ಕೋಲಾರ: ಕರ್ನಾಟಕ, ಆಂಧ್ರ ಗಡಿಯಲ್ಲಿ ಬೃಹತ್ ಮಟ್ಟದ ಸ್ಪೋಟಕಗಳು ಪತ್ತೆ, 1200 ಜಿಲೆಟಿನ್ ಕಡ್ಡಿ ವಶಕ್ಕೆ

| Updated By: ವಿವೇಕ ಬಿರಾದಾರ

Updated on: Apr 07, 2024 | 10:08 PM

ಕರ್ನಾಟಕ, ಆಂಧ್ರ ಪ್ರದೇಶ ಗಡಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಚೆಕ್‌ಪೋಸ್ಟ್​ನಲ್ಲಿ ಪೊಲೀಸರು 1200 ಜಿಲೆಟಿನ್ ಕಡ್ಡಿ, 7 ಬಾಕ್ಸ್‌ ವೈಯರ್‌, 6 ಡಿಟೋನೇಟರ್​​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಫೋಟಕ ಸಾಗಿಸುತ್ತಿದ್ದ ಜಾಕೀರ್ ಹುಸೇನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರ: ಕರ್ನಾಟಕ, ಆಂಧ್ರ ಗಡಿಯಲ್ಲಿ ಬೃಹತ್ ಮಟ್ಟದ ಸ್ಪೋಟಕಗಳು ಪತ್ತೆ, 1200 ಜಿಲೆಟಿನ್ ಕಡ್ಡಿ ವಶಕ್ಕೆ
ನಂಗಲಿ ಪೊಲೀಸ್​ ಠಾಣೆ
Follow us on

ಕೋಲಾರ, ಏಪ್ರಿಲ್​ 07: ಕರ್ನಾಟಕ, ಆಂಧ್ರ ಪ್ರದೇಶ ಗಡಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು (Police) ಜಪ್ತಿ ಮಾಡಿದ್ದಾರೆ. ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ನಂಗಲಿ ಚೆಕ್‌ಪೋಸ್ಟ್‌ ಮುಖಾಂತರ ಕಾರಿನಲ್ಲಿ ಆರೋಪಿಗಳು 1200 ಜಿಲೆಟಿನ್ ಕಡ್ಡಿ, 7 ಬಾಕ್ಸ್‌ ವೈಯರ್‌, 6 ಡಿಟೋನೇಟರ್ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರು ಅನುಮಾನಗೊಂಡು ತಪಾಸಣೆ ನಡೆಸಿದಾಗ, ಭಾರಿ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ. ಇನ್ನು ಸ್ಫೋಟಕ ಸಾಗಿಸುತ್ತಿದ್ದ ಜಾಕೀರ್ ಹುಸೇನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಕಾರಿನಲ್ಲಿದ್ದ ಮತ್ತೊಬ್ಬ ಪರಾರಿಯಗಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಸಂಭವಿಸಿದ್ದ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಗಡಿ ಭಾಗದಲ್ಲಿ ಇಷ್ಟೊಂದು ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರಲ್ಲಿ ಅನುಮಾನ ಹುಟ್ಟು ಹಾಕಿದೆ. ಸದ್ಯ ಆರೋಪಿಗಳು ಯಾವ ಕಾರಣಕ್ಕೆ ಸ್ಫೋಟಕ ಸಾಗಿಸುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬರಲಿದೆ.

ಬೆಂಗಳೂರಿನಲ್ಲೂ ಸ್ಫೋಟಕಗಳು ಪತ್ತೆ

ಕಳೆದ ತಿಂಗಳು ಬೆಂಗಳೂರಿನ ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಭಾಗದಲ್ಲಿನ ಖಾಲಿ ಜಮೀನಿನಲ್ಲಿ ಜಿಲೆಟಿನ್ ಕಡ್ಡಿ, ಡಿಟೋನೇಟರ್​​ ಹಾಗೂ ಇತರ ಕೆಲವು ಸ್ಫೋಟಕಗಳು ಪತ್ತೆಯಾಗಿದ್ದವು. ಸ್ಫೋಟಕಗಳನ್ನು ಟ್ರಾಕ್ಟರ್ ಒಂದರಲ್ಲಿ ಇಡಲಾಗಿತ್ತು. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ, ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು 4,500 5 ಸಾವಿರ!

ಹಲವು ಶಾಲೆಗಳಿಗೆ ಬಂದಿತ್ತು ಬಾಂಬ್ ಬೆದರಿಕೆ ಸಂದೇಶ

ಬೆಂಗಳೂರಿನ ಹಲವು ಶಾಲೆಗಳಿಗೆ ಇತ್ತೀಚೆಗೆ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ನಂತರ ಅದು ನಕಲಿ ಬೆದರಿಕೆ ಎಂಬುದು ತಿಳಿದು ಬಂದಿದ್ದರೂ, ಬೆದರಿಕೆ ಸಂದೇಶದ ಹಿಂದೆ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅದಾದ ನಂತರ ಕೆಲವು ದಿನಗಳಲ್ಲಿ ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು. ಇಂಥ ಸಂದರ್ಭದಲ್ಲಿ ಬೆಂಗಳೂರಿನ ಶಾಲೆಯ ಆವರಣದಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Sun, 7 April 24