ಕೆಲವೊಂದು ವಿಚಾರ ಹೇಳದ ಸ್ಥಿತಿ ತಂದಿಟ್ಟಿದ್ದಾರೆ; ನಾನು ಹೇಳುವುದನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ: ಸಿದ್ದರಾಮಯ್ಯ
Siddaramaiah: ಅಸ್ಪೃಶ್ಯನಾಗು ನೀನು ಅಂತಾ ದೇವರು ಬರೆದಿದ್ದಾನಾ? ಹಾಗಾದರೆ ಇವರಿಗೆ ವಿಮೋಚನೇ ಇಲ್ಲವಾ? ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಲಿಲ್ಲ ಅಂದಿದ್ದರೆ ಅಸ್ಪೃಶ್ಯತೆಗೆ ವಿಮೋಚನೆ ಸಿಗುತ್ತಿರಲಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡಿದ್ದಾರೆ.
ಮೈಸೂರು: ಕೆಲವೊಂದು ವಿಚಾರಗಳನ್ನು ಹೇಳಲಾಗದ ಸ್ಥಿತಿ ತಂದಿಟ್ಟಿದ್ದಾರೆ. ನಾನು ಹೇಳುವ ಮಾತುಗಳನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಸಾರ್ವಜನಿಕವಾಗಿ ಕೆಲವೊಂದನ್ನು ಮಾತನಾಡಲು ಆಗಲ್ಲ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಾನು ಸಿಎಂ ಆಗಿದ್ದಾಗ ಮೌಢ್ಯ ವಿರೋಧಿ ಕಾಯ್ದೆ ತಂದೆ. ಮೌಢ್ಯ ವಿರೋಧಿ ಕಾಯ್ದೆ ಕುರಿತು ಅಪಪ್ರಚಾರ ಮಾಡಿದರು. ಪಟ್ಟಭದ್ರ ಹಿತಾಸಕ್ತಿ ಜನರು ವ್ಯವಸ್ಥೆ ವಿರೋಧ ಮಾಡುತ್ತಿದ್ದಾರೆ. ಶ್ರೇಣೀಕೃತ ಸಮಾಜ ನಿರ್ಮಾಣ ವ್ಯವಸ್ಥೆ ವಿರೋಧಿಸುತ್ತಿದ್ದಾರೆ. ಈ ಜಾತಿ ವ್ಯವಸ್ಥೆ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಮುಂದೊಂದು ದಿನ ಬದಲಾವಣೆ ಆಗುತ್ತೆಂಬ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರೊ. ಕೆ.ಎಸ್ ಭಗವಾನ್ ಕುರಿತ ಸಮಸದ್ವಿವೇಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ದಿವಂಗತ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಅಭಿನಂದನೆ ಸಲ್ಲಿಸಲಾಗಿದೆ. ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಸಲಾಗಿದೆ.
ನಮ್ಮ ದೇಶ ಬಹಳಷ್ಟು ಮೌಢ್ಯಗಳಿಂದ ಕೂಡಿದ ದೇಶ. ದೇವರು ಇದ್ದಾನೆ ಎಷ್ಟರಮಟ್ಟಿಗೆ ಅಂದರೆ ಬ್ರಹ್ಮ ಹಣೆಯ ಮೇಲೆ ಬರೆದ್ದಾನೆಂದು ನಂಬಿಸಿದ್ದಾರೆ. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲಾದರೂ ದೇವರು ನೀನು ಕಟುಕನಾಗು ಅಂತಾ ಮೊದಲೇ ಬರೆದಿರುತ್ತಾನಾ? ಜನರು ವೈಜ್ಞಾನಿಕವಾಗಿ ಯೋಚನೆ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಅಸ್ಪೃಶ್ಯನಾಗು ನೀನು ಅಂತಾ ದೇವರು ಬರೆದಿದ್ದಾನಾ? ಹಾಗಾದರೆ ಇವರಿಗೆ ವಿಮೋಚನೇ ಇಲ್ಲವಾ? ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಲಿಲ್ಲ ಅಂದಿದ್ದರೆ ಅಸ್ಪೃಶ್ಯತೆಗೆ ವಿಮೋಚನೆ ಸಿಗುತ್ತಿರಲಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡಿದ್ದಾರೆ.
ಭಗವಾನ್ ನಿಮ್ಮಂತ ಜನರಿಂದ ಸಮಾಜ ಬದಲಾವಣೆ ಸಾಧ್ಯ ಇದೆ. ನೀವು ನೂರು ವರ್ಷಗಳ ಕಾಲ ಬದುಕಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಭಗವಾನ್ ನಿಮಗೆ ಪೊಲೀಸ್ ಪ್ರೊಟೆಕ್ಷನ್ ಕೊಟ್ಟೆ. ಡಾ.ಡಿ. ತಿಮ್ಮಯ್ಯ ಕೆಳವರ್ಗದ ಜನರ ಪರವಾಗಿ ಕೆಲಸ ಮಾಡುತ್ತಾರೆ. ಅಂದರೆ ಮೇಲ್ವರ್ಗದ ಜನರ ವಿರೋಧಿ ಅಂತ ಅಲ್ಲ. ಏಕೆಂದರೆ ಈ ರೀತಿ ಹಣೆಪಟ್ಟಿಯನ್ನು ಈವಾಗ ಕಟ್ಟಿಬಿಡ್ತಾರೆ. ಸಮಾಜದಿಂದ ಶಾಂತಿ ನೆಮ್ಮದಿ ನಿರ್ಮಾಣ ಸಾಧ್ಯ, ತಾರತಮ್ಯ ಹೋಗಬೇಕು. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಫಲವೇ ತಿಮ್ಮಯ್ಯ ಅವರು ಸರ್ಕಾರಿ ನೌಕರಿ ಪಡೆದರು. ಈಗ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ನಾವು ಅಧಿಕಾರದಲ್ಲಿ ಇದ್ದಾಗ ಎಲ್ಲಾ ಜಾತಿಯ ಬಡವರಿಗೆ ಸಹಾಯ ಮಾಡುವಂತಹ ಕೆಲಸ ಮಾಡಿದ್ದೇವೆ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಕೂಡಾ ಸಿಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೇಳಿಬಂದಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಘೋಷಣೆ ಕೇಳಿಬಂದಿದೆ. ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಪ್ರೊ.ಕೆ.ಎಸ್. ಭಗವಾನ್ ವಿರಚಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಘೋಷಣೆ ಕೇಳಿಬಂದಿದೆ. ಹೂವು ಎರಚಿ ಮುಂದಿನ ಸಿಎಂ ಎಂದು ಅಭಿಮಾನಿಗಳು ಹೇಳಿದ್ದಾರೆ.
ಇದನ್ನೂ ಓದಿ: ಮಠಾಧೀಶರ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ: ಪ್ರಣವಾನಂದ ಸ್ವಾಮಿಜಿ ಆಕ್ರೋಶ
ಇದನ್ನೂ ಓದಿ: ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕುವುದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯರನ್ನ ಸಮರ್ಥಿಸಿಕೊಂಡ ಪುತ್ರ ಡಾ. ಯತೀಂದ್ರ
Published On - 10:35 pm, Sat, 26 March 22