ಕೋಲಾರ, ನವೆಂಬರ್ 27: ಕೋಲಾರ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯ ಕೆಲಸ ಕೋಲಾರ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿದೆ. ನದಿ ನಾಲೆಗಳಲ್ಲಿಲ್ಲದ ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಪರದಾಡುತ್ತಿದ್ದ ಜನರಿಗೆ ಜಲಜೀವನ್ ಮಿಷನ್ ಯೋಜನೆ ವರವಾಗಿ ಪರಿಣಮಿಸುತ್ತಿದೆ. ಮೊದಲು ಒಂದು ಬಿಂದಿಗೆ ನೀರಿಗಾಗಿ ಗ್ರಾಮದ ಮುಂದಿರುವ ಒಂದು ಕೊಳಾಯಿ ಎದುರು ಗಂಟೆಗಟ್ಟಲು ಕಾದು ಕುಳಿತರಬೇಕಿತ್ತು. ಕರೆಂಟ್ ಬಂದಾಗ ನೀರು ಬಿಡುತ್ತಿದ್ದ ವಾಟರ್ ಮ್ಯಾನ್ ದೇವದೂತನಂತೆ ಅವನು ನೀರು ಬಿಟ್ಟಾಗಿ ಎಲ್ಲರೂ ಕ್ಯೂನಲ್ಲಿ ನಿಂತು ಎರಡೆರಡು ಬಿಂದಿಗೆ ನೀರು ಹಿಡಿದುಕೊಂಡು ಅಷ್ಟೇ ನೀರಿನಲ್ಲಿ ಜೀವನ ಕಳೆಯಬೇಕಿತ್ತು. ಇಂಥ ಪರಿಸ್ಥಿತಿಯಲ್ಲಿದ್ದ ಗ್ರಾಮೀಣ ಭಾಗಗಳಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಗ್ರಾಮಗಳ ಮನೆ ಮನೆಗೆ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆ ದೊಡ್ಡ ಬದಲಾವಣೆಯನ್ನೇ ತಂದಿದೆ.
ಈ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗಂಗೆ ಹರಿಯುವಂತೆ ಮಾಡಿದ ಮೇಲೆ ಗ್ರಾಮದ ಮಹಿಳೆಯರು ಕೂಲಿ ಕಾರ್ಮಿಕರು ನೀರಿಗಾಗಿ ಪರದಾಡುವ ಸ್ಥಿತಿ ಬದಲಾಗಿದೆ. ಈಗ ದಿನದ 24 ಗಂಟೆಯೂ ಮನೆಯಂಗಳದ ನಲ್ಲಿಯಲ್ಲಿ ನೀರು ಹರಿಯುತ್ತಿದೆ. ಮೊದಲಿನಂತೆ ಡ್ರಂಗಳಲ್ಲಿ ಹಾಗೂ ನೀರಿನ ತೊಟ್ಟಿಯಲ್ಲಿ ನೀರನ್ನು ಸಂಗ್ರಹಿಸುವ ಅವಶ್ಯಕತೆ ಇಲ್ಲ, ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕ್ನಲ್ಲಿ ನೀರು ಇರುತ್ತದೆ. ಯಾವಾಗ ಬೇಕಾದ್ರು ಮನೆಯ ಅಂಗಳದಲ್ಲಿರುವ ನಲ್ಲಿಯಲ್ಲಿ ನೀರು ಬರುತ್ತಿರುತ್ತದೆ ಎಂದು ಕೋಲಾರ ತಾಲೂಕಿನ ಈಕಂಬಳ್ಳಿ ಗ್ರಾಮದ ಮಹಿಳೆಯರು ಟಿವಿ9 ಕನ್ನಡಕ್ಕೆ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 1,814 ಗ್ರಾಮಗಳನ್ನು ಜಲಜೀವನ ಮಿಷನ್ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ, ಈ ಪೈಕಿ ಈಗಾಗಲೇ 1,508 ಗ್ರಾಮಗಳಲ್ಲಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. 1,002 ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಜಿಲ್ಲೆಯ 100 ಗ್ರಾಮಗಳಲ್ಲಿ ಯೋಜನೆ ಪೂರ್ಣಗೊಂಡಿದೆ. ನಾಲ್ಕನೇ ಹಂತದ ಕಾಮಗಾರಿಯಲ್ಲಿ ಮಾತ್ರ ಕೆಲವೊಂದು ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳು ಇದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಹಂತತ ಯೋಜನೆಗೂ ಆಡಳಿತಾತ್ಮಕ ಕೆಲಸಗಳು ಪೂರ್ಣಗೊಳ್ಳುತ್ತಿವೆ. ಈ ಮಾಹಿತಿಯನ್ನು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀಡಿದ್ದಾರೆ.
ಇದನ್ನೂ ಓದಿ: ಕುಮಟಾ- ಶಿರಸಿ ರಸ್ತೆ ಸಂಚಾರ ಡಿಸೆಂಬರ್ 2ರಿಂದ ಫೆಬ್ರವರಿ 25ರವರೆಗೆ ಬಂದ್
ಒಟ್ಟಾರೆ ಗ್ರಾಮ ಗ್ರಾಮದ ಜನರಿಗೆ ಶುದ್ದ ಕುಡಿಯುವ ನೀರು ಸಿಗಬೇಕು ಕುಡಿಯುವ ನೀರಿಗಾಗಿ ಯಾವೊಬ್ಬ ಭಾರತೀಯನು ಪರದಾಡ ಬಾರದು ಅನ್ನೋ ಉದ್ದೇಶದಿಂದ ಮಾಡಲಾದ ಜಲಜೀವನ್ ಮಿಷನ್ ಯೋಜನೆ ಕೋಲಾರದಲ್ಲಿ ಸಾಕಾರಗೊಂಡಿದೆ. ಈ ಯೋಜನೆ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಜನರು ‘ಮನೆ ಮನೆ ಗಂಗೆ’ ಯೋಜನೆಗೆ ಮನಸೋತಿರುವುದು ಹೌದು.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ