Belagavi: ಮರ್ಡರ್ ಕೇಸ್ ತನಿಖೆ ವೇಳೆ ಖಾಕಿಗೇ ಶಾಕ್; ಬಯಲಾಗಿದ್ದು ಎರಡು ಪ್ರಕರಣ!
ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆ ಮಾಡಿದ ರೀತಿಯಲ್ಲಿ ವ್ಯಕ್ತಿಯೋರ್ವರ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ದೊಡ್ಡ ಅಚ್ಚರಿ ಕಾದಿತ್ತು. ಅಕ್ರಮ ಸಂಬಂಧ ಕಾರಣಕ್ಕೆ ನಡೆದ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಬಂಧಿಸಿ ವಿಚಾರಿಸಿದಾಗ, ಆತ 2022ರ ಹುಬ್ಬಳ್ಳಿಯಲ್ಲಿ ನಡೆದಿದ್ದ ಮತ್ತೊಂದು ಮರ್ಡರ್ ಅನ್ನು ಸಹ ತಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ.

ಬೆಳಗಾವಿ, ಡಿಸೆಂಬರ್ 27: ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆಯಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆ ಪ್ರಕಣ ತನಿಖೆ ವೇಳೆ ಪೊಲೀಸರೇ ದಂಗಾಗಿದ್ದಾರೆ. ಅಕ್ರಮ ಸಂಬಂಧದ ಕಾರಣಕ್ಕೆ ವ್ಯಕ್ತಿ ಕೊಲೆಯಾಗಿರೋದು ಗೊತ್ತಾಗಿದ್ದರೆ, ಆರೋಪಿ ಈ ಹಿಂದೆ ಮತ್ತೊಂದು ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಎಂಬುದೂ ಬಯಲಾಗಿದೆ.
ಅಕ್ಟೋಬರ್ 22ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆ ಮಾಡಿದ ರೀತಿಯಲ್ಲಿ ವ್ಯಕ್ತಿಯೋರ್ವರ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನ ಗುರುತು ಪತ್ತೆಯಾಗದ ಕಾರಣ ಪೊಲೀಸರು ಫಿಂಗರ್ ಪ್ರಿಂಟ್ ಹಾಗೂ ಆತನ ಕೈ ಮೇಲಿದ್ದ ಟ್ಯಾಟೂ ಆಧಾರಿಸಿ ತನಿಖೆಗೆ ಮುಂದಾಗಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಅಥಣಿ ತಾಲೂಕಿನ ಮಹೇಶವಾಡಿ ಗ್ರಾಮದ ನಿವಾಸಿ ತುಕಾರಾಮ್ ಶಿಂಗೆ ಎಂಬುದು ಗೊತ್ತಾಗಿದೆ. ರಾಯಭಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಮಾವನ ಮನೆಯಲ್ಲೇ ಬೆಳೆದಿದ್ದ ತುಕಾರಾಮ್, ರೇಲ್ವೆ ನಿಲ್ದಾಣದಲ್ಲಿ ಖಾಲಿ ಬಾಟಲ್ ಆರಿಸಿ ಗುಜರಿಗೆ ಹಾಕುವ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ: ಮದುವೆಯಾಗು ಎಂದಿದ್ದಕ್ಕೆ ಕತ್ತು ಸೀಳಿ ಕೊಂದ ಪ್ರಿಯಕರ; ನರ್ಸ್ ಮನೆಯಲ್ಲಿ ಹರಿದಿದ್ದು ರಕ್ತದೋಕುಳಿ!
ಮುಂದಿನ ತನಿಖೆ ಭಾಗವಾಗಿ ಅನುಮಾನದ ಆಧಾರದಲ್ಲಿ ಪೊಲೀಸರು ಘಟಪ್ರಭಾದ ಬಾರ್ಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಬಾರ್ನಲ್ಲಿ ತುಕಾರಾಮ್ ಮದ್ಯ ಸೇವನೆ ಮಾಡ್ತಿರೋದು ಪತ್ತೆಯಾಗಿದೆ. ಈತನ ಜೊತೆ ಮತ್ತೊಬ್ಬ ಇರೋದು ಕೂಡ ಕಂಡಿದೆ. ಹೀಗಾಗಿ ಆತ ಯಾರೆಂಬ ಬಗ್ಗೆ ವಿಚಾರಣೆಗೆ ಇಳಿದಾಗ ತುಕಾರಾಮ್ ಜೊತೆಗೆ ಇದ್ದವ ಮಹಾರಾಷ್ಟ್ರ ಮೂಲದ ಆರೀಫ್ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ಸಂಬಂಧ ಈತನ ವಿಚಾರಣೆ ನಡೆಸಿದಾಗ ಕೊಲೆಗೂ ನನಗೂ ಸಂಬಂಧ ಇಲ್ಲ ಎಂದಿದ್ದಾನೆ. ಆದರೆ, ಚಿಕ್ಕೋಡಿ ಮೂಲದ ಪ್ರದೀಪ್ ನಾಯಕ್ ಎಂಬಾತನ ಜೊತೆಗೆ ತುಕಾರಾಮ್ ಜಗಳವಾಡಿದ್ದ ಎನ್ನುವ ವಿಷಯ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪ್ರದೀಪ್ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಆರೀಫ್ಗೆ ಪೊಲೀಸರು ಸೂಚಿಸಿದ್ದಾರೆ.
ರೈಲುಗಳಲ್ಲಿ ಓಡಾಡುತ್ತಾ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ಪ್ರದೀಪ್ ಮಹಾರಾಷ್ಟ್ರದ ಪುಣೆಯ ಬಳಿಯ ನೀರಾ ರೈಲ್ವೆ ನಿಲ್ದಾಣಕ್ಕೆ ಬಂದಿರೋ ಮಾಹಿತಿಯನ್ನು ಆರಿಫ್ ಪೊಲೀಸರಿಗೆ ತಿಳಿಸಿದ್ದು, ಖಾಕಿ ಟೀಂ ನೀರಾ ರೈಲು ನಿಲ್ದಾಣ ತಲುಪಿ ಪ್ರದೀಪ್ ಬಂಧನಕ್ಕೆ ಮುಂದಾಗಿದೆ. ಆದರೆ ಈ ವೇಳೆ ಆತ ಎಸ್ಕೇಪ್ ಆಗಿದ್ದು, ಮಹಾರಾಷ್ಟ್ರದ ಔಟ್ ಪೋಸ್ಟ್ ಪೊಲೀಸರ ಸಹಾಕಾರದಿಂದಾಗಿ ಕೊನೆಗೂ ಆರೋಪಿ ಬಂಧಿಸುವಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ. ವಿಚಾರಣೆ ವೇಳೆ ತುಕಾರಾಮ್ ಸತ್ಯ ಬಾಯ್ಬಿಟ್ಟಿದ್ದು, ತನ್ನ ಪ್ರೇಯಸಿ ಜೊತೆಗೆ ತುಕಾರಾಮ್ಗೆ ಅನೈತಿಕ ಸಂಬಂಧ ಇತ್ತು. ಅದೇ ಕಾರಣಕ್ಕೆ ಆತ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಬುಲ್ಲಿ ಮಹಾದೇವ್ ಕೊಲೆ ರಹಸ್ಯವೂ ರಿವೀಲ್
ಆರೋಪಿ ಪ್ರದೀಪ್ ವಿಚಾರಣೆ ವೇಳೆ ಮತ್ತೊಂದು ಕೊಲೆ ರಹಸ್ಯವೂ ರಿವೀಲ್ ಆಗಿದೆ. 2022ರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬುಲ್ಲಿ ಮಹಾದೇವ ಎಂಬವರನ್ನು ಕೊಲೆ ಮಾಡಿ ಚರಂಡಿಯಲ್ಲಿ ಎಸೆಯಲಾಗಿತ್ತು. ಸರಿಯಾದ ಸಾಕ್ಷ್ಯಾಧಾರಗಳು ಸಿಗದ ಕಾರಣ ರೈಲ್ವೆ ಪೊಲೀಸರು ಕೇಸ್ ಕ್ಲೋಸ್ ಮಾಡಿದ್ದರು. ಈ ಕೊಲೆಯನ್ನೂ ತಾನೇ ಮಾಡಿರೋದಾಗಿ ಪ್ರದೀಪ್ ಒಪ್ಪಿಕೊಂಡಿದ್ದು, ಆ ಮೂಲಕ ಹಳೆಯ ಕೇಸ್ ಕೂಡ ರೀ ಓಪನ್ ಆಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




