ರಾಮಲಲ್ಲಾ ವಿಗ್ರಹ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡಿದ್ದೇ ಕರ್ನಾಟಕದ ವಿಜ್ಞಾನಿ: ಯಾರು ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2024 | 5:28 PM

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಈ ರಾಮ ಮಂದಿರ ನಿರ್ಮಾಣದ ಹಿಂದೆ ಚಿನ್ನದ ನಾಡು ಕೋಲಾರದ ಬಹುದೊಡ್ಡ ಕೊಡುಗೆ ಇದೆ. ಏಕೆಂದರೆ ಇದೇ ಚಿನ್ನದ ನಾಡಿನ ಕೆಜಿಎಫ್​ನ ಹಿರಿಯ ವಿಜ್ಞಾನಿ ರಾಜನ್ ಬಾಬು ಅವರ ತಂಡ ಮಂದಿರ ನಿರ್ಮಾಣಕ್ಕೆ ಬಳಸಿರುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದಾರೆ.

ರಾಮಲಲ್ಲಾ ವಿಗ್ರಹ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡಿದ್ದೇ ಕರ್ನಾಟಕದ ವಿಜ್ಞಾನಿ: ಯಾರು ಗೊತ್ತಾ?
ಕೆಜಿಎಫ್ ಹಿರಿಯ ವಿಜ್ಞಾನಿ ರಾಜನ್ ಬಾಬು ಮತ್ತು ತಂಡ
Follow us on

ಕೋಲಾರ, ಜನವರಿ 19: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಹಿಂದೆ ಚಿನ್ನದ ನಾಡು ಕೋಲಾರದ ಬಹುದೊಡ್ಡ ಕೊಡುಗೆ ಇದೆ. ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ ಅಂತಿಮಗೊಳಿಸಿದ್ದಾರೆ. ರಾಮ‌ ಮಂದಿರ ನಿರ್ಮಾಣಕ್ಕೆ ಬಳಸುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದು ಇದೇ ಚಿನ್ನದ ನಾಡಿನ ಕೆಜಿಎಫ್​ನ (NIRM) ಹಿರಿಯ ವಿಜ್ಞಾನಿ ರಾಜನ್ ಬಾಬು ಅವರ ತಂಡ. ಮಂದಿರಕ್ಕೆ ಬಳಸಿದ ಸಂಪೂರ್ಣ ವಸ್ತುಗಳ ಗುಣಮಟ್ಟವನ್ನು ಕೆಜಿಎಫ್ ನಲ್ಲಿರುವ NIRM ಲ್ಯಾಬ್​ನಲ್ಲಿ ಪರೀಕ್ಷಿಸಲಾಗಿದೆ. ರಾಮ ಮಂದಿರಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರ, ರಾಜಾಸ್ಥಾನ ರಾಜ್ಯಗಳ ಕಲ್ಲನ್ನು ಬಳಕೆ‌ ಮಾಡಲಾಗಿದೆ.

ರಾಮ‌ ಮಂದಿರ ನಿರ್ಮಾಣದಲ್ಲಿ ಕೇವಲ‌ ಕಲ್ಲನ್ನು ಮಾತ್ರ ಬಳಕೆ ಮಾಡಲಾಗಿದೆ. ಬೇರೆ ಯಾವುದೇ ವಸ್ತುವನ್ನು ಬಳಕೆ ಮಾಡಿಲ್ಲ. ಕಲ್ಲಿನಲ್ಲಿ ಇಂಟರ್ ಲಾಕಿಂಗ್ ಸಿಸ್ಟಮ್ ಬಳಸಿ ನಿರ್ಮಾಣ ಮಾಡಲಾಗಿದೆ. ರಾಮ‌ ಮಂದಿರಕ್ಕೆ ಸಿಡಿಲು, ಗುಡುಗು, ಬಿಸಿಲು, ಮಳೆ ಮತ್ತು ಭೂಕಂಪ ಆದರೂ ಏನೂ ಆಗದ ರೀತಿ ನಿರ್ಮಾಣ ಮಾಡಲಾಗಿದೆ. ರಾಮ‌ ಮಂದಿರಕ್ಕೆ ಒಂದು ಸಾವಿರಕ್ಕೂ ಅಧಿಕ ವರ್ಷಗಳ ಆಯಸ್ಸು ಇದೆ.

ಇದು ದಕ್ಷಿಣದ ಅಯೋಧ್ಯಾ!

ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ತ್ರೇತಯುಗದ ಕಾಲದ ಆವಂತಿಕಾ ಕ್ಷೇತ್ರ ಇಂದಿನ ಆವನಿ ಗ್ರಾಮ ಸೀತಾಮಾತೆಯ ಮತ್ತು ಶ್ರೀರಾಮನ ಪಾದ ಸ್ಪರ್ಷದಿಂದಾಗಿ ಇಂದಿಗೂ ಸಾಕಷ್ಟು ಪವಾಡಗಳನ್ನು ಪ್ರದರ್ಶಿಸುತ್ತಿದೆ. ತನ್ನೊಡಲಲ್ಲಿ ಹತ್ತಾರು ರಾಮಾಯಣದ ಕಾಲದ ಕುರುಗಳನ್ನು ಹೊಂದಿದೆ. ಆವಣಿ ಎಂದರೆ ಪುಣ್ಯ ಭೂಮಿ, ಇಲ್ಲಿ ರಾಮನ ಮತ್ತು ಸೀತಾ ಮಾತೆಯ ಕೆಲವು ಕುರುಹುಗಳು ಇಂದಿಗೂ ಕಾಣಬಹುದು. ಆವಣಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟದಲ್ಲಿ ಸೀತಾಮಾತೆ ವನವಾಸಕ್ಕೆ ಬಂದಾಗ ವಾಲ್ಮಿಕಿ ಆಶ್ರಮವಾಗಿದ್ದ ಈ ಬೆಟ್ಟದಲ್ಲಿ ವಾಸವಿದ್ದರು ಅನ್ನೋ ಕಾರಣಕ್ಕೆ ಈ ಬೆಟ್ಟವನ್ನು ಸೀತಮ್ಮ ಬೆಟ್ಟ ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ: Ram Lalla: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಹೇಗಿದ್ದಾನೆ? ವೈರಲ್ ಆಯ್ತು ಫೋಟೋ

ಬೆಟ್ಟದ ಮೇಲೆ ನಾವು ಇಂದಿಗೂ ವಾಲ್ಮಿಕಿ ಆಶ್ರಮದ ಹತ್ತಾರು ಕುರುಗಳನ್ನು ನೋಡಬಹುದು. ಆವನಿ ಗ್ರಾಮಕ್ಕೆ ಬಂದ ಕೂಡಲೇ ನಿಮಗೆ ಬೆಟ್ಟದ ಆರಂಭದಲ್ಲೇ ಇಲ್ಲಿ ವಾಲ್ಮಿಕಿ ಆಶ್ರಮ ಅನ್ನೋ ಬೋರ್ಡ್ ಕಾಣುತ್ತದೆ ಅದರಿಂದ ನೀವು ಮುಂದೆ ಸಾಗುತ್ತಾ ಹೋದಂತೆ ಬೃಹತ್ತಾದ ಬೆಟ್ಟದ ಮೇಲೆ ವಾಲ್ಮಿಕಿ ಆಶ್ರಮದ ಕುರುಹುಗಳು ನಿಮಗೆ ಕಾಣುತ್ತವೆ.

ವಾಲ್ಮಿಕಿ ಆಶ್ರಮ, ಲವ ಕುಶರು ಜನ್ಮಿಸಿದ ಸ್ಥಳ, ಹಾಗೂ ಸೀತಾ ಮಾತೆ ವಾಸವಿದ್ದ ಸಣ್ಣದೊಂದು ಮನೆಯೂ ಸಹ ಇಂದಿಗೂ ಕಾಣಬಹುದು. ಇನ್ನು ಇಲ್ಲಿರುವ ಧನುಷ್ಕೋಟೆ ಅನ್ನೋ ಸ್ಥಳ ಸೀತಾಮಾತೆಯನ್ನು ಲಕ್ಷ್ಮಣ ದಂಡಕಾರಣ್ಯದಲ್ಲಿ ಕರೆದುಕೊಂಡು ವನವಾಸಕ್ಕೆ ಬಿಡಲು ಬಂದಾಗ ಸೀತಾಮಾತೆ ಪ್ರಜ್ನೆ ತಪ್ಪಿ ಬೀಳುತ್ತಾಳೆ ಆಗ ಲಕ್ಷ್ಮಣ ತನ್ನ ಧನಸ್ಸನ್ನು ಹೂಡಿ ಗಂಗೆಯನ್ನು ತರುತ್ತಾನೆ. ಈ ಸ್ಥಳದಲ್ಲಿ ಅಂದು ಉತ್ಪತ್ತಿಯಾದ ಗಂಗೆಯನ್ನು ಇಂದಿಗೂ ಧನುಷ್ಕೋಟೆಯಲ್ಲಿ ಪಾತಾಳಗಂಗೆಯಾಗಿ ನಾವು ನೋಡಬಹುದು. ಅದು ವರ್ಷದ 365 ದಿನಗಳ ಬತ್ತದೆ ಇರುತ್ತದೆ.

ಇದನ್ನೂ ಓದಿ: ಅಯೋಧ್ಯೆಯ ಅಲಂಕಾರಕ್ಕೆ ಹುಬ್ಬಳ್ಳಿ ಕಲಾವಿದರ ಅಳಿಲು ಸೇವೆ

ಇದೇ ಬೆಟ್ಟದ ಮೇಲೆ ಸೀತಾ ಮಾತೆಗೆ ಹೆರಿಗೆ ನೋವು ಬಂದಾಗ ನೋವಿನಿಂದ ಹೊರಳಿದ ಬಂಡೆಯನ್ನು ಹೊರಳುಗುಂಡು ಎಂದು ಕರೆಯಲಾಗುತ್ತದೆ.ಇಂದಿಗೂ ಈಸ್ಥಳದಲ್ಲಿ ಮಕ್ಕಳಾಗದವರು, ವಾಮಾಚಾರಕ್ಕೆ ಒಳಗಾದವರು ಈ ಬಂಡೆಯ ಕೆಳಗೆ ಹೊರಳಿದರೆ ಒಳಿತಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಇದೇ ವಾಲ್ಮಿಕಿ ಆಶ್ರಮದಲ್ಲಿ ಲವಕುಶ ಇಬ್ಬರೂ ವಾಲ್ಮಿಕಿ ಮಹರ್ಷಿಗಳಿಂದ ವಿದ್ಯಾಬ್ಯಾಸ ಕಲಿತು, ಇದೇ ಒಂದು ಬೆಟ್ಟದಲ್ಲಿ ಆಟವಾಡಿ ಬೆಳೆದ ಸ್ಥಳವಾಗಿದೆ. ಇದೇ ಆವಂತಿಕಾ ಕ್ಷೇತ್ರದಲ್ಲಿ ರಾಮ ಲಕ್ಷ್ಮಣ ಮತ್ತು ಲವಕುಶರ ನಡುವೆ ಒಂದು ದೊಡ್ಡ ಕಾಳಗ ಕೂಡಾ ನಡೆದಿದೆ.

ಶ್ರೀರಾಮಚಂದ್ರ ಅಶ್ವಮೇಧಯಾಗ ಮಾಡಿದ ಸಂದರ್ಭದಲ್ಲಿ ಲವಕುಶರು ಅಶ್ವದ ಕುದುರೆಯನ್ನು ಕಟ್ಟಿಹಾಕುತ್ತಾರೆ ಈ ವೇಳೆ ತಂದೆ ಮಕ್ಕಳ ನಡುವೆಯೇ ಯುದ್ದ ನಡೆದ ಸ್ಥಳ ಕೂಡಾ ಇದೇ ಎಂದು ಹೇಳಲಾಗುತ್ತದೆ. ಇನ್ನು ಬೆಟ್ಟದ ಮೇಲೆ ಸೀತಾ ಮಾತೆ ಪೂಜೆ ಮಾಡುತ್ತಿದ್ದ ಪಾರ್ವತಿ ದೇವಸ್ಥಾನ ಇದೆ, ಈ ದೇವಾಲಯವನ್ನು ಸೀತಾಪಾರ್ವತಿ ದೇವಸ್ಥಾನ ಎಂದು ಕರೆಯಲಾಗುತ್ತದೆ.ಇದೇ ಸ್ಥಳದಲ್ಲಿ ಸೀತಾಮಾತೆಯನ್ನು ಶ್ರೀರಾಮಚಂದ್ರ ಬಂದು ಕರೆದಾಗ ಸೀತಾಮಾತೆ ನಿರಾಕರಿಸಿ, ಲವಕುಶರನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಿ ಭೂಮಿಗೆ ಒಳಗೆ ಅಂತರ್ಮುಖಿಯಾದ ಸ್ಥಳವೆಂದು ಹೇಳಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:21 pm, Fri, 19 January 24