AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar News: ರೇಷ್ಮೆ ಕೃಷಿ ಮಾಡಿ ನಷ್ಟ ಅನುಭವಿಸಿದ ರೈತರು; ಕಳಪೆ ಹುಳುಗಳ ವಿತರಣೆಯೇ ಕಾರಣವೆಂದ ಅನ್ನದಾತ

ಅವರು ಹತ್ತಾರು ವರ್ಷಗಳಿಂದಲೂ ರೇಷ್ಮೆ ಕೃಷಿ ಮಾಡಿಕೊಂಡು ಜೀವನ ಮಾಡಿಕೊಂಡು ಬರುತ್ತಿರುವ ಕುಟುಂಬ. ಆದರೆ, ಕಳಪೆ ರೇಷ್ಮೆ ಮೊಟ್ಟೆ ಹಾಗೂ ವಾತಾವರಣದಲ್ಲಿನ ಏರುಪೇರಿನ ಪರಿಣಾಮ ಕಷ್ಟಪಟ್ಟು ಬೆಳೆದಿದ್ದ ರೇಷ್ಮೆ ಬೆಳೆ ನೆಲಕಚ್ಚಿದ್ದು, ಗೂಡು ಕಟ್ಟಬೇಕಿದ್ದ ರೇಷ್ಮೆ ಹುಳುಗಳು ಗೂಡು ಕಟ್ಟದೆ ರೇಷ್ಮೆ ಬೆಳೆದ ರೈತನಿಗೆ ಆಘಾತ ತಂದೊಡ್ಡಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ನೋಡಿ.

Kolar News: ರೇಷ್ಮೆ ಕೃಷಿ ಮಾಡಿ ನಷ್ಟ ಅನುಭವಿಸಿದ ರೈತರು; ಕಳಪೆ ಹುಳುಗಳ ವಿತರಣೆಯೇ ಕಾರಣವೆಂದ ಅನ್ನದಾತ
ನೊಂದ ರೈತ
ಕಿರಣ್ ಹನುಮಂತ್​ ಮಾದಾರ್
|

Updated on: Jun 17, 2023 | 3:15 PM

Share

ಕೋಲಾರ: ರೈತ ಹಾಕಿದ್ದ ಹಿಪ್ಪುನೇರಳೆ ಸೊಪ್ಪು ತಿಂದು ಸಮೃದ್ದವಾಗಿ ಬೆಳೆದು ನಿಂತಿರುವ ರೇಷ್ಮೆ ಹುಳುಗಳು, ರೇಷ್ಮೆ(Silk) ಗೂಡು ಕಟ್ಟಿ ರೈತನಿಗೆ ಲಾಭ ತಂಡುಕೊಡಬೇಕಿದ್ದ ಹುಳುಗಳಿಂದ ನಷ್ಟ ಅನುಭವಿಸಿದ ರೈತ, ಇದೆಲ್ಲ ಕಂಡು ಬಂದಿದ್ದು ಕೋಲಾರ(Kolar) ತಾಲೂಕಿನ ವರದೇನಹಳ್ಳಿ. ಹೌದು ಗ್ರಾಮದ ರೈತ ರಮೇಶ್​ ಎಂಬುವವರು ಹಲವಾರು ದಶಕಗಳಿಂದ ರೇಷ್ಮೆ ಕೃಷಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರು ಬೆಳೆದಿದ್ದ ರೇಷ್ಮೆ ಬೆಳೆ ಕೈಕೊಟ್ಟಿದ್ದು, ಅಲ್ಲದೆ ಸಾವಿರಾರು ರೂಪಾಯಿ ನಷ್ಟ ಉಂಟು ಮಾಡಿದೆ. ರೈತ ರಮೇಶ್​ಗೆ ಈ ಬಾರಿ ರೇಷ್ಮೆ ಬೆಳೆ ಕೈಕೊಡಲು ಪ್ರಮುಖ ಕಾರಣ ಕಳಪೆ ರೇಷ್ಮೆ ಹುಳು ಹಾಗೂ ರೇಷ್ಮೆ ಮೊಟ್ಟೆ ಎಂದು ರೈತ ಆರೋಪಿಸಿದ್ದಾರೆ. ರೈತ ರಮೇಶ್​ ಚಿಕ್ಕಬಳ್ಳಾಪುರದ ದೇವರಾಜ್ ಎಂಬುವರ ಬಳಿ ರೇಷ್ಮೆ ಮೊಟ್ಟೆ ಹಾಗೂ ಹುಳು ತಂದಿದ್ದು, ಎಂದಿನಂತೆ ತಮ್ಮ ರೇಷ್ಮೆ ಹುಳು ಮನೆಯಲ್ಲಿ ರೇಷ್ಮೆ ಹುಳುಗಳನ್ನು ಮೇಯಿಸಿದ್ದಾರೆ, ಆದರೆ ಏಳರಿಂದ ಎಂಟು ದಿನಕ್ಕೆ ಗೂಡು ಕಟ್ಟಬೇಕಿದ್ದ ರೇಷ್ಮೆ ಹುಳುಗಳು ಹನ್ನೆರಡು ದಿನವಾದರೂ ಗೂಡು ಕಟ್ಟಿಲ್ಲ. ಬದಲಾಗಿ ರೈತರ ಹಾಕಿದ ಹಿಪ್ಪುನೇರಳೆ ಸೊಪ್ಪನ್ನು ತಿಂದು ದಷ್ಟಪುಷ್ಟವಾಗಿ ಬೆಳೆದು ನಿಂತಿವೆ ಇದರಿಂದ ರೈತ ರಮೇಶ್​ ಕಂಗಾಲಾಗಿದ್ದಾರೆ.

60 ಸಾವಿರ ರೂಪಾಯಿ ಬಂಡವಾಳ ಹಾಕಿ 150 ಮೊಟ್ಟೆ ಬಿತ್ತನೆ

ಹೌದು ಸುಮಾರು 60 ಸಾವಿರ ರೂಪಾಯಿ ಬಂಡವಾಳ ಹಾಕಿ 150 ಮೊಟ್ಟೆ ಬಿತ್ತನೆ ಮಾಡಿದ್ದರು. ಇದರಿಂದ ಸುಮಾರು ಒಂದುವರೆ ಲಕ್ಷ ರೂಪಾಯಿಯಷ್ಟು ಆದಾಯ ಬರಬೇಕಿದ್ದ ರೇಷ್ಮೆ ಬೆಳೆ. ರೇಷ್ಮೆ ಹುಳು ಗೂಡು ಕಟ್ಟದೆ ರೈತ ರಮೇಶ್​ಗೆ ಸಾವಿರಾರು ರೂಪಾಯಿ ನಷ್ಟು ತಂದೊಡ್ಡಿದೆ. ಇನ್ನು ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವೆಡೆಯಿಂದ ರೇಷ್ಮೆ ಮೊಟ್ಟೆಗಳನ್ನು ತಂದು ರೇಷ್ಮೆ ಹುಳು ಸಾಕಾಣಿಕೆ ಮಾಡುವ ರೈತರಿಗೆ ಇತ್ತೀಚೆಗೆ ಕಳಪೆ ಗುಣಮಟ್ಟದ ರೇಷ್ಮೆ ಮೊಟ್ಟೆ ಹಾಗೂ ಹುಳುಗಳನ್ನು ವಿತರಣೆ ಮಾಡಲಾಗುತ್ತಿದೆ ಅನ್ನೋ ಆರೋಪ ರೈತ ವಲಯದಲ್ಲಿ ಕೇಳೀ ಬಂದಿದೆ. ಅದಕ್ಕೆ ಪೂರಕ ಎಂಬಂತೆ ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು ಐದಾರು ಜನ ರೇಷ್ಮೆ ಬೆಳೆಗಾರರಿಗೆ ಇದೇ ರೀತಿಯ ನಷ್ಟ ಉಂಟಾಗಿದೆ.

ಇದನ್ನೂ ಓದಿ:ಬೀದರ್​: ನೀರಿಲ್ಲದ ತಾಲೂಕಿನಲ್ಲಿ 75 ರೈತ ಕುಟುಂಬ 100 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ; ವರ್ಷಕ್ಕೆ ಎಕರೆಗೆ 5 ರಿಂದ 8 ಲಕ್ಷ ರೂಪಾಯಿ ಆದಾಯ

ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ದೂರು

ಈ ಬಗ್ಗೆ ರೈತ ರಮೇಶ್ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ರೇಷ್ಮೆ ಇಲಾಖೆ ಅಧಿಕಾರಿಗಳು ಕೂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೋಟಗಾರಿಕಾ ಇಲಾಖೆ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲ್ಲಿ ಹುಳುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಅಧಿಕಾರಿಗಳು ಹೇಳುವಂತೆ ಪ್ರಾಥಮಿಕವಾಗಿ ಪರಿಶೀಲನೆ ನಡೆಸಿದಾಗ ಹುಳುಗಳಿಗೆ ಆಹಾರದಲ್ಲಿ ವಿಷ ಸೇರಿದ ಹಿನ್ನೆಲೆ ಹೀಗಾಗಿರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಆದರೆ, ರೈತರು ಮಾತ್ರ ಕಳೆದ ಹಲವು ದಶಕಗಳಿಂದ ನಾವು ರೇಷ್ಮೆ ಕೃಷಿ ಮಾಡುತ್ತಿದ್ದು, ಇದು ಕಳಪೆ ಗುಣಮಟ್ಟದ ರೇಷ್ಮೆ ಮೊಟ್ಟೆಯಿಂದಲೇ ಹೀಗಾಗಿದೆ ಎನ್ನುತ್ತಿದ್ದಾರೆ. ಒಟ್ಟಾರೆ ಅದೇನೆ ಆಗಿದ್ರು, ಕಳಪೆ ಗುಣಮಟ್ಟದ ರೇಷ್ಮೆ ಮೊಟ್ಟೆ ವಿತರಣೆಯಿಂದ ನಷ್ಟ ಉಂಟಾಗಿದ್ದು, ರೇಷ್ಮೆ ಮೊಟ್ಟೆ ವಿತರಣೆ ಮಾಡಿದವರ ವಿರುದ್ದ ಕ್ರಮ ತೆಗೆದುಕೊಳ್ಳುವ ಜೊತೆಗೆ ನಷ್ಟ ಅನುಭವಿಸಿದ ರೈತನಿಗೆ ಪರಿಹಾರ ನೀಡಬೇಕು ಅನ್ನೋದು ರೈತರ ಆಗ್ರಹವಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ