನಿಂದ ಮನೆಯ ಗೋಡೆಗಳ ಮೇಲೆಲ್ಲಾ ವಿಭಿನ್ನ ರೀತಿಯ ಗಿಡಗಳನ್ನು ನೋಡಬಹುದು.
ಮನೆಯಲ್ಲಿ ವಿವಿಧ ರೀತಿಯ ಆಟಿಕೆಗಳ ರೀತಿಯಲ್ಲಿ ಪಾಟ್ಗಳನ್ನು ಮಾಡಿ, ಅದರಲ್ಲೂ ವಿವಿಧ ರೀತಿಯ ಶೋ ಗಿಡಗಳನ್ನು ಬೆಳೆಸುವುದು, ಖಾಲಿ ಬಾಟಲ್ಗಳನ್ನು ವಿಭಿನ್ನವಾಗಿ ಕತ್ತರಿಸಿ ಅದರಲ್ಲಿ ಗಿಡ ಬೆಳೆಸಿ ಅಲಂಕಾರವಾಗಿ ನೇತಾಕುವುದು ಹೀಗೆ ಹಲವು ರೀತಿಯಲ್ಲಿ ಗಿಡಗಳನ್ನು ಬೆಳೆಸಿದ್ದೇವೆ ಎಂದು ರವಿಕುಮಾರ್ ತಿಳಿಸಿದ್ದಾರೆ.
ಇನ್ನು ಇವರ ಮನೆಯನ್ನು ನೋಡಿದ ಇವರ ಸ್ನೇಹಿತರುಗಳು ಕೂಡಾ ಇವರಿಗೆ ಗಿಡಗಳನ್ನು ಉಡುಗೋರೆಯಾಗಿ ನೀಡುತ್ತಿದ್ದಾರೆ. ಅಲ್ಲದೆ ರವಿಕುಮಾರ್ ತಮ್ಮ ಮದುವೆಯಲ್ಲಿ 1000 ಗಿಡಗಳನ್ನು ಮದುವೆಗೆ ಬಂದಿದ್ದ ಜನರಿಗೆ ಕೊಟ್ಟು ಗಿಡಗಳನ್ನು ಬೆಳೆಸಲು ಪ್ರೇರೇಪಣೆ ಮಾಡಿದ್ದಾರೆ. ಹೀಗೆ ಪರಿಸರ ರಕ್ಷಣೆಗಾಗಿ ಈ ದಂಪತಿ ವಿಭಿನ್ನವಾಗಿ ತಮ್ಮ ಮನೆಯನ್ನೇ ಪಾರ್ಕ್ ರೀತಿ ಪರಿವರ್ತಿಸಿದ್ದಾರೆ.
ಇದನ್ನೂ ಓದಿ:
ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ ನೀಳಕೊಂಬಿನ ಕೃಷ್ಣ ಮೃಗಗಳು