ಕೋಲಾರ: ಮಕ್ಕಳು ಮುಕ್ತವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಿ. ಮಕ್ಕಳ ಭವಿಷ್ಯ ದೃಷ್ಟಿಯಿಂದ ಅವರನ್ನ ವಿಶ್ವಾಸಕ್ಕೆ ಪಡೆಯಬೇಕು. ಶಾಲಾ ಮಕ್ಕಳಲ್ಲಿ ವಿಷಬೀಜ ಬಿತ್ತಲಾಗುತ್ತಿದೆ ಎಂದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರು ವ್ಯಾಪಾರ ಮಾಡುವುದಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯಕ್ಕೆ ಈ ರೀತಿಯ ಪರಿಸ್ಥಿತಿ ಬರುತ್ತೆಂದು ಊಹಿಸಿರಲಿಲ್ಲ. ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯ ಹಾಳುಮಾಡುತ್ತಿವೆ. ಕೋಲಾರದಲ್ಲೂ ಕೋಮು ಸಂಘರ್ಷಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಕೋಲಾರದ ಶಾಂತಿಭಂಗಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತಾಡುವ ಅಗತ್ಯವಿಲ್ಲ. ರಾಜ್ಯದ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ. ಸಿದ್ದರಾಮಯ್ಯರನ್ನು ನಂಬಿ ಮುಸ್ಲಿಮರು ಬೀದಿಗೆ ಬಂದಿದ್ದಾರೆ. ಮುಸ್ಲಿಮರಲ್ಲೂ ಈಗ ಮರುಚಿಂತನೆ ಆರಂಭವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.
2014ರಲ್ಲಿ ಅಡಿಪಾಯ ಹಾಕಿ ಇದುವರೆಗೂ ನೀರು ಕೊಟ್ಟಿಲ್ಲ. 50 ವರ್ಷ ಆದ್ರೂ ರಾಷ್ಟ್ರೀಯ ಪಕ್ಷಗಳಿಂದ ನೀರು ಕೊಡಲಾಗಲ್ಲ. 1 ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದಿದ್ದೆ. ಅಂದು ನನ್ನ ತಲೆ ತುಂಬ ಕೂದಲಿತ್ತು, ಇಂದು ಇಲ್ಲವಾಗಿದೆ ಎಂದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಕೋಲಾರದಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಭೇಟಿ ನೀಡಿರುವ ಮಾಜಿ ಸಿಎಂ, ಕೋಲಾರ ನಗರದ ಕೊಂಡರಾಜನಹಳ್ಳಿ ನಾರಾಯಣಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾರೆ.
ಜನರ ದಿಕ್ಕು ತಪ್ಪಿಸಲು ಬಿಜೆಪಿಯವರು ಇಂತಹ ವಿಷಯಗಳನ್ನು ದೊಡ್ಡದು ಮಾಡುತ್ತಿದ್ದಾರೆ
ಶಿವಮೊಗ್ಗ: ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಹೇಳಿಕೆಗೆ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಕೆಲವರು ಈ ವಿಚಾರ ರಾಜಕೀಯವಾಗಿ ಬಳಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ಜನರ ಸಮಸ್ಯೆ ಸಾಕಷ್ಟು ವಿಷಯಗಳಿವೆ. ಜನರ ದಿಕ್ಕು ತಪ್ಪಿಸಲು ಬಿಜೆಪಿಯವರು ಇಂತಹ ವಿಷಯಗಳನ್ನು ದೊಡ್ಡದು ಮಾಡುತ್ತಿದ್ದಾರೆ. ಭಾವನಾತ್ಮಕ ವಿಚಾರ ಮಾತನಾಡಿ ದೇಶ ಮತ್ತು ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ತಪ್ಪು ಮರೆಮಾಚುತ್ತಿದೆ. ಚುನಾವಣೆ ಮುಗಿದ ತಕ್ಷಣ ಬಿಜೆಪಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಮಾರ್ಚ್ 31 ರಿಂದ ಕಾಂಗ್ರೆಸ್ ಪಕ್ಷದಿಂದ ಬೆಲೆ ಏರಿಕೆ ವಿರೋಧಿಸಿ ಹೋರಾಟ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಮಾಜವನ್ನು ಹಾಳುಮಾಡುವುದೇ ಬಿಜೆಪಿಯ ಅಜೆಂಡಾ; ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆಕ್ರೋಶ
ಇದನ್ನೂ ಓದಿ: ಕೆಲವೊಂದು ವಿಚಾರ ಹೇಳದ ಸ್ಥಿತಿ ತಂದಿಟ್ಟಿದ್ದಾರೆ; ನಾನು ಹೇಳುವುದನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ: ಸಿದ್ದರಾಮಯ್ಯ