ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರ ವಿಚಾರ; ಸಚಿವ- ಸಂಸದರ ನಡುವೆಯೇ ಬಗೆಹರಿಯದ ಗೊಂದಲ
ಸುಮಾರು 130 ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪ್ರದೇಶ ಹಾಗೂ ಇಲ್ಲಿನ ರೌಡಿ ಚಟುಟವಟಿಕೆಯನ್ನು ಗಮನದಲ್ಲಿರಿಸಿಕೊಂಡು ಪ್ರತ್ಯೇಕ ಪೊಲೀಸ್ ಜಿಲ್ಲೆಯನ್ನು ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಕೆಜಿಎಫ್‌ಗೆ ಪ್ರತ್ಯೇಕ ಎಸ್ಪಿಯನ್ನು ಕೂಡ ನೇಮಕ ಮಾಡಿದ್ದರು.
ಕೋಲಾರ: ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರ ವಿಚಾರ ಸದ್ಯ ಸಚಿವರು ಹಾಗೂ ಸಂಸದರ ನಡುವೆಯೇ ಗೊಂದಲ ಸೃಷ್ಟಿಯಾಗಿದೆ. ಉಸ್ತುವಾರಿ ಸಚಿವರು ಎಸ್ಪಿ ಕಚೇರಿ ಸ್ಥಳಾಂತರ ಆಗುತ್ತದೆ ಅಂದರೆ ಸಂಸದರು ಮಾತ್ರ ಸ್ಥಳಾಂತರ ಆಗಲ್ಲ ಎನ್ನುವ ಮೂಲಕ ಜಿಲ್ಲೆಯ ಜನರನ್ನ ಗೊಂದಲಕ್ಕೆ ದೂಡುತ್ತಿದ್ದಾರೆ. ಸದ್ಯ ಜಿಲ್ಲೆಯ ಜನರಲ್ಲಿ ಎಸ್ಪಿ ಕಚೇರಿ ಸ್ಥಳಾಂತರ ಆಗುತ್ತಾ? ಇಲ್ವಾ? ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.
ಸುಮಾರು 130 ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪ್ರದೇಶ ಹಾಗೂ ಇಲ್ಲಿನ ರೌಡಿ ಚಟುಟವಟಿಕೆ ಯನ್ನು ಗಮನದಲ್ಲಿರಿಸಿಕೊಂಡು ಪ್ರತ್ಯೇಕ ಪೊಲೀಸ್ ಜಿಲ್ಲೆಯನ್ನು ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಕೆಜಿಎಫ್‌ಗೆ ಪ್ರತ್ಯೇಕ ಎಸ್ಪಿಯನ್ನು ಕೂಡ ನೇಮಕ ಮಾಡಿದ್ದರು. ಈಗ ಅದನ್ನು ಹೊಸ ಜಿಲ್ಲೆ ವಿಜಯನಗರಕ್ಕೆ ಈ ಎಸ್ಪಿ ಕಚೇರಿಯನ್ನು ಸ್ಥಳಾಂತರ ಮಾಡುವ ಕುರಿತು ರಾಜ್ಯ ಸರ್ಕಾರ ಹಾಗೂ ಸಚಿವರ ನಡೆ ಸಾಕಷ್ಟು ಗೊಂದಲ ಸೃಷ್ಟಿ ಮಾಡಿವೆ. ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಕೆಜಿಎಫ್ ಪೊಲೀಸ್ ಎಸ್ಪಿ ಕಚೇರಿಯನ್ನು ರಾಜ್ಯದ 31ನೇ ಜಿಲ್ಲೆ ವಿಜಯನಗರಕ್ಕೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಎಸ್ಪಿ ಕಚೇರಿ ಅವಶ್ಯಕತೆ ಇತ್ತು, ಈಗ ಅವಶ್ಯಕತೆ ಇಲ್ಲ, ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡುತ್ತೇವೆ. ಸ್ಥಳಾಂತರ ಮಾಡುವುದರಿಂದ ಕೋಲಾರ ಎಸ್ಪಿಗೆ ಎರಡು ತಾಲೂಕು ಹೆಚ್ಚುವರಿ ಆದ್ರೆ ಏನೂ ಕಷ್ಟ ಆಗಲ್ಲ, ಕಾನೂನು ಸುವ್ಯವಸ್ಥೆಗೆ ಏನೂ ತೊಂದರೆ ಆಗೋದಿಲ್ಲ, ಸ್ಥಳಾಂತರಕ್ಕೆ ನಾನು ಸಹ ಒಮ್ಮತ ಸೂಚಿಸಿದ್ದೇನೆ ಎಂದು ಹೇಳಿದ್ದರು. ಆ ಮೂಲಕ ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರಕ್ಕೆ ಇದ್ದ ಸಾಕಷ್ಟು ಗೊಂದಲಗಳಿಗೆ ಸಚಿವರು ಸರ್ಕಾರದ ಹಂತದಲ್ಲಿ ಇಂತಹ ಪ್ರಸ್ಥಾಪ ಇದೆ ಅನ್ನೋ ವಿಷಯಕ್ಕೆ ತೆರೆ ಎಳೆದರು.
ಆದರೆ, ಯಾವುದೇ ಕಾರಣಕ್ಕೂ ಎಸ್ಪಿ ಕಚೇರಿಯನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಸಂಸದ ಎಸ್. ಮುನಿಸ್ವಾಮಿ ಆಗಾಗ ಹೇಳಿಕೊಂಡು ಬರುತ್ತಿದ್ದಾರೆ. ಇದರ ನಡುವೆಯೂ ಅಕ್ಟೋಬರ್ -25 ರಂದು ವಿವಿಧ ಸಂಘಟನೆಗಳು ಕೆಜಿಎಫ್ ಹಾಗೂ ಬಂಗಾರಪೇಟೆ ಬಂದ್‌ಗೆ ಕರೆ ನೀಡಿದ್ದರು. ಬಂದ್ ಆಚರಣೆ ವೇಳೆ ಕೇಂದ್ರ ವಲಯ ಐಜಿಪಿ ತಮ್ಮ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರ ವಿಚಾರ ಸರ್ಕಾರದ ಮುಂದಿಲ್ಲ, ಗಾಳಿ ಸುದ್ದಿಗಳಿಗೆ ಕಿವಿ ಕೊಡಬೇಡಿ ಎಂದು ಹೇಳಿದ್ದರು.
ಇನ್ನು, ಸರ್ಕಾರ ಗುಪ್ತವಾಗಿ ಎಸ್ಪಿ ಕಚೇರಿಯನ್ನು ನೂತನ ಜಿಲ್ಲೆಗೆ ಸ್ಥಳಾಂತರ ಕಾರ್ಯ ಮಾಡುತ್ತಿದೆ ಎಂದ ಹೇಳಲಾಗುತ್ತಿದೆ ಅನ್ನೋದು ಪೊಲೀಸ್ ಇಲಾಖೆ ಹಾಗೂ ಸ್ಥಳೀಯರ ಮುಖಂಡರುಗಳ ಅನುಮಾನ. ಈ ಬಗ್ಗೆ ಮಾತನಾಡಿದ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ, ಯಾವುದೇ ಕಾರಣಕ್ಕೂ ಎಸ್ಪಿ ಕಚೇರಿ ಸ್ಥಳಾಂತರ ಪ್ರಸ್ತಾಪ ಇಲ್ಲ. ಮುಖ್ಯಮಂತ್ರಿ, ಗೃಹ ಇಲಾಖೆ ಅಧಿಕಾರಿಗಳ ಬಳಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಸಚಿವರು ಚುನಾವಣಾ ಕಾರ್ಯದಲ್ಲಿದ್ದ ಕಾರಣ ಅವರಿಗೆ ಸರ್ಕಾರ ಹಂತದಲ್ಲಾದ ಬದಲಾವಣೆಯ ಕುರಿತು ಮಾಹಿತಿ ಇಲ್ಲಾ ಎನ್ನುವ ಮೂಲಕ ಮತ್ತೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಒಟ್ಟಾರೆ, ಎಸ್ಪಿ ಕಚೇರಿ ಸ್ಥಳಾಂತರ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಇಲ್ಲಿನ ನೂರಾರು ಸಿಬ್ಬಂದಿ ಮಾತ್ರ ಯಾರ ಮಾತು ನಂಬುವುದು? ಯಾರ ಮಾತು ಬಿಡೋದು? ಅನ್ನೋ ಗೊಂದಲದಲ್ಲಿದ್ದಾರೆ. ಇನ್ನಾದರೂ ಕೋಲಾರ ಜಿಲ್ಲೆಯ ಜನರಲ್ಲಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಬೇಕು ಇಲ್ಲವಾದಲ್ಲಿ ಸಾಕಷ್ಟು ಅನುಮಾನಗಳಲ್ಲೇ ಮತ್ತಷ್ಟು ಹೋರಾಟಗಳು ಎದುರಾಗುವುದರಲ್ಲಿ ಅನುಮಾನವಿಲ್ಲ.
(ವಿಶೇಷ ವರದಿ : ರಾಜೇಂದ್ರ ಸಿಂಹ)
ಇದನ್ನೂ ಓದಿ: Kolar Cyber Crime: ಭಾರತೀಯ ಸೇನೆ ಹೆಸರಿನಲ್ಲಿ ಕೋಲಾರ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ!
Kolar: ಮಾಲೂರಿನ ಶಾಲೆಯಲ್ಲಿ ತಮಿಳುನಾಡಿನ ಮಕ್ಕಳ ಕನ್ನಡ ಪ್ರೀತಿ; ಭಾಷಾ ಸಾಮರಸ್ಯಕ್ಕೆ ಇಲ್ಲಿದೆ ಸಾಕ್ಷಿ