Kolar News: ಸ್ತ್ರೀ ಸ್ವ ಸಹಾಯ ಸಂಘಗಳ ಸಾಲ ಮನ್ನಾ ವಿಚಾರ; ಗ್ರಾಮದಲ್ಲಿ ಮಹಿಳೆಯರಿಂದ ಪ್ಲೆಕ್ಸ್ ಹಾಕಿ ಸಾಲ ಕೇಳಲು ಬಾರದಂತೆ ಎಚ್ಚರಿಕೆ
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಹಿಳೆಯರಿಗೆ ಸಿದ್ದರಾಮಯ್ಯ ನೀಡಿದ್ದ ಮತ್ತೊಂದು ಭರವಸೆ ಈಗ ಸಖತ್ ಸದ್ದು ಮಾಡುತ್ತಿದೆ. ಅದರಂತೆ ಕೋಲಾರ ತಾಲ್ಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಸ್ತ್ರೀ ಸ್ವ ಸಹಾಯ ಸಂಘಗಳ ಸಾಲ ಮನ್ನಾ ವಿಚಾರ ಕುರಿತು, ಸಾಲ ವಸೂಲಿಗಾರರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಗ್ರಾಮದಲ್ಲಿ ಪ್ಲೆಕ್ಸ್ ಹಾಕಿ, ಸಾಲ ಕೇಳಲು ಬಾರದಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ಕೋಲಾರ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ (Siddaramaiah) ಅವರು ನೀಡಿದ್ದ ಐದು ಗ್ಯಾರಂಟಿ (Guarantee) ಭರವಸೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನ ಜೂ.11 ರಂದು ಜಾರಿಗೊಳಿಸಿದೆ. ಅದರಂತೆ ಸರ್ಕಾರ ಇನ್ನೂ ಹಲವು ಭರವಸೆಗಳನ್ನು ನೀಡಿದ್ದು, ಅದನ್ನು ಈಡೇರಿಸಲು ಹಲವಾರು ಗೊಂದಲಗಳು ಮೂಡಿವೆ. ಈ ನಡುವೆ ಈಗ ಹೊಸದೊಂದು ಮನ್ನಾ ಸ್ಕೀಂ ಸರ್ಕಾರಕ್ಕೆ ಎದುರಾಗುತ್ತಿದೆ. ಹೌದು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಹಿಳೆಯರಿಗೆ ಸಿದ್ದರಾಮಯ್ಯ ನೀಡಿದ್ದ ಮತ್ತೊಂದು ಭರವಸೆ ಈಗ ಸಖತ್ ಸದ್ದು ಮಾಡುತ್ತಿದೆ. ಅದರಂತೆ ಕೋಲಾರ(Kolar) ತಾಲ್ಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಸ್ತ್ರೀ ಸ್ವ ಸಹಾಯ ಸಂಘಗಳ ಸಾಲ ಮನ್ನಾ ವಿಚಾರ ಕುರಿತು, ಸಾಲ ವಸೂಲಿಗಾರರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಗ್ರಾಮದಲ್ಲಿ ಪ್ಲೆಕ್ಸ್ ಹಾಕಿ ನಿರ್ಭಂಧ ಹೇರಿ, ಸಾಲ ಕೇಳಲು ಬಾರದಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ನುಡಿದಂತೆ ನಡೆಯುವ ಸಿದ್ದರಾಮಯ್ಯ ಸಾಲ ಮನ್ನಾ ಮಾಡ್ತಾರೆ ಎಂದು ಪ್ಲೆಕ್ಸ್ ಹಾಕಿರುವ ಗ್ರಾಮದ ಮಹಿಳೆಯರು
ಹೌದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಲಾರ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಂದ ಸಾಲ ವಸೂಲಿ ಮಾಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಲ ಕೇಳಲು ಹೋಗುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಮಹಿಳೆಯರು ಹರಿಹಾಯ್ದು ಬೀಳುತ್ತಿದ್ದಾರೆ. ಅಷ್ಟೇ ಅಲ್ಲ ನಾವು ಯಾವುದೇ ಕಾರಣಕ್ಕೂ ಸಾಲ ಕಟ್ಟೋದಿಲ್ಲ ಎಂದು ಖಡಕ್ಕಾಗಿ ಹೇಳಿ ವಾಪಸ್ ಕಳಿಸುತ್ತಿದ್ದಾರೆ.
ಒಂದು ವೇಳೆ ಬಲವಂತ ಮಾಡಿದ್ರೆ, ತಕ್ಕ ಶಾಸ್ತಿ ಮಾಡ್ತೀವಿ ಅನ್ನೋ ಮಾತುಗಳನ್ನಾಡುತ್ತಿದ್ದಾರೆ. ಸದ್ಯಕ್ಕೆ, ಸಾಲ ಕೊಟ್ಟಿರುವ ಡಿಸಿಸಿ ಬ್ಯಾಂಕ್ನವರಿಗೆ ಹೋಬಳಿ ಮಟ್ಟದ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಲ ಕೊಟ್ಟಿರುವ ಸೊಸೈಟಿಗಳಿಗೆ ಸಾಲ ವಸೂಲಿ ಮಾಡೋದೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು, ಸಾಲ ವಸೂಲಿಯಾಗದೆ ಬ್ಯಾಂಕ್ನ್ನು ಹೇಗಪ್ಪಾ ಮುನ್ನಡೆಸೋದು ಅನ್ನೋ ಆತಂಕ ಶುರುವಾಗಿದೆ. ಜೊತೆಗೆ ಸಾಲ ಸರಿಯಾಗಿ ಮರುಪಾವತಿ ಮಾಡಲಿಲ್ಲ ಎಂದರೆ ಮಹಿಳೆಯರಿಗೇ ಹೊರೆಯಾಗುತ್ತದೆ ಅನ್ನೋದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಅಭಿಪ್ರಾಯಪಟ್ಟಿದ್ದಾರೆ.
ಇಷ್ಟಕ್ಕೂ ಏನದು ಸಿದ್ದರಾಮಯ್ಯ ಸರ್ಕಾರಕ್ಕೆ ಮನ್ನಾ ಸ್ಕೀಂ
ಇನ್ನು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮಹಿಳೆಯರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಲ ಕಟ್ಟೋದಿಲ್ಲ ಎಂದು ಪಟ್ಟು ಹಿಡಿದಿರುವುದಕ್ಕೆ ಕಾರಣವಾದರೂ ಏನು ಅಂತ ನೋಡೋದಾದ್ರೆ ಸಿದ್ದರಾಮಯ್ಯ ಅವರು ಚುನಾವಣೆಗೂ ಮೊದಲು ತಮ್ಮ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳ ಜೊತೆಗೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ನೀಡುವ ಐದು ಲಕ್ಷದವರೆಗಿನ ಬಡ್ಡಿ ರಹಿತವಾಗಿ ನೀಡುವ ಸಾಲವನ್ನು ಮನ್ನಾ ಮಾಡೋದಾಗಿ ಕೋಲಾರದಲ್ಲಿ ಮೊದಲು ಘೋಷಣೆ ಮಾಡಿದ್ರು.
ಇದನ್ನೂ ಓದಿ:Siddaramaiah: ಸಾಲ ಮನ್ನಾ, ಮಹಿಳೆಯರಿಗೆ 1 ಲಕ್ಷ, ರೈತರಿಗೆ 5 ಲಕ್ಷ ರೂ ಬಡ್ಡಿರಹಿತ ಸಾಲ: ಸಿದ್ದರಾಮಯ್ಯ ಭರವಸೆ
ಫೆಬ್ರವರಿ 13 ರಂದು ಕೋಲಾರ ತಾಲ್ಲೂಕು ವೇಮಗಲ್ ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಸಾಲ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಸಾಲ ಮನ್ನಾ ಮಾಡುವುದರ ಜೊತೆಗೆ ಈಗಿರುವ ಸಾಲದ ಮೊತ್ತವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ಒಂದು ಲಕ್ಷದಷ್ಟು ಹೆಚ್ಚಿಗೆ ಮಾಡೋದಾಗಿ ಭರವಸೆ ನೀಡಿದ್ದರು. ಅದರಂತೆ ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಹೇಳಿದ್ದಾರೆ, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಮಾತ್ರ ಸಾಲ ಪಾವತಿ ಮಾಡಿ, ಆ ನಂತರ ಬಾಕಿ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂದು, ಹಾಗಾಗಿ ನಾವು ಸಾಲ ಕಟ್ಟೋದಿಲ್ಲ ಎನ್ನುತ್ತಿದ್ದಾರೆ ಮಹಿಳೆಯರು.
ಒಟ್ಟಾರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಧಾವಂತದಲ್ಲಿ ಜನರಿಗೆ ನೀಡಿರುವ ಹಲವು ಆಶ್ವಾಸನೆಗಳು ಈಡೇರಿಸಲೇ ಬೇಕಾದ ಅನಿವಾರ್ಯತೆ ಸಿದ್ದರಾಮಯ್ಯನವರ ಮುಂದಿದೆ. ಸದ್ಯ ಐದು ಗ್ಯಾರಂಟಿಗಳನ್ನೇ ಜಾರಿಗೆ ತರಲು ಸರ್ಕಸ್ ಮಾಡುತ್ತಿರುವ ಸರ್ಕಾರ ಈ ಸಾಲ ಮನ್ನಾವನ್ನು ಏನು ಮಾಡುತ್ತದೆ, ಮಹಿಳೆಯರನ್ನು ಹೇಗೆ ಸಮಾಧಾನ ಮಾಡುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ