ಯುವತಿಯರೇ ಟಾರ್ಗೆಟ್: ಕುಬೇರಯಂತ್ರ ಪೂಜೆ ಹೆಸರಿನಲ್ಲಿ ಕುಬೇರರಾಗಲು ಹೋದವರು ಜೈಲುಪಾಲಾದರು
ಅಸ್ಟ್ರೋಟಾಕ್ ಆ್ಯಪ್ ಮೂಲಕ ಪರಿಚಯವಾದ ನಕಲಿ ಜ್ಯೋತಿಷಿಗಳು ಓರ್ವ ಯುವತಿಯನ್ನು ವಂಚಿಸಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವಂತಹ ಘಟನೆ ಹಾವೇರಿಯಲ್ಲಿ ನಡೆದಿದೆ. ಸದ್ಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಯುವತಿಯರೇ ಟಾರ್ಗೆಟ್ ಮಾಡಲಾಗಿದೆ.

ಹಾವೇರಿ, ಜುಲೈ 07: ನಿಮ್ಮ ಜೀವನದಲ್ಲಿ ತೊಂದರೆ ಇದೆ. ಮುಂದೆ ದೊಡ್ಡ ಗಂಡಾಂತರ ಕಾದಿದೆ. ನೀವು ವಿಶೇಷ ಪೂಜೆ ಮಾಡಿಸಬೇಕು ಅಂತಾ ಹೇಳಿ ಕುಬೇರಯಂತ್ರ ಪೂಜೆ ಹೆಸರಿನಲ್ಲಿ ಓರ್ವ ಯುವತಿಗೆ (Girl) ನಕಲಿ ಜ್ಯೋತಿಷಿಗಳು (Fake Astrologers) ಲಕ್ಷಾಂತರ ರೂ ಚಿನ್ನಾಭರಣ ದೋಚಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಪ್ರಕರಣವನ್ನು ಭೇದಿಸಿರುವ ಹಾವೇರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಮೇಶ ಶಾಸ್ತ್ರಿ, ಗೋಪಾಲ ಶಾಸ್ತ್ರಿ ಮತ್ತು ಕಾರು ಚಾಲಕ ಬಂಧಿತರು.
ಆಗಿದ್ದೇನು?
ಓರ್ವ ಯುವತಿಗೆ ಅಸ್ಟ್ರೋಟಾಕ್ ಆಪ್ಯ್ ಮೂಲಕ ಜ್ಯೋತಿಷಿಗಳ ಎಂಬುವವರು ಪರಿಚಯವಾಗಿದ್ದಾರೆ. ಮನೆಗೆ ತೊಂದರೆ ಆಗದಂತೆ ಕುಂಕುಮ, ಭಂಡಾರ ತಾಯತ ಮತ್ತು ಕುಬೇರಯಂತ್ರ ಪೂಜೆ ಮೂಲಕ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಯುವತಿ ಯಾರಿಗೂ ಗೊತ್ತಾಗದೆ ಮನೆಯಲ್ಲಿದ್ದ 20 ಲಕ್ಷ ರೂ ಮೌಲ್ಯದ 227 ಗ್ರಾಂ ಚಿನ್ನಾಭರಣಗಳನ್ನು ನಕಲಿ ಜ್ಯೋತಿಷಿಗೆ ನೀಡಿದ್ದಾಳೆ.
ಇದನ್ನೂ ಓದಿ: ನೊಂದ ಬಾಲಕಿಯರೇ ಈಕೆಯ ಟಾರ್ಗೆಟ್: ಕೆಲಸ ಕೊಡಿಸುವುದಾಗಿ ಕರೆತಂದು ಹಣಕ್ಕೆ ಮಾರಾಟ
ಬಳಿಕ ಯುವತಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ನಕಲಿ ಜ್ಯೋತಿಷಿಗಳ ಜಾಡು ಹಿಡಿದು ಮೈಸೂರಿನಲ್ಲಿ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿ ನಿವಾಸಿಗಳು. ಬಂಧಿತರಿಂದ 227 ಗ್ರಾಂ ಚಿನ್ನಾಭರಣ ಸುಮಾರು 20 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮೂರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯುವತಿಯರೇ ಟಾರ್ಗೆಟ್
ಈ ನಕಲಿ ಜ್ಯೋತಿಷಿಗಳ ಗ್ಯಾಂಗ್ ಅಸ್ಟ್ರೋಟಾಕ್ ಆಪ್ಯ್ ಮೂಲಕ ಯುವತಿಯರನ್ನ ಟಾರ್ಗೆಟ್ ಮಾಡಿ ಸಂದೇಶ ಕಳಿಸುತ್ತಾರೆ. ಮುಂದೆ ನಿಮಗೆ ಉತ್ತಮ ಭವಿಷ್ಯವಿದೆ. ಕುಬೇರಯಂತ್ರ ಪೂಜೆ ಮಾಡುತ್ತೇವೆ ಅಂತಾ ಹೇಳಿ ನಂಬಿಸಿ ಹಣ ಪೀಕುತ್ತಾರೆ. ಈ ರೀತಿ ಆನ್ ಲೈನ್ನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಯಾರು ಸಹ ಆನ್ ಲೈನ್ ಅಸ್ಟ್ರೋಟಾಕ್ ಆಪ್ಯ್ ನಂಬಿ ಮೋಸ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ತನ್ನ ವಯಸ್ಸಿನ ಎಲ್ಲರಿಗೂ ಮದ್ವೆಯಾದರೂ ನನಗೆ ಇನ್ನೂ ಹೆಣ್ಣು ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ
ಆನ್ ಲೈನ್ನಲ್ಲಿ ಜ್ಯೋತಿಷ್ಯ ಮತ್ತು ಭವಿಷ್ಯ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಯುವಕ, ಯುವತಿಯರು ಸೇರಿದಂತೆ ಜನರು ಜಾಗೃತರಾಗಿರುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




