ಬಂಗಾರದ ಗುಡಿ ಕೋಲಾರದಲ್ಲೀಗ ಮಣ್ಣು ಕೂಡ ಚಿನ್ನವಾಗಿದೆ! ಫಲವತ್ತಾದ ಮಣ್ಣು ನಿರಂತರ ಲೂಟಿ, ಆದರೆ ಅಧಿಕಾರಿಗಳು ಮಾಡುತ್ತಿರುವುದು ಏನು?

ಚಿನ್ನದ ನಾಡಲ್ಲಿ ಈಗ ಮಣ್ಣಿಗೂ ಚಿನ್ನದ ಬೆಲೆ ಬಂದಿರುವುದರಿಂದ ಮರಳು ಮಾಫಿಯಾಗಿಂತ ಹೆಚ್ಚಾಗಿ ಈಗ ಮಣ್ಣು ಲೂಟಿ ಜೋರಾಗಿ ನಡೆಯುತ್ತಿದೆ. ಜಿಲ್ಲೆಯ ಪ್ರಕೃತಿ ಸಂಪತ್ತು, ಜೀವ ವೈವಿಧ್ಯ ಹಾಳಾಗುವ ಮುನ್ನ ಜಿಲ್ಲೆಯ ಅಧಿಕಾರಿಗಳು ಮಣ್ಣು ಲೂಟಿಕೋರರಿಗೆ ಕಡಿವಾಣ ಹಾಕಬೇಕು

ಬಂಗಾರದ ಗುಡಿ ಕೋಲಾರದಲ್ಲೀಗ ಮಣ್ಣು ಕೂಡ ಚಿನ್ನವಾಗಿದೆ! ಫಲವತ್ತಾದ ಮಣ್ಣು ನಿರಂತರ ಲೂಟಿ, ಆದರೆ ಅಧಿಕಾರಿಗಳು ಮಾಡುತ್ತಿರುವುದು ಏನು?
ಬಂಗಾರದ ಗುಡಿ ಕೋಲಾರದಲ್ಲೀಗ ಮಣ್ಣು ಕೂಡ ಚಿನ್ನವಾಗಿದೆ
Follow us
|

Updated on:Feb 22, 2023 | 2:48 PM

ಕೋಲಾರದಲ್ಲಿ (Kolar) ಒಂದು ಕಾಲದಲ್ಲಿ 100 ಅಡಿ ಮಣ್ಣು ಅಗೆದರೆ ಚಿನ್ನ (Gold) ಸಿಗುತ್ತಿತ್ತು. ಆದರೆ ಈಗ ಕೋಲಾರದ ಮಣ್ಣು ಸಹ ಚಿನ್ನವಾಗಿ ಬಿಟ್ಟಿದೆ. ಜಿಲ್ಲೆಯ ಕೆರೆ ಮಣ್ಣನ್ನೂ ಬಿಡದ ಮಣ್ಣು ಲೂಟಿಕೋರರು ಜಿಲ್ಲೆಯ ಕೆರೆಗಳಲ್ಲಿರುವ ಬಂಗಾರದ ಬೆಲೆ ಬಾಳುವ ಕೋಟ್ಯಾಂತರ ರೂಪಾಯಿ ಮಣ್ಣನ್ನ ಲೂಟಿ ಮಾಡುತ್ತಿದ್ದಾರೆ. ಏನಪ್ಪ ಇದು ಬಂಗಾರದ ಮಣ್ಣಿನ ಸ್ಟೋರಿ ಇಲ್ಲಿದೆ ಡೀಟೇಲ್ಸ್​.. ಹಾಡಹಗಲೇ ಕೆರೆಯಲ್ಲಿ ಮಣ್ಣು ಬಗೆಯುತ್ತಿರುವ ಜೆಸಿಬಿಗಳು, ಕೆರೆಯ ಸ್ವರೂಪವನ್ನೇ ನಾಶ ಪಡಿಸಿ ಕೆರೆಯ ಮಣ್ಣನ್ನೇ ಲೂಟಿ ಮಾಡುತ್ತಿರುವ ಮಣ್ಣು ಮಾಫಿಯಾದವರು, ಇದೆಲ್ಲಾ ಕಂಡು ಬರೋದು ಕೋಲಾರ ತಾಲ್ಲೂಕು ಆಲೇರಿ, ಮೂರಂಡಹಳ್ಳಿ ಹಾಗೂ ತೊಟ್ಲಿ ಗ್ರಾಮದ ಕೆರೆಗಳಲ್ಲಿ. ಹೌದು ಇತ್ತೀಚೆಗೆ ಮಣ್ಣಿಗೆ (Fertile Soil) ಎಲ್ಲಿಲ್ಲದ ಬೇಡಿಕೆ ಬಂದಿದೆ. ಮಣ್ಣಿಗೆ ಡಿಮ್ಯಾಂಡ್​ ಹೆಚ್ಚಾಗಿರುವ ಹಿನ್ನೆಲೆ ಮಣ್ಣನ್ನು ಬಿಡದ ಮಾಫಿಯಾದವರು (Soil Mafia), ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನ ತೆಗೆದು ಹಗಲುರಾತ್ರಿ ಎನ್ನದೆ ಲಾರಿ ಟಿಪ್ಪರ್​ ಮೂಲಕ ಲೂಟಿ ಮಾಡುತ್ತಿದ್ದಾರೆ. ಒಂದೆಡೆ ಇಟ್ಟಿಗೆ ಫ್ಯಾಕ್ಟರಿಗಳವರು ಮಣ್ಣನ್ನು ಲೂಟಿ ಮಾಡಿದರೆ ಇನ್ನು ಕೆಲವರು ಔಷಧಿಯ ಗುಣಗಳಿರುವ, ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಸೂಕ್ತವಾದ ಮಣ್ಣನ್ನು ಬೇರೆ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇರುವ ಜೇಡಿ ಮಣ್ಣನ್ನ ಹೊರ ರಾಜ್ಯಗಳಿಗೆ ಅಕ್ರಮವಾಗಿ ಕಳುಹಿಸಿಕೊಡಲಾಗುತ್ತಿದೆ.

ಇನ್ನು ಸ್ಥಳೀಯರವಾಗಿ ರೈತರು ಮಣ್ಣನ್ನು ತಮ್ಮ ಹೊಲಗಳಿಗೆ ಬಳಸಿಕೊಳ್ಳಲು ಹೋದರೆ ಪಂಚಾಯ್ತಿ ಅಧಿಕಾರಿಗಳು ಪ್ರಶ್ನೆ ಮಾಡುತ್ತಾರೆ. ಅದೇ ಮಾಫಿಯಾದವರು ಮಣ್ಣು ಲೂಟಿ ಮಾಡಲು ಬಂದರೆ ಮಾತ್ರ ಉಸಿರೇ ತೆಗೆಯೋದಿಲ್ಲ! ಇನ್ನು ಕೆರೆಯ ಮಣ್ಣನ್ನು ತೆಗೆಯಲು ಹೋಗಿ ಕೆರೆಯ ಸ್ವರೂಪವನ್ನೇ ಹಾಳು ಮಾಡಿರುವ ಮಾಫಿಯಾದವರಿಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಕೆರೆಯಲ್ಲಿ ಇರುವ ನೀರನ್ನೇ ಹೊರ ಹಾಕಿ… ಮಣ್ಣು ಲೂಟಿ ಮಾಡುತ್ತಿದ್ದಾರೆ ಈ ದುರುಳರು. ಇದರಿಂದಾಗಿ ತನ್ನ ಸ್ವರೂಪ ಕಳೆದು ಕೊಂಡಿರುವ ಈ ಕೆರೆಗಳಲ್ಲಿ ಒಂದು ವೇಳೆ ನೀರು ತುಂಬಿಕೊಂಡಾಗ ಪ್ರಾಣಿ ಪಕ್ಷಿಗಳು ಕೆರೆಯಲ್ಲಿ ಬಿದ್ದು ಸಾವನ್ನಪ್ಪುವ ಆತಂಕ ಕೂಡಾ ಇದೆ.

ಇತ್ತೀಚಿನ ನಿರಂತರ ಮಳೆ ಹಾಗೂ ಕೆಸಿ ವ್ಯಾಲಿ ನೀರಿನಿಂದ ಕೆರೆಗಳು ತುಂಬಿವೆ. ದನ ಕರುಗಳು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರನ್ನು ಉಳಿಸದೆ, ಮಣ್ಣು ಮಾಫಿಯಾದವರು ಕೆರೆಗಳನ್ನು ಬಗೆಯುತ್ತಿದ್ದು ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಕೆರೆಗಳಲ್ಲಿ ಪ್ರಪಾತದ ರೀತಿಯಲ್ಲಿ ಹಳ್ಳಗಳನ್ನು ತೆಗೆದಿರುವ ಹಿನ್ನೆಲೆ ನೀರು ಕುಡಿಯಲು, ಮೇಯಲು ಹೋದ ಪ್ರಾಣಿಗಳು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪುತ್ತಿವೆ.

ಜೊತೆಗೆ ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದ ಕೆರೆಗಳ ಸ್ವರೂಪವೇ ಹಾಳಾಗುತ್ತಿದೆ ಅನ್ನೋದು ಗ್ರಾಮಸ್ಥರ ಆರೋಪ. ಮೊದಲೆಲ್ಲಾ ಸ್ಥಳೀಯವಾಗಿ ಇಟ್ಟಿಗೆ ಕಾರ್ಖಾನೆಯವರು, ಇಲ್ಲವೇ ರೈತರು ತಮ್ಮ ಹೊಲಗಳಿಗೆ ಮಣ್ಣು ಹೊಡೆಯುತ್ತಿದ್ದರು. ಆದ್ರೆ ಈಗಂತೂ ಈ ಮಣ್ಣಿಗೂ ಬೆಲೆ ಬಂದಿರುವ ಕಾರಣ ಮಣ್ಣನ್ನು ಲೂಟಿ ಮಾಡುವುದೇ ದೊಡ್ಡ ಕಾಯಕವಾಗಿದೆ.

ಮಣ್ಣು ಲೂಟಿಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಹಿಡಿದು, ಸಾರಿಗೆ ಇಲಾಖೆ, ಪೊಲೀಸ್​ ಇಲಾಖೆ, ಗಣಿಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಜೊತೆಗೆ ಲೋಕಾಯುಕ್ತ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಆದರೂ ಯಾರೊಬ್ಬರೂ ಮಣ್ಣು ಲೂಟಿಕೋರರಿಗೆ ಕಡಿವಾಣ ಹಾಕಿಲ್ಲ. ಎಲ್ಲರೂ ಕೂಡಾ ಮಣ್ಣು ಲೂಟಿಕೋರರ ಹಣಕ್ಕೆ ಮರುಳಾಗಿದ್ದಾರೆ. ಕೊನೆಯ ಪಕ್ಷ ಅವರಿಂದ ಕನಿಷ್ಠ ರಾಜಧನ ಕಟ್ಟಿಸಿಕೊಂಡು ಅನುಮತಿ ನೀಡೋದಕ್ಕೂ ಅಧಿಕಾರಿಗಳು ಮುಂದಾಗಿಲ್ಲ ಅನ್ನೋದು ಸ್ಥಳೀಯರ ಆರೋಪ.

ಒಟ್ಟಾರೆ ಚಿನ್ನದ ನಾಡಲ್ಲಿ ಈಗ ಮಣ್ಣಿಗೂ ಚಿನ್ನದ ಬೆಲೆ ಬಂದಿರುವುದರಿಂದ ಮರಳು ಮಾಫಿಯಾಗಿಂತ ಹೆಚ್ಚಾಗಿ ಈಗ ಮಣ್ಣು ಲೂಟಿ ಜೋರಾಗಿ ನಡೆಯುತ್ತಿದೆ. ಜಿಲ್ಲೆಯ ಪ್ರಕೃತಿ ಸಂಪತ್ತು, ಜೀವ ವೈವಿಧ್ಯ ಹಾಳಾಗುವ ಮುನ್ನ ಜಿಲ್ಲೆಯ ಅಧಿಕಾರಿಗಳು ಮಣ್ಣು ಲೂಟಿಕೋರರಿಗೆ ಕಡಿವಾಣ ಹಾಕಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ

Published On - 12:20 pm, Wed, 22 February 23

ತಾಜಾ ಸುದ್ದಿ