ಕುಡಿದ ಮತ್ತಲ್ಲಿ ಕಿರಿಕ್​​: ಬಾಯಿ ಚಪಲಕ್ಕೆ ಬಿಹಾರ ಮೂಲದ ಕಾರ್ಮಿಕ ಬಲಿ!

ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ಕಾರ್ಮಿಕರ ನಡುವೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರ ಮೂಲದ ವ್ಯಕ್ತಿ ಬರ್ಬರ ಕೊಲೆಯಾಗಿದ್ದು, ಘಟನೆ ಸಂಬಂಧ ಮೂರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಕೆಲವೊಮ್ಮೆ ಅನಗತ್ಯ ಮಾತಾಡದೇ ಇದ್ದರೆ ಮುಂದಿನ ಅನಾಹುತ ತಪ್ಪಿಸಬಹುದು ಎಂಬುದಕ್ಕೆ ಈ ಘಟನೆ ಕೈಗನ್ನಡಿಯಂತಿದೆ.

ಕುಡಿದ ಮತ್ತಲ್ಲಿ ಕಿರಿಕ್​​: ಬಾಯಿ ಚಪಲಕ್ಕೆ ಬಿಹಾರ ಮೂಲದ ಕಾರ್ಮಿಕ ಬಲಿ!
ಕೊಲೆಯಾದ ವ್ಯಕ್ತಿ
Edited By:

Updated on: Dec 26, 2025 | 6:19 PM

ಕೋಲಾರ, ಡಿಸೆಂಬರ್​​ 26: ಕುಡಿದ ಮತ್ತಲ್ಲಿ ಕಾರ್ಮಿಕರ ನಡುವೆ ನಡೆದ ಕಿರಿಕ್​​ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರದ ವೇಮಗಲ್​ ಕೈಗಾರಿಕಾ ಪ್ರದೇಶದ ಬಳಿ ಇರುವ ಕುರುಗಲ್ ಗೇಟ್​ನಲ್ಲಿ ನಡೆದಿದೆ. ಬಿಹಾರ ಮೂಲದ ಕಾರ್ಮಿಕ ಸಂದೀಪ್​ ಸಿಂಗ್ ಮೃತ ದುರ್ದೈವಿಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ರಾತ್ರಿ ಕುರುಗಲ್ ಗೇಟ್ ಬಳಿ ಕಾರ್ಮಿಕ ಸಂದೀಪ್ ಸಿಂಗ್​, ಅಡುಗೆ ಕೆಲಸ ಮಾಡುತ್ತಿದ್ದ ಬಳ್ಳಾರಿ ಮೂಲದ ರಾಜಾ ರೆಡ್ಡಿ, ಲೇಬರ್ ಕಾಂಟ್ರಾಕ್ಟ್ ಏಜೆಂಟ್ ಆಗಿದ್ದ ಅನಿರುದ್ ಮತ್ತು ಬೆಂಗಳೂರು ಮೂಲದ ಮನೋಜ್​ ಎಲ್ಲರೂ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಸಂದೀಪ್​ ಸಿಂಗ್​ ಹಾಗೂ ರಾಜಾರೆಡ್ಡಿ ನಡುವೆ ಗಲಾಟೆ ಆರಂಭವಾಗಿದೆ. ಸಂದೀಪ್​ ಸಿಂಗ್ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪರಿಣಾಮ ರೊಚ್ಚಿಗೆದ್ದ ರಾಜಾರೆಡ್ಡಿ ಹಾಗೂ ಮನೋಜ್​ ಇಬ್ಬರೂ ಸೇರಿ ಸಂದೀಪ್​ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿದಿದ್ದಾರೆ. ಬಳಿಕ ಗಾಯಾಳುವನ್ನು ಅವರೇ ಬೈಕ್​​ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೊರಟ್ಟಿದ್ದರು. ಈ ವೇಳೆ ಸಂದೀಪ್​ ಸಿಂಗ್​ ಬಾಯಿ ಚಪಲ ಆತನ ಪ್ರಾಣಕ್ಕೇ ಕುತ್ತು ತಂದಿದೆ.

ಇದನ್ನೂ ಓದಿ: ಮರ್ಡರ್​​ ಕೇಸ್​​ ತನಿಖೆ ವೇಳೆ ಖಾಕಿಗೇ ಶಾಕ್​​; ಬಯಲಾಗಿದ್ದು ಎರಡು ಪ್ರಕರಣ!

ನಾನು ಹುಷಾರಾದ ಮೇಲೆ ನಿಮ್ಮನ್ನು, ನಿಮ್ಮ ಕುಟುಂಬದವರನ್ನು ಬಿಡೋದಿಲ್ಲ ಎಂದು ಸಂದೀಪ್​​ ಸಿಂಗ್​​ ಧಮ್ಕಿ ಹಾಕಿದ್ದಾನೆ. ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಈತ ಆಡಿದ  ಮಾತುಗಳು ಆರೋಪಿಗಳನ್ನು ಮತ್ತೆ ಕೆರಳಿಸಿದೆ. ಕೂಡಲೇ ಸಂದೀಪ್​​ ಸಿಂಗ್​​ನ ಬೈಕ್​​ನಿಂದ ಇಳಿಸಲಾಗಿದ್ದು, ರಾಜಾರೆಡ್ಡಿ, ಮನೋಜ್​ ಮತ್ತು ಅನಿರುದ್​​ ಆತನ ಕುತ್ತಿಗೆ ಕೊಯ್ದಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ನಂತರ ತಾವೇ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.