ಅದು ನೂರಾರು ವರ್ಷಗಳ ಇತಿಹಾಸ ಹೊಂದಿರುವ ವೆಂಕಟರಮಣಸ್ವಾಮಿ ದೇವಾಲಯ, ದೇವಾಲಯಕ್ಕಿಂತ ಅಲ್ಲಿ ಅದ್ದೂರಿಯಾಗಿ ನಡೆಯುವ ಬ್ರಹ್ಮರಥೋತ್ಸವಗಳೇ ಹೆಚ್ಚು ಪ್ರಸಿದ್ದಿ, ಕೆಜಿಎಫ್ ಬ್ರಹ್ಮರಥೋತ್ಸವಕ್ಕೆ (KGF Lakshmi Venkataramanaswamy Temple) ಲಕ್ಷಾಂತರ ಸಂಖ್ಯೆಯ ಜನರು ಬಂದು ಸೇರುತ್ತಾರೆ, ಇಂಥಾ ಬ್ರಹ್ಮ ರಥೋತ್ಸವದಲ್ಲಿ ಸದ್ಯ ವಿವಾದವೊಂದು ಎದುರಾಗಿದೆ. ನೂರಾರು ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಹಲವು ವರ್ಷಗಳ ಹಿಂದೆ ಅದ್ದೂರಿಯಾಗಿ ನಡೆದ ಬ್ರಹ್ಮರಥೋತ್ಸವದ (Brahmarathotsav) ದೃಶ್ಯಗಳು, ಸದ್ಯ 13ನೇ ದಿನದ ರಥೋತ್ಸವವನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿರುವ ಕೋರ್ಟ್ ಆದೇಶ ಈ ಎಲ್ಲಾ ವಿದ್ಯಮಾನಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿ (Festival, Spiritual).
ನೂರಾರು ವರ್ಷಗಳ ಹಿಂದೆ ಆಂಧ್ರದ ತಿರುಪತಿ ತಿರುಮಲ ದೇವಾಲಯಕ್ಕೆ ಹೋಗಲು ಸಾಧ್ಯವಾಗದವರು ಇಲ್ಲಿ ವೆಂಕಟರಮಣಸ್ವಾಮಿಯ ದರ್ಶನ ಪಡೆಯಲೆಂಬ ಉದ್ದೇಶದಿಂದ ಕೆಜಿಎಫ್ನಲ್ಲಿ ಒಂದು ಲಕ್ಷ್ಮೀವೆಂಕಟರಣಸ್ವಾಮಿ ದೇವಾಲಯನ್ನು ನಿರ್ಮಾಣ ಮಾಡಲಾಗಿತ್ತು. ನಂತರ ದೇವಾಲಯವನ್ನು ಮೈಸೂರು ಮಹಾರಾಜರ ವಶಕ್ಕೆ ನೀಡಿದರು. ಆ ಕಾಲದಿಂದಲೂ ಮೊದಲ ಸಂಪ್ರದಾಯದಂತೆ ದೇವಾಲಯ ಪೂಜಾ ಕೈಂಕರ್ಯಗಳು ನಡೆದುಕೊಂಡು ಬರುತ್ತಿದೆ. ಇಲ್ಲಿ ತಿರುಪತಿ ತಿರುಮಲದಲ್ಲಿ ಫಾಲ್ಗುಣ ಮಾಸದಲ್ಲಿ ನಡೆಯುವ ಬ್ರಹ್ಮರಥೋತ್ಸವದ ರೀತಿಯಲ್ಲೇ ಇಲ್ಲೂ ಕೂಡಾ 9 ದಿನಗಳ ಕಾಲ ವಿವಿದ ಬ್ರಹ್ಮರಥೋತ್ಸವಗಳನ್ನು ಮಾಡಲಾಗುತ್ತಿತ್ತು.
ಕಾಲ ಕಳೆದಂತೆ ಅದು 9 ದಿನಗಳ ಕಾಲ ಒಂದೊಂದು ಜಾತಿ ಜನಾಂಗದವರು ರಥೋತ್ಸವವನ್ನು ಅವರ ಶಕ್ತ್ಯಾನುಸಾರ ಮಾಡುವಂತೆ ನಿರ್ಧಾರ ಮಾಡಲಾಯಿತು. ಹೀಗೆ 9 ದಿನಗಳ ಕಾಲ ನಡೆಯುತ್ತಿದ್ದ ಬ್ರಹ್ಮರಥೋತ್ಸವ ನಂತರ ಅದನ್ನು 12 ದಿನಗಳಿಗೆ ಏರಿಸಲಾಯಿತು. ನಂತರ 2008ರಲ್ಲಿ ವೈ. ಸಂಪಂಗಿ ಶಾಸಕರಾದ ಮೇಲೆ 13ನೇ ದಿನ ಇಲ್ಲಿ ಬ್ರಹ್ಮರಥೋತ್ಸವ ನಡೆಯುವಂತೆ 13ನೇ ದಿನ ಅಂದರೆ ಕೊನೆಯ ದಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಚಿನ್ನದ ರಥದ ಹೆಸರಿನಲ್ಲಿ ಬ್ರಹ್ಮ ರಥೋತ್ಸವ ಮಾಡುವಂತೆ ತೀರ್ಮಾನಿಸಲಾಗಿತ್ತು.
ಅಂದಿನಿಂದ ಅದೇ ರೀತಿಯಲ್ಲಿ ನಡೆದುಕೊಂಡು ಬಂದಿತ್ತು, ಆದರೆ ದೇವಾಲಯದ ನಿರ್ಮಾತೃ ಭಾಸ್ಕರನಾಯ್ಡು ಅವರ ಕುಟುಂಬಕ್ಕೆ ಸೇರಿದ ರೂಪೇಶ್ ಎಂಬುವರು ಹೈಕೋರ್ಟ್ನಲ್ಲಿ 13ನೇ ದಿನದ ರಥೋತ್ಸವವನ್ನು ಪ್ರಶ್ನೆ ಮಾಡಿದ್ರು. ಆಗಮ ಶಾಸ್ತ್ರದ ಪ್ರಕಾರವಾಗಿ ರಥೋತ್ಸವಗಳು 12 ದಿನ ಮಾತ್ರ ನಡೆಯಬೇಕು ಅನ್ನೋದನ್ನ ಉಲ್ಲೇಖಿಸಿದರು. ಹಾಗಾಗಿ ಕೋರ್ಟ್ ರೂಪೇಶ್ ಅವರ ಅರ್ಜಿಯನ್ನು ಅಂಗೀಕರಿಸಿ 12 ದಿನದ ನಂತರ ಮಾಡುವ ಬ್ರಹ್ಮರಥೋಸ್ಸವ ಊರ್ಜಿತವಲ್ಲ ಎಂದು ಆದೇಶಿಸಿದೆ. ಹಾಗಾಗಿ ದೇವಾಲಯದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೋರ್ಟ್ ಆದೇಶವನ್ನು ಪಾಲಿಸುವುದಾಗಿ ತಿಳಿಸಿದ್ದಾರೆ.
ಫಾಲ್ಗುಣ ಮಾಸದಲ್ಲಿ ಮೊದಲಿನಿಂದಲೂ 9 ದಿನಗಳ ಕಾಲ ಇಲ್ಲಿ ತಿರುಪತಿ ತಿರುಮಲ ರೀತಿಯಲ್ಲೇ ಬ್ರಹ್ಮರಥೋತ್ಸವವನ್ನು ಮಾಡಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಅದು ಜಾತಿಗೊಂದು ದಿನದಂತೆ ಮೀಸಲಿರಿಸಲಾಯಿತು, ಆದರೆ ಇದನ್ನು ಜಾತಿಗೆ ಮೀಸಲಾಗಿಡುವುದನ್ನು ತಪ್ಪಿಸಿ, ಒಂದೊಂದು ದಿನದ ರಥೋತ್ಸವಕ್ಕೆ ಒಂದೊಂದು ಹೆಸರನ್ನು ನೀಡಲಾಯಿತು. ಶೇಷ ವಾಹನೋತ್ಸವ, ಸಿಂಹ ವಾಹನೋತ್ಸವ, ಹನುಮ ವಾಹನೋತ್ಸವ, ಗರುಡ ವಾಹನೋತ್ಸವ ಹೀಗೆ ಹಲವು ರೀತಿಯ ಬ್ರಹ್ಮೋತ್ಸವಗಳನ್ನು ಮಾಡಿಕೊಂಡು ಬರಲಾಗುತ್ತಿತ್ತು.
ಒಟ್ಟಾರೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಕೆಜಿಎಫ್ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿವಾದದ ಕೇಂದ್ರವಾಗಿದೆ. ಅದರ ಜೊತೆಗೆ ಲೋಕಸಭಾ ಚುನಾವಣೆಯ ದಿನಾಂಕ ಕೂಡಾ ಹತ್ತಿರವಾಗಿರುವ ಹಿನ್ನೆಲೆ ಇದು ಯಾವ್ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದೆ ಕುತೂಹಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Sat, 16 March 24