ಕೋಲಾರ: ಮಗಳನ್ನು ಏರ್ಪೋರ್ಟ್ಗೆ ಬಿಟ್ಟು ಬರುವಾಗ ಕಾರು ಅಪಘಾತ; ತಂದೆ ತಾಯಿ ಸ್ಥಳದಲ್ಲೇ ಸಾವು
ಅದು ಇನ್ನು ನಸುಕಿನಜಾವ ಆ ದಂಪತಿಗಳಿಬ್ಬರು ತಮ್ಮ ಮಗಳನ್ನು ದೂರದ ಈಜಿಪ್ಟ್ ದೇಶಕ್ಕೆ ಕಳುಹಿಸಲು ಏರಪೋರ್ಟ್ಗೆ ಬಿಟ್ಟು, ತಮ್ಮೂರಿಗೆ ವಾಪಸ್ಸಾಗುತ್ತಿದ್ದರು. ಆದರೆ ಹೆದ್ದಾರಿಯಲ್ಲೇ ಕಾದು ಕುಳಿತಿದ್ದ ಜವರಾಯ, ಕಾರು ಅಪಘಾತದ ಮೂಲಕ ಆ ಇಬ್ಬರು ದಂಪತಿಗಳನ್ನು ಬಲಿ ಪಡೆದಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಇಲ್ಲಿದೆ ನೋಡಿ.
ಕೋಲಾರ: ರಸ್ತೆಯ ಪ್ರಪಾತಕ್ಕೆ ಉರುಳಿ ಬಿದ್ದಿರುವ ಕಾರು, ಕಾರ್ನಲ್ಲೇ ಮೃತಪಟ್ಟಿರುವ ದಂಪತಿಗಳು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಇನ್ನೊಂದೆಡೆ ಮೃತರ ಸಂಬಂಧಿಕರ ನೋವು ಇದೆಲ್ಲ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ. ಹೌದು ಇವತ್ತು ಬೆಳ್ಳಂಬೆಳಿಗ್ಗೆ ತಮ್ಮ ಮಗಳನ್ನ ಏರ್ಪೋರ್ಟ್ಗೆ ಬಿಟ್ಟು ವಾಪಾಸ್ಸ್ ಬರುವಾಗ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಕ್ರಾಸ್ ಬಳಿ ಟೊಯೊಟಾ ಇಟಿಯಸ್ ಕಾರ್ ಅಪಘಾತವಾಗಿದೆ. ಈ ವೇಳೆ ಕಾರ್ನಲ್ಲಿದ್ದ ಆಂಧ್ರ ಪ್ರದೇಶದ ಮದನಪಲ್ಲಿ ಮೂಲದ ಶಫೀ (55) ಹಾಗೂ ಶಮಾ (50)ದಂಪತಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣ ಏನು?
ಅಷ್ಟಕ್ಕೂ ಅಪಘಾತವಾಗಿದ್ದೇಗೆ ಅಂತ ನೋಡೋದಾದರೆ ಮದನಪಲ್ಲಿ-ಬೆಂಗಳೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈವೇಳೆ ಸರಿಯಾದ ಸೈನ್ ಬೋರ್ಡ್ಗಳಿಲ್ಲ. ಕಳೆದ ರಾತ್ರಿ ಬೇರೆ ಮಳೆ ಸುರಿದ ಹಿನ್ನೆಲೆ ರಸ್ತೆ ಬದಿಯಲ್ಲಿ ಕೆಸರು ಹೆಚ್ಚಾಗಿದೆ. ಜೊತೆಗೆ ಬೆಳಗಿನ ಜಾವ ನಿದ್ದೆಯ ಮಂಪರು ಬೇರೆ, ಈ ವೇಳೆ ಮದನಪಲ್ಲಿಯತ್ತ ತೆರಳುತ್ತಿದ್ದ ಕಾರ್ ರಸ್ತೆ ಬಿಟ್ಟು ಸ್ವಲ್ಪ ಪಕ್ಕಕ್ಕೆ ಇಳಿದಿದೆ. ರಸ್ತೆ ಬಿಟ್ಟು ಇಳಿದ ಕಾರು ಸೀದಾ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಹಳ್ಳಕ್ಕೆ ಬಿದ್ದಿದೆ. ಈ ವೇಳೆ ಹಳ್ಳದೊಳಗೆ ಇದ್ದ ದೊಡ್ಡ ಕಲ್ಲುಬಂಡೆಗೆ ಕಾರ್ ಡಿಕ್ಕಿಯಾಗಿದೆ.
ಇದನ್ನೂ ಓದಿ:Bengaluru-Mysuru Expressway: ವಿಪಕ್ಷಗಳ ಆರೋಪದ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ
ಕಾರ್ನಲ್ಲಿದ್ದ ಎರಡೂ ಏರ್ ಬ್ಯಾಗ್ ಓಪನ್ ಆಗಿತ್ತಾದರೂ ಕಾರ್ ಪಲ್ಟಿಯಾದ ರಭಸಕ್ಕೆ ಇಬ್ಬರ ತಲೆಗೆ ಬಲವಾದ ಪೆಟ್ಟುಬಿದ್ದು ಇಬ್ಬರು ಕಾರ್ನಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಾರ್ ರಸ್ತೆ ಬಿಟ್ಟು ಹಳ್ಳಕ್ಕೆ ಬಿದ್ದ ಕಾರಣ ಯಾರೂ ಗಮನಿಸಿಲ್ಲ. ಬೆಳಿಗ್ಗೆ 7.30ರ ಸುಮಾರಿನಲ್ಲಿ ಕಾರ್ ಬಿದ್ದಿರುವುದನ್ನು ಗಮನಿಸಿ ಗೌನಿಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕಾರ್ನ್ನು ಕ್ರೇನ್ ಮೂಲಕ ಮೇಲೆತ್ತಿ ನಂತರ ಮೃತರ ಶವಗಳ ಗುರುತು ಪತ್ತೆ ಮಾಡಿ ಶವಗಳನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಮೃತ ಶಫೀಉಲ್ಲಾ ಹಾಗೂ ಶಮಾ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದರು. ಶಫೀ ಸಿವಿಲ್ ಎಂಜಿನಿಯರ್ ಆಗಿದ್ದು ಆಂಧ್ರ, ಕರ್ನಾಟಕ ಸೇರಿದಂತೆ ಹಲವೆಡೆ ರಸ್ತೆ, ಬ್ರಿಡ್ಜ್ ಸೇರಿದಂತೆ ಹಲವು ಗುತ್ತಿಗೆ ಕಾಮಗಾರಿಗಳನ್ನು ಮಾಡಿಸುತ್ತಿದ್ದವರು. ಶಮಾ ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಶಫಿ ಮೂರು ಜನ ಹೆಣ್ಣು ಮಕ್ಕಳ ಪೈಕಿ ಇಬ್ಬರು ಮಕ್ಕಳಿಗೆ ಮದುವೆಯಾಗಿತ್ತು. ಮೂರನೇ ಮಗಳು ಶಿಫಾ ಈಜಿಪ್ಟ್ನಲ್ಲಿ ಕೆಲಸ ಮಾಡುತ್ತಿದ್ದು, ರಜೆಯ ಮೇಲೆ ಊರಿಗೆ ಬಂದಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮಗಳನ್ನು ಬಿಟ್ಟು ವಾಪಸ್ ಬರುವ ವೇಳೆಯಲ್ಲಿ ಈ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:Delhi Crime: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ನೇಹಿತನ ಶವವನ್ನು ಅಂಡರ್ಪಾಸ್ನಲ್ಲಿ ಎಸೆದು ಹೋಗಿದ್ದ ಮೂವರ ಬಂಧನ
ಇನ್ನು ಅಪಘಾತದ ವಿಷಯವನ್ನು ಏರ್ಲೈನ್ಸ್ ಮೂಲಕ ಈಜಿಪ್ಟ್ಗೆ ತೆರಳುತ್ತಿದ್ದ ಮಗಳು ಶೀಫಾಗೂ ತಿಳಿಸಿಲಾಗಿದೆ. ಈ ವೇಳೆ ಆಘಾತಗೊಂಡಿರುವ ಮಗಳು ಅರ್ಧದಲ್ಲೇ ತನ್ನ ಪ್ರಯಾಣ ಮೊಟುಕುಗೊಳಿಸಿ ಸಂಜೆ ವಾಪಾಸ್ಸಾಗಿದ್ದರು. ಮದನಪಲ್ಲಿ ಮತ್ತು ಬೆಂಗಳೂರು ನಡುವಿನ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈವೇಳೆ ಸರಿಯಾದ ಲೈಟ್ ವ್ಯವಸ್ಥೆ ಇಲ್ಲದೆ. ಸರಿಯಾದ ಸೈನ್ ಬೋರ್ಡ್ ಇಲ್ಲದ ಹಿನ್ನೆಲೆಯಲ್ಲಿ ಇದೇ ರೀತಿಯ ಹಲವು ಅಪಘಾತಗಳು ನಡೆಯುತ್ತಿವೆ. ಜೊತೆಗೆ ಕಾಮಗಾರಿ ಕೂಡ ಬಹಳ ನಿಧಾನವಾಗಿ ಮಾಡಲಾಗುತ್ತಿದೆ. ಅಪಘಾತಕ್ಕೆ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ನಿರ್ಲ್ಯಕ್ಷವೇ ಕಾರಣ ಅನ್ನೋದು ಸ್ಥಳೀಯರು ಹಾಗೂ ಮೃತ ಸಂಬಂಧಿಕರ ಆರೋಪ. ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಕೇಸ್ ದಾಖಲು ಮಾಡಬೇಕು ಎಂದು ಮದನಪಲ್ಲಿ ಮಾಜಿ ಶಾಸಕ ಶಹಜಹಾನ್ ಆಗ್ರಹಿಸಿದ್ದಾರೆ.
ಇನ್ನು ಅಪಘಾತಕ್ಕೆ ಸಂಬಂಧಿಸಿದಂತೆ ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೂ ಪ್ರಕರಣ ದಾಖಲು ಮಾಡಲಾಗುತ್ತಿದೆ. ಒಟ್ಟಾರೆ ಮಗಳನ್ನು ವಿದೇಶಕ್ಕೆ ಕಳುಹಿಸಿ ಮನೆಗೆ ವಾಪಸ್ಸಾಗುತ್ತಿದ್ದ ತಂದೆ ತಾಯಿಗಳು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿ ಪರಲೋಕ ಸೇರಿಕೊಂಡಿದ್ದು ಮಾತ್ರ ದುರಂತ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Sat, 18 March 23