AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar DC: ಸರ್ಕಾರಿ ಭೂ ಮಂಜೂರಿಗಾಗಿ ಜಿಲ್ಲಾಧಿಕಾರಿಯ ನಕಲಿ ಸಹಿ ಮಾಡಿದ ಪ್ರಕರಣ: ಕಂದಾಯ ಇಲಾಖೆಯ ಇಬ್ಬರು ಅರೆಸ್ಟ್ ಆದರು!

ಮೇಲ್ನೋಟಕ್ಕೆ ತಹಶೀಲ್ದಾರ್ ಕಚೇರಿಯ ಕೆಲವು ಮೂಲ ದಾಖಲೆಗಳನ್ನು ಹರಿದು ಹಾಕಲಾಗಿದೆ ಅನ್ನೋ ಮಾಹಿತಿ ಸಿಕ್ಕಿದ್ದು, ತಾಲ್ಲೂಕು ಕಚೇರಿಯ ಸಿಸಿಟಿವಿ ಕ್ಯಾಮರಾಗಳು ಘಟನೆ ನಡೆದ ದಿನ ಕಾರ್ಯನಿರ್ವಹಿಸದಂತೆ ಮಾಡಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನೋದರ ಕುರಿತು ಕೂಲಂಕಶ ತನಿಖೆ ಮಾಡಲಾಗುತ್ತಿದೆ.

Kolar DC: ಸರ್ಕಾರಿ ಭೂ ಮಂಜೂರಿಗಾಗಿ ಜಿಲ್ಲಾಧಿಕಾರಿಯ ನಕಲಿ ಸಹಿ ಮಾಡಿದ ಪ್ರಕರಣ: ಕಂದಾಯ ಇಲಾಖೆಯ ಇಬ್ಬರು ಅರೆಸ್ಟ್ ಆದರು!
ವಕ್ಕಲೇರಿಯ ಕಂದಾಯ ನಿರೀಕ್ಷಕ ಮಂಜುನಾಥ್ ಹಾಗೂ ಕೇಸ್ ವರ್ಕರ್ ಶೈಲಜಾ ಬಂಧನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 30, 2022 | 8:10 PM

ಕೋಲಾರದಲ್ಲಿ ಕೋಟ್ಯಾಂತರ ರೂಪಾಯಿ ಸರ್ಕಾರಿ ಜಮೀನನ್ನು ಕಬಳಿಸಲು ಜಿಲ್ಲಾಧಿಕಾರಿಗಳ ಸಹಿಯನ್ನೆ ನಕಲು ಮಾಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಾಲ್ಲೂಕು ಕಚೇರಿಯಲ್ಲಿರುವ ದಲ್ಲಾಳಿಗಳ ಜೊತೆಗೆ ಸೇರಿ ಕಂದಾಯ ಇಲಾಖೆ ಸಿಬ್ಬಂದಿಯೇ ಭಾಗಿಯಾಗಿದ್ದು, ಸದ್ಯ ಕೋಲಾರ ತಾಲ್ಲೂಕು ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಜಿಲ್ಲಾಧಿಕಾರಿಯ ಸಹಿ ನಕಲಿ ಪ್ರಕರಣಕ್ಕೆ ಟ್ವಿಸ್ಟ್​..!

ಕೋಲಾರ ಜಿಲ್ಲಾಧಿಕಾರಿ ಸಹಿ ನಕಲು ಮಾಡಿ ಸರ್ಕಾರಿ ಭೂಮಿ ಮಂಜೂರು ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲಾರದ ಗಲ್‌ಪೇಟೆ ಪೊಲೀಸರು ಇಬ್ಬರು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಕೋಲಾರ ತಾಲ್ಲೂಕು ಆಲಹಳ್ಳಿ ಗ್ರಾಮದ ಸರ್ವೆ ನಂ. 127 ರಲ್ಲಿ 3.37 ಎಕರೆ ಜಮೀನು ಮಂಜೂರಿಗೆ ನಕಲಿ ದಾಖಲೆ ಸೃಷ್ಟಿ ಮಾಡಲಾಗಿತ್ತು. ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಮೀಪವಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಂಜೂರು ಮಾಡಲು ಆದೇಶಿಸಿದಂತೆ ನಕಲು ದಾಖಲೆ ಸೃಷ್ಟಿ ಮಾಡಿ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿ ನಕಲು ಮಾಡಿ ದಾಖಲೆ ಸೃಷ್ಟಿಸಲಾಗಿತ್ತು.

ಪಹಣಿಯಲ್ಲಿ ಸರ್ಕಾರಿ ಕಟ್ಟೆಯನ್ನು ಸರ್ಕಾರಿ ಖರಾಬು ಎಂದು ತಿದ್ದಲಾಗಿತ್ತು. ತಾಲ್ಲೂಕು ಕಚೇರಿ ಸಿಬ್ಬಂದಿ ಕಡತಗಳನ್ನ ತಿರಸ್ಕರಿಸಿದ್ದ ಪ್ರತಿಯನ್ನು ಪುರಸ್ಕರಿಸಲಾಗಿದೆ ಎಂದು ದಾಖಲೆಗಳನ್ನು ತಿದ್ದಲಾಗಿತ್ತು. ಈ ಸಂಬಂಧ ಕೋಲಾರ ತಹಶೀಲ್ದಾರ್​ ನಾಗರಾಜ್​ ಕೋಲಾರ ನಗರದ ಗಲ್‌ಪೇಟೆ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಾಥಮಿಕ ಹಂತದ ತನಿಖೆ ಕೈಗೊಂಡಿರುವ ಗಲ್​ಪೇಟೆ ಪೊಲೀಸರು ವಕ್ಕಲೇರಿ ಕಂದಾಯ ನಿರೀಕ್ಷಕ ಮಂಜುನಾಥ್ ಹಾಗೂ ತಾಲ್ಲೂಕು ಕಚೇರಿ ಕೇಸ್ ವರ್ಕರ್ ಶೈಲಜಾ ಎಂಬುವರನ್ನು ಬಂಧಿಸಿದ್ದರೆ, ತಾಲ್ಲೂಕು ಕಚೇರಿ ಶಿರಸ್ತೇದಾರ ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ.

ತಹಶೀಲ್ದಾರ್​ ಸೇರಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ..!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಜನ ಕೋಲಾರ ತಾಲ್ಲೂಕು ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಹಶೀಲ್ದಾರ್​ ಅವರಿಗೆ ನೋಟಿಸ್​ ನೀಡಿ ತಹಶೀಲ್ದಾರ್​ ನಾಗರಾಜ್​ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಅಷ್ಟೇ ಅಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಈ ಪ್ರಕರಣದ ಲಾಭ ಪಡೆಯಲು ಮುಂದಾಗಿರುವ ಸನ್​ ಲಾರ್ಜ್​ ಕಂಪನಿಗೂ ನೋಟಿಸ್​ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸುವುದಾಗಿ ಕೋಲಾರ ಎಸ್ಪಿ ಡಿ. ದೇವರಾಜ್​ ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಗೆದಷ್ಟು ಹೊರಬರುತ್ತಿವೆ ಅಕ್ರಮಗಳು..!

ಇನ್ನು ಜಿಲ್ಲಾಧಿಕಾರಿ ಸಹಿ ನಕಲು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ತನಿಖೆಯನ್ನ ಎ.ಎಸ್ಪಿ. ಸಚಿನ್ ಘೋರ್ಪಡೆ ಅವರಿಗೆ ವಹಿಸಿದ್ದಾರೆ. ಅದರಂತೆ ಸಧ್ಯ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಈಗಾಗಲೇ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮೇಲ್ನೋಟಕ್ಕೆ ತಹಶೀಲ್ದಾರ್ ಕಚೇರಿಯ ಕೆಲವು ಮೂಲ ದಾಖಲೆಗಳನ್ನು ಹರಿದು ಹಾಕಲಾಗಿದೆ ಅನ್ನೋ ಮಾಹಿತಿ ಸಿಕ್ಕಿದ್ದು, ತಾಲ್ಲೂಕು ಕಚೇರಿಯ ಸಿಸಿಟಿವಿ ಕ್ಯಾಮರಾಗಳು ಘಟನೆ ನಡೆದ ದಿನ ಕಾರ್ಯನಿರ್ವಹಿಸದಂತೆ ಮಾಡಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನೋದರ ಕುರಿತು ಕೂಲಂಕಶ ತನಿಖೆ ಮಾಡಲಾಗುತ್ತಿದೆ.

ಸದ್ಯ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ನಕಲಿ ಸಹಿ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ತಾಲ್ಲೂಕು ಕಚೇರಿಯಲ್ಲಿ ನಕಲಿ ವಂಶವೃಕ್ಷ ತಯಾರು ಮಾಡಿ ಎಂಟು ಎಕರೆ ಜಮೀನಿನನ್ನು 10 ಲಕ್ಷ ರೂಪಾಯಿ ಹಣ ಪಡೆದು ಖಾತೆ ಮಾಡಿಕೊಟ್ಟಿದ್ದಾರೆಂದು ಕೋಲಾರ ತಾಲ್ಲೂಕು ಮಾರ್ಕೊಂಡಪುರದ ರಂಗನಾಥ್​ ಹಾಗೂ ಮಂಜುನಾಥ್​ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದಾರೆ.

ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದ ಜಿಲ್ಲಾಧಿಕಾರಿ..!

ಇನ್ನು ತಮ್ಮ ಸಹಿಯನ್ನು ನಕಲು ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕೂಡಾ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲಾ, ಇದು ನಿಜಕ್ಕೂ ಆಘಾತಕಾರಿ ಸಂಗತಿ ಎಂದು ಜಿಲ್ಲಾಧಿಕಾರಿ ವೆಂಕಟ ರಾಜಾ ಬೇಸರ ವ್ಯಕ್ತಪಡಿಸಿದ್ದಾರೆ.

-ರಾಜೇಂದ್ರ ಸಿಂಹ

Published On - 8:07 pm, Thu, 30 June 22