ಕೋಲಾರ ಮಾವು ಬೆಳೆಗಾರರ ಸಮಸ್ಯೆ
ಕೋಲಾರ, ಏ.30: ರಾಜ್ಯದ ಮಾವಿನ ತವರು ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ(
Srinivaspur) ಕಳೆದ ಹಲವು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ, ಭೂಮಿಯಲ್ಲಿ ಹಾಗೂ ವಾತಾವರಣದಲ್ಲಿ ತೇವಾಂಶವಿಲ್ಲದೆ ಮಾವಿನ(
Mango) ಮರಗಳು ಒಣಗುವ ಸ್ಥಿತಿ ತಲುಪಿವೆ. ಈ ಬಾರಿ
ಭೀಕರ ಬರಗಾಲವಿದ್ದರೂ ಡಿಸೆಂಬರ್ ತಿಂಗಳಿಂದಲೇ ಮಾವು ಹೂ ಬಿಡಲು ಆರಂಭಿಸಿತ್ತು. ಫೆಬ್ರವರಿಯಲ್ಲಿ ನೋಡುಗರ ಕಣ್ ದೃಷ್ಟಿ ಬೀಳುವ ರೀತಿ ಮೈತುಂಬಾ ಹೂ ಮುಡಿದು ನಿಂತಿದ್ದ ಮಾವಿನ ಮರ, ವಿಪರೀತ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣದಿಂದಾಗಿ ಹೂವು ಉದುರಿ ಹೋಗಿದ್ದು, ಇದ್ದ ಅಷ್ಟೋ ಇಷ್ಟೋ ಹೂವಿನಿಂದ ಅಲ್ಲೊಂದು, ಇಲ್ಲೊಂದು ಮರದಲ್ಲಿ ಕಾಯಿ ಕಾಣಿಸುತ್ತಿದೆ. ಅದು ಕೂಡಾ ಬೆರಳೆಣಿಕೆಯಷ್ಟು.
ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರನ್ನ ಈ ಬೇಸಿಗೆಯ ರಣಬಿಸಿಲು ಆತಂಕಕ್ಕೆ ದೂಡಿದೆ. ವರ್ಷಕೊಂದೇ ಬೆಳೆಯಲ್ಲಿ ಬದುಕು ಕಟ್ಟಿಕೊಳ್ಳುವ ಈ ಭಾಗದ ಮಾವು ಬೆಳೆಗಾರರಿಗೆ ತೇವಾಂಶದ ಕೊರೆತೆ, ಅತಿಯಾದ ತಾಪಮಾನ ಮಾವಿನ ಮರಗಳಲ್ಲಿ ಬಿಟ್ಟಿದ್ದ ಹೂವು ಹಾಗೂ ಕಾಯಿಗಳೆಲ್ಲ ರೋಗಕ್ಕೆ ತುತ್ತಾಗಿ ಉದುರ ತೊಡಗಿವೆ.
ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು 54,000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆ ಪೈಕಿ ಶ್ರೀನಿವಾಸಪುರದಲ್ಲೇ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಹಾಗಾಗಿಯೇ ಇಲ್ಲಿ ಬೆಳೆಯುವ ಮಾವು ಇಡೀ ದೇಶದಲ್ಲೇ ಪ್ರಸಿದ್ದಿ. ಇಲ್ಲಿನ ರೈತರು ಬೆಳೆಯುವ ಬಾದಾಮಿ, ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಮಲ್ಲಿಕಾ, ಸೇಂದೂರಾ ಸೇರಿದಂತೆ ಇನ್ನು ಹಲವು ಬಗೆ ಬಗೆಯ ಮಾವಿನ ಹಣ್ಣು ದೇಶ-ವಿದೇಶಗಳಿಗೆ ರಪ್ತಾಗುತ್ತದೆ. ಇಲ್ಲಿನ ರೈತರಿಗೆ ಮಾವು ಬೆಳೆಯೇ ಬದುಕು. ಹಾಗಾಗಿಯೇ ಈ ಬಾರಿ ಬಿಸಿಲಿಗೆ ಮಾವಿನ ಕಾಯಿಗಳು ಬಲಿಯುವ ಮುನ್ನವೇ ನೆಲಕ್ಕುದುರುತ್ತಿದೆ. ಇಷ್ಟೊತ್ತಿಗಾಗಲೇ ಕಾಯಿಗಳು ಬಲಿತು ಕಿತ್ತು ಮಾರುಕಟ್ಟೆಗೆ ಹಾಕಲು ಆರಂಭಿಸಬೇಕಿತ್ತು. ಆದರೆ, ಬಿಸಿಲಿನ ತಾಪಕ್ಕೆ ಇನ್ನೂ ಮಾವಿನ ಫಸಲು ಬಂದಿಲ್ಲ.
ರೋಗಗಳಿಗೆ ತುತ್ತಾಗುತ್ತಿರುವ ಮಾವಿನ ಫಸಲು
ಮಾವಿನ ಮರದಲ್ಲಿದ್ದ ಮಾವಿನ ಕಾಯಿಗಳೆಲ್ಲ ಬಿಸಿಲಿನ ತಾಪಕ್ಕೆ ಉದುರಿ ಹೋಗುತ್ತಿವೆ. ಜೊತೆಗೆ ಬೆಂಕಿ ರೋಗ, ಎಲೆಸುರುಳಿ ರೋಗ, ಬೂದಿ ರೋಗ, ಸೇರಿದಂತೆ ವೈರಸ್ ರೋಗದಿಂದ ಮಾವಿನ ಫಸಲು ಶೇ 50 ಕ್ಕಿಂತ ಹೆಚ್ಚು ಫಸಲು ಹಾಳಾಗಿ ಹೋಗಿದೆ. ತೋಟಗಾರಿಕೆ ಇಲಾಖೆ ಕೂಡ ರೈತರಿಗೆ ಅಗತ್ಯ ಮಾಹಿತಿ ನೀಡುವ ಜೊತೆಗೆ ನೀರು ಹಾಯಿಸಲು ರೈತರಿಗೆ ಸೂಚನೆ ನೀಡಿದೆ. ಆದರೂ ನೀರೆ ಇಲ್ಲ, ಇನ್ನು ಜಿಲ್ಲೆಯಲ್ಲಿ ಮಳೆ ಬಿದ್ದು ಸರಾಸರಿ 300 ದಿನಗಳೇ ಕಳೆದಿದೆ. ಹೀಗಿರುವಾಗ ಭರ್ಜರಿ ಮಳೆ ಬಾರದ ಹೊರತು ರೈತರ ಸಮಸ್ಯೆಗೆ ಪರಿಹಾರವಿಲ್ಲ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಬಾರಿ ಮಾವು ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮಾವು ಬೆಳೆಗಾರರು ಮನವಿ ಮಾಡುತ್ತಿದ್ದಾರೆ.
ಒಟ್ಟಾರೆ ಈ ವರ್ಷ ಬರಗಾಲಕ್ಕೆ ತುತ್ತಾಗಿದ್ದ ಕೋಲಾರದ ಜನರಿಗೆ ಅದೃಷ್ಟದ ಬೆಳೆಯಾಗಬೇಕಿದ್ದ ಮಾವು ಬೆಳೆಯೂ ಕೂಡ ಬಿರುಬಿಸಿಲಿನ ತಾಪಮಾನಕ್ಕೆ ನಾಶವಾಗಿದೆ. ಈಗ ಅಳಿದು ಉಳಿದ ಅರ್ದದಷ್ಟು ಬೆಳೆಯನ್ನಾದರೂ ಉಳಿಸಿಕೊಳ್ಳಬೇಕೆಂದರೆ ಮಳೆರಾಯ ಕೃಪೆ ತೋರಬೇಕು, ಇಲ್ಲವಾದರೇ ಈ ಬಾರಿ ಮಾವು ಬೆಳೆದ ರೈತರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.