ಫೇಸ್ಬುಕ್ ಮಾಯಾಲೋಕದಲ್ಲಿ ಸುಂದರಿಯ ಬೆನ್ನುಬಿದ್ದು ಸುಂದರ ಸಂಸಾರ ಹಾಳುಮಾಡಿಕೊಂಡ ಭೂಪ, ರೋಸಿಹೋದ ಪತ್ನಿ ಮಾಡಿದ್ದೇನು ಗೊತ್ತಾ?
Facebook love: ಫೇಸ್ಬುಕ್ ಸುಂದರಿ ಜೊತೆಗಿನ ಶಶಿಕುಮಾರನ ಚೆಲ್ಲಾಟ ಅತಿಯಾದಾಗ ಅವನನ್ನು ಕರೆಸಿ ರಾಜಿ ಪಂಚಾಯ್ತಿ ಮಾಡುವ, ಮನೆಯ ಹಿರಿಯರಿಂದ ಬುದ್ದಿ ಹೇಳಿಸುವ ಕೆಲಸ ಕೂಡಾ ಮಾಡಿದ್ದರು. ಆದರೆ ಅದು ಅವನ ತಲೆಗೆ ಹೋಗೇ ಇಲ್ಲಾ, ಬುದ್ದಿ ಹೇಳಿದಷ್ಟೂ ಅವನ ಚೆಲ್ಲಾಟ ಅತಿಯಾಗುತ್ತಲೇ ಇತ್ತು.
ಅತನಿಗೆ ಮದುವೆಯಾಗಿ ಒಂಬತ್ತು ವರ್ಷ ಕಳೆದಿತ್ತು, ಸುಂದರವಾದ ಸಂಸಾರವಿತ್ತು, ಕಷ್ಟ ಸುಖ ಹೇಳಿಕೊಳ್ಳೋದಕ್ಕೆಂದು ಹೆಂಡತಿಯೂ ಇದ್ದಳು. ಅದರೂ ಆತನಿಗೆ ಶುರುವಾಗಿದ್ದ ಫೇಸ್ಬುಕ್ ಹುಚ್ಚು ಮತ್ತೊಬ್ಬಳು ಸುಂದರಿಯನ್ನು ಹಿಡಿದುಕೊಟ್ಟಿತ್ತು. ಆಕೆಯ ಹಿಂದೆ ಬಿದ್ದವನು ಹೆಂಡತಿಯನ್ನು ಬಿಟ್ಟು ಆ ಫೇಸ್ಬುಕ್ ಸುಂದರಿ (Facebook Love) ಹಿಂದೆಯೇ ಬಿದ್ದುಬಿಟ್ಟ, ಇದರಿಂದ ಮನನೊಂದ ಹೆಂಡತಿ (Wife) ಆತ್ಮಹತ್ಯೆ ದಾರಿ (Suicide) ಹಿಡಿದಿದ್ದಾಳೆ. ಫೇಸ್ಬುಕ್ ಸುಂದರಿಯ ಜೊತೆಗೆ ಪೋಸ್ ಕೊಡುತ್ತಿರುವ ಶಶಿಕುಮಾರ, ಮತ್ತೊಂದೆಡೆ ವಿಷ ಸೇವಿಸಿದ ಗೃಹಿಣಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ದೃಶ್ಯಗಳು, ಇನ್ನೊಂದೆಡೆ ಆಕೆಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತಿರುವ ಪೊಲೀಸರು ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದಲ್ಲಿ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು (Srinivaspur, Kolar) ಸೋಮಯಾಜಲಹಳ್ಳಿ ಗ್ರಾಮದ ಶಶಿಕುಮಾರ್ ಕಳೆದ ಒಂಬತ್ತು ವರ್ಷಗಳ ಹಿಂದೆ ಪಕ್ಕದ ಗ್ರಾಮ ಕಾನಮಾಕನಹಳ್ಳಿ ಗ್ರಾಮದ ಆಶಾರಾಣಿ ಎಂಬಾಕೆಯನ್ನು ಮದುವೆಯಾಗಿದ್ದ.
ವೆಲ್ಡಿಂಗ್ ಕೆಲಸ ಮಾಡಿಕೊಂಡು ತನ್ನ ಕೈಲಾದಷ್ಟು ದುಡಿದು ಮನೆಗೆ ತಂದು ಹಾಕಿ ಸಂಸಾರ ಚೆನ್ನಾಗಿಯೇ ನಡೆಸಿಕೊಂಡು ಹೊಗುತ್ತಿದ್ದ. ಕಳೆದ ಕೆಲವು ವರ್ಷಗಳ ಹಿಂದೆ ತಂದೆಯೊಂದಿಗೆ ಮನಸ್ತಾಪವಾದ ಹಿನ್ನೆಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಮನೆ ಮಾಡಿಕೊಟ್ಟಿದ್ದರು. ಅಲ್ಲಿ ಹೆಚ್ಚು ದಿನ ಇರದೆ ಮತ್ತೆ ವಾಪಸ್ ಸೋಮಯಾಜಲಹಳ್ಳಿಯಲ್ಲಿ ಬಂದು ನೆಲೆಸಿದ್ದರು.
ಆದರೆ ಇತ್ತೀಚೆಗೆ ಅಂದರೆ ಕಳೆದ ನಾಲ್ಕೈದು ತಿಂಗಳಿಂದ ಶಶಿಕುಮಾರನಿಗೆ ಫೇಸ್ಬುಕ್ ಅನ್ನೋ ಮಾಯಾ ಲೋಕ ಅವನಿಗೆ ದೊಡ್ಡಬಳ್ಳಾಪುರ ಮೂಲದ ದೀಪಿಕ ಪಲ್ಲವಿ ಎಂಬ ಯುವತಿಯನ್ನು ಪರಿಚಯ ಮಾಡಿಕೊಟ್ಟಿತ್ತು. ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಮಹಿಳೆಯ ಜೊತೆಗೆ ಆರಂಭವಾದ ಚಾಟಿಂಗ್, ವಿಡಿಯೊ ಕಾಲ್, ಗಂಟೆಗಟ್ಟಲೆ ಟಾಕಿಂಗ್ ಅದು ಇದೂ ಕೊನೆಗೆ ಮೀಟಿಂಗ್ ವರೆಗೆ ಕರೆದುಕೊಂಡು ಹೋಗಿಬಿಟ್ಟಿತು.
ಅವರಿಬ್ಬರೂ ಕೈಕೈ ಹಿಡಿದು ಪಾರ್ಕ್, ಸಿನಿಮಾ ಅಂತೆಲ್ಲಾ ಸುತ್ತಾಡಿ, ಕೊನೆಗೆ ಶಶಿಕುಮಾರ ಹೋಗಿ ಅವರದ್ದೇ ಮನೆಯಲ್ಲಿ ವಾರಾನುಗಟ್ಟಲೆ ಇದ್ದು ಬರುವುದು ಹೀಗೆಲ್ಲಾ ಶುರುವಾಗಿ ಹೋಗಿದೆ, ಇದೆಲ್ಲವನ್ನು ಕಂಡು ಹೆಂಡತಿ ಆಶಾರಾಣಿ ಹಾಗೂ ಅವರ ಮನೆಯವರು ಕರೆದು ಸಾಕಷ್ಟು ಬುದ್ದಿ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಶಶಿಕುಮಾರ್ ಫೇಸ್ಬುಕ್ ಸುಂದರಿಯ ಹಿಂದೆ ಬಿದ್ದಿದ್ದ. ಅಷ್ಟೇ ಸಾಲದು ಎನ್ನುವಂತೆಯೂ ಅವಳ ಜೊತೆಗೆ ಇರುವ ಪೋಟೋಗಳನ್ನು ಹೆಂಡತಿ ಹಾಗೂ ಅವರ ಅಣ್ಣತಮ್ಮಂದಿರಿಗೂ ಕಳಿಸಿದ್ದ.
ಇನ್ನು ಫೇಸ್ಬುಕ್ ಸುಂದರಿ ಜೊತೆಗಿನ ಶಶಿಕುಮಾರನ ಚೆಲ್ಲಾಟ ಅತಿಯಾದಾಗ ಅವನನ್ನು ಕರೆಸಿ ರಾಜಿ ಪಂಚಾಯ್ತಿ ಮಾಡುವ, ಮನೆಯ ಹಿರಿಯರಿಂದ ಬುದ್ದಿ ಹೇಳಿಸುವ ಕೆಲಸ ಕೂಡಾ ಮಾಡಿದ್ದರು. ಆದರೆ ಅದು ಅವನ ತಲೆಗೆ ಹೋಗೇ ಇಲ್ಲಾ, ಬುದ್ದಿ ಹೇಳಿದಷ್ಟೂ ಅವನ ಚೆಲ್ಲಾಟ ಅತಿಯಾಗುತ್ತಲೇ ಇತ್ತು. ನಿನ್ನ ಕೈಲಿ ಏನಾಗುತ್ತೋ ಅದು ಮಾಡ್ಕೋ ನಾನು ಅವಳನ್ನೂ ನೋಡ್ಕೋತಿನಿ, ನಿನ್ನನ್ನೂ ನೋಡ್ಕೋತಿನಿ ಎಂದೆಲ್ಲಾ ಹೇಳಲು ಶುರುಮಾಡಿಕೊಂಡಿದ್ದ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಮದುವೆಯಾಗಿ 9 ವರ್ಷ ಕಳೆದರೂ ಆಶಾರಾಣಿಗೆ ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಅವನು ತನ್ನ ಮನಸ್ಸಿಗೆ ಬಂದಂತೆ ಪತ್ನಿಯ ಮೇಲೆ ದೌರ್ಜನ್ಯ ಮಾಡುತ್ತಿದ್ದ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರಿಗೂ ದೂರು ಕೊಡಲಾಗಿತ್ತು. ಆದರೂ ಪೊಲೀಸ್ ಠಾಣೆಯಲ್ಲೂ ಇದು ಸಾಂಸಾರಿಕ ವಿಚಾರ ಎಂದು ಬೈದು ಬುದ್ದಿ ಹೇಳಿ ಕಳಿಸಿದ್ದರು.
ಆದರೂ ಇದ್ಯಾವುದನ್ನೂ ಲೆಕ್ಕ ಹಾಕದೆ ಶಶಿಕುಮಾರ ಹಾಗೂ ಫೇಸ್ಬುಕ್ ಸುಂದರಿ ಪಲ್ಲವಿ ಜೊತೆಗಿನ ಲವ್ವಿಡವ್ವಿ ಮಿತಿ ಮೀರಿಹೋಗಿತ್ತು. ಜೊತೆಗೆ ಅವರಿಬ್ಬರ ಪೋಟೋಗಳನ್ನು ತನ್ನ ಹೆಂಡತಿಗೂ ಕಳಿಸಿದ್ದ. ಕಳೆದ 9 ವರ್ಷಗಳಿಂದ ಶಶಿಕುಮಾರನ ಜೊತೆಗೆ ಸಂಸಾರ ಮಾಡಿದ್ದ ಪತ್ನಿ ಆಶಾರಾಣಿ ಕಳೆದ ರಾತ್ರಿ ಶಶಿಕುಮಾರ ಕೊಡುತ್ತಿದ್ದ ಮಾನಸಿಕ ಕಿರುಕುಳದಿಂದ ಬೇಸತ್ತು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ವಿಷಯ ತಿಳಿದು ಕೂಡಲೇ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ, ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಶಶಿಕುಮಾರ್ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಒಟ್ಟಾರೆ ಫೇಸ್ಬುಕ್ ಅನ್ನೋ ಮಾಯೋ ಲೋಕದಲ್ಲಿ ಬಿದ್ದಿರುವ ಶಶಿಕುಮಾರ ಫೇಸ್ಬುಕ್ ಸುಂದರಿಯ ಬಲೆಗೆ ಬಿದ್ದು ತನ್ನ ಸಂಸಾರವನ್ನು ಹಾಳು ಮಾಡಿಕೊಂಡಿದ್ದಾನೆ. ಇತ್ತ ಆಶಾರಾಣಿ ಕೂಡಾ ತನ್ನ ಗಂಡನ ಹತ್ತಾರು ತಪ್ಪುಗಳಿದ್ದರೂ ಸಹಿಸಿಕೊಂಡು ಗಂಡನೇ ನನ್ನ ಸರ್ವಸ್ವ ಎಂದುಕೊಂಡಿದ್ದಳು. ಆದರೆ ಈ ಫೇಸ್ಬುಕ್ ಹುಡುಕಿಕೊಟ್ಟ ಈ ಸುಂದರಿಯಿಂದ ಈಗ ಒಂದು ಸಂಸಾರ ಎರಡಾಗಿರೋದಂತೂ ಸುಳ್ಳಲ್ಲ.
ವರದಿ: ರಾಜೇಂದ್ರಸಿಂಹ, ಟಿವಿ 9, ಕೋಲಾರ
Published On - 11:57 am, Thu, 12 January 23