ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹೃದಯಾಘಾತದಿಂದ ನಿಧನರಾಗಿ ಒಂದು ತಿಂಗಳ ನಂತರ, ಅವರ ಕೊಠಡಿಯಲ್ಲಿ ಮಾಟಮಂತ್ರದ ವಸ್ತುಗಳು ಪತ್ತೆಯಾಗಿವೆ. ಇದು ಸದ್ಯ ಅವರ ಕುಟುಂಬಸ್ಥರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಆಘಾತ ಉಂಟುಮಾಡಿದೆ. ಈ ಬಗ್ಗೆ ಮಾಲೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ
ಮೃತ ಡಾ.ವಸಂತ್ ಕುಮಾರ್​ ಕೊಠಡಿಯಲ್ಲಿ ಸಿಕ್ಕ ವಸ್ತುಗಳು
Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2025 | 9:56 PM

ಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ ಸಾಕಷ್ಟು ಹೆಸರು ಮಾಡಿದ್ದರು. ಕಳೆದೊಂದು ತಿಂಗಳ ಹಿಂದೆ ಹೃದಯಾಘಾತದಿಂದ (heart attack) ಮೃತಪಟ್ಟಿದ್ದರು. ಆದರೆ ಆ ವೈದ್ಯರ ಕೊಠಡಿ ತೆರೆದು ನೋಡಿದಾಗ ಅಲ್ಲೊಂದು ಆಘಾತವೇ ಎದುರಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರ ಕುಟುಂಬಸ್ಥರು ಅಕ್ಷರಶಃ ದಂಗಾಗಿದ್ದಾರೆ. ಮಾಟ‌ಮಂತ್ರ (Black magic) ಮಾಡಿರುವ ವಸ್ತುಗಳು ಪತ್ತೆ ಆಗಿವೆ.

ಜೂನ್​ 5 ರಂದು ಮಾಲೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ಬೆಂಗಳೂರಿನಿಂದ ಮಾಲೂರಿಗೆ ಬರುವ ವೇಳೆಯಲ್ಲಿ ರೈಲಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದರು. ಏಕಾಏಕಿ ನಡೆದ ಈ ದುರ್ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಇನ್ನು ಕಳೆದ 9 ವರ್ಷಗಳಿಂದ ವೈದ್ಯಾಧಿಕಾರಿಯಾಗಿದ್ದ ಡಾ.ವಸಂತ್ ತಮ್ಮ ಉತ್ತಮ ಕಾರ್ಯದಿಂದ ಸಾಕಷ್ಟು ಹೆಸರು ಮಾಡಿದ್ದರು.

ಇದನ್ನೂ ಓದಿ: ಯುವತಿಯರೇ ಟಾರ್ಗೆಟ್: ಕುಬೇರಯಂತ್ರ ಪೂಜೆ ಹೆಸರಿನಲ್ಲಿ ಕುಬೇರರಾಗಲು ಹೋದವರು ಜೈಲುಪಾಲಾದರು

ಇನ್ನು ವಸಂತ್ ಕುಮಾರ್ ಅವರು ಮೃತಪಟ್ಟ ನಂತರ ಆಸ್ಪತ್ರೆಯಲ್ಲಿದ್ದ ಅವರ ಪ್ರತ್ಯೇಕ ಕೊಠಡಿಯ ಬಾಗಿಲು ತೆರೆದಿರಲಿಲ್ಲ, ಒಂದು ತಿಂಗಳ ನಂತರ ಅಂದರೆ ಜಲೈ-5 ರಂದು ವಸಂತ್ ಕುಮಾರ್ ಅವರ ಕುಟುಂಬಸ್ಥರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಕೊಠಡಿ ಬಾಗಿಲು ತೆರೆದು ಅಲ್ಲಿದ್ದ ಅಲ್ಮೇರಾದ ಬಾಗಿಲು ತೆರೆಯಲಾಗಿದೆ. ಈ ವೇಳೆ ಅಲ್ಮೇರಾದಲ್ಲಿ ಕೆಲವೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.

ಮಾಟಮಂತ್ರ ಪತ್ತೆ!

ವಸಂತ್ ಕುಮಾರ್ ಹಠಾತ್ ಸಾವಿನಿಂದ ಅವರ ಕುಟುಂಬಸ್ಥರು ಕೆಲವೊಂದು ಬೆಲೆಬಾಳುವ ವಸ್ತುಗಳು ಅವರ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿದೆ ಎಂದು ಹೇಳಿದ್ದ ಹಿನ್ನೆಲೆ ಬಾಗಿಲನ್ನು ತೆಗೆದಿರಲಾಗಿದ್ದು, ಲ್ಯಾಪ್​ ಟ್ಯಾಪ್​, ಮೊಬೈಲ್ ಪೋನ್​, ಹಾಗೂ ಕೆಲವೊಂದು ದಾಖಲೆ ಪತ್ರಗಳು ಸಿಕ್ಕಿವೆ. ಜೊತೆಗೆ ಕೊಠಡಿಯ ಅಲ್ಮೇರಾದಲ್ಲಿದ್ದ ಒಂದು ಬಾಕ್ಸ್​ನಲ್ಲಿ ಮಾಟಮಂತ್ರ ಮಾಡಿ ಇರಿಸಲಾಗಿದ್ದ ಎರಡು ಬೊಂಬೆಗಳು ಕಂಡು ಬಂದಿವೆ. ಅದರ ಜೊತೆಗೆ ಕೊಠಡಿಯ ಶೌಚಾಲಯದ ಬಳಿ ಬಾವಲಿಯೊಂದು ಮೃತಪಟ್ಟಿದ್ದು ಕಂಡು ಬಂದಿದೆ. ಇದರಿಂದ ವಸಂತ್ ಕುಮಾರ್ ಕುಟುಂಬಸ್ಥರು ಆಘಾತ ವ್ಯಕ್ತಪಡಿಸಿದ್ದು, ಅವರಿಗೆ ಯಾರೋ ವಾಮಾಚಾರ ಮಾಡಿಸಿದ್ದು, ಅದರಿಂದಲೇ ಮೃತಪಟ್ಟಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ಮಹಜರ್ ಮಾಡಿ ಕೆಲವೊಂದು ಬೆಲೆ ಬಾಳುವ ವಸ್ತುಗಳನ್ನು ಅವರ ಕುಟುಂಬಸ್ಥರಿಗೆ ನೀಡಿ ಉಳಿದಂತೆ ವಾಚಾರದ ವಸ್ತುಗಳನ್ನು ಅಲ್ಲೇ ಇಡಲಾಗಿದೆ.

ಕುಟುಂಬಸ್ಥರು ಕೆಲವೊಂದು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸದ್ಯ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಿಹೆಚ್​ಓ ಡಾ.ಶ್ರೀನಿವಾಸ್ ಅವರು ಡಾ.ವಸಂತ್ ಕುಮಾರ್ ಅವರ ಕೊಠಡಿಯಲ್ಲಿ ಕಂಡು ಬಂದ ಕೆಲವೊಂದು ಅನುಮಾನಾಸ್ಪದ ವಸ್ತುಗಳು ಸಿಕ್ಕ ಹಿನ್ನೆಲೆಯಲ್ಲಿ ಮಾಲೂರು ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಒಂದು ತನಿಖೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಅನುಮಾನದ ಭೂತ: ಪತ್ನಿಯ ಮುಖವನ್ನು ಚಾಕುವಿನಿಂದ ವಿರೂಪಗೊಳಿಸಿದ ಪತಿ

ಒಟ್ಟಾರೆ ವೈದ್ಯಾಧಿಕಾರಿ ಡಾ.ವಸಂತ್ ಹೃದಯಾಘಾತದಿಂದ ಮೃತಪಟ್ಟು ಒಂದು ತಿಂಗಳಾಗಿದ್ದು, ಸಾವು ಹೃದಯಾಘಾತದಿಂದಲೇ ಆದರೂ ಕಚೇರಿಯಲ್ಲಿ ಸಿಕ್ಕ ಕೆಲವೊಂದು ವಾಮಾಚಾರದ ಅಂಶಗಳು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ತನಿಖೆ ನಂತರವೇ ಇದು ವಸಂತ್ ಕುಮಾರ್ ಅವರೇ ಮಾಡಿಸಿದ್ದ, ಇಲ್ಲಾ ವಸಂತ್ ಕುಮಾರ್ ಅವರಿಗೆ ಯಾರಾದರೂ ಮಾಡಿಸಿದ್ದ ಅನ್ನೋದು ತಿಳಿದು ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.