Bengaluru-Mysuru Expressway: ವಿಪಕ್ಷಗಳ ಆರೋಪದ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ

Rakesh Nayak Manchi

|

Updated on:Mar 17, 2023 | 3:42 PM

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಅಪಘಾತ ಪ್ರಕರಣಗಳು ಮುಂದುವರಿದಿದ್ದು, ಸಂಭವಿಸಿದ ನೂರಾರು ಅಪಘಾತದಲ್ಲಿ ಸಾವು-ನೋವುಗಳನ್ನು ಉಂಟಾಗಿವೆ. ಇದೀಗ ಮತ್ತೊಂದು ಅಪಘಾತ ನಡೆದಿದ್ದು, ಲಾರಿ ಹಾಗೂ ಕಾರು ಚಾಲಕರು ಪ್ರಾಣಾಪಾಯದಿಂದ ಪರಾಗಿದ್ದಾರೆ.

Bengaluru-Mysuru Expressway: ವಿಪಕ್ಷಗಳ ಆರೋಪದ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ
ಬೆಂಗಳೂರು ಮೈಸೂರು ಹೈವೇಯಲ್ಲಿ ಸಂಭವಿಸಿದ ಅಪಘಾತ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ (Bengaluru-Mysuru Expressway) ಅಪಘಾತ ಪ್ರಕರಣಗಳು ಮುಂದುವರಿದಿದ್ದು ರಾಮನಗರ ತಾಲೂಕಿನ ಬಸವನಪುರ ಬಳಿ ಮೇಲ್ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಲಾರಿ ಹಾಗೂ ಕಾರು ಚಾಲಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭಿವಿಸಿದ ನಂತರ ಲಾರಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿ ರಭಸಕ್ಕೆ ಲಾರಿ ಹಿಂಭಾಗ ಕಾರಿನ‌ ಮೇಲೆ ಬಿದ್ದಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಲಾರಿ ಹಾಗೂ ಕಾರಿನ ಚಾಲಕರು ಜೀವಹಾನಿಯಿಂದ ಬಚಾವಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

‘ನಿಧಾನವೇ ಪ್ರಧಾನ’, ‘ಅವಸರವೇ ಅಪಘಾತಕ್ಕೆ ಕಾರಣ’ ಎಂಬ ನಾಣ್ಣುಡಿಯನ್ನು ಗಮನದಲ್ಲಿಡದೆ ಶೀಘ್ರದಲ್ಲಿ ತಲುವು ದಾವಂತದಲ್ಲಿ ವೇಗವಾಗಿ ವಾಹನ ಚಲಾಯಿಸಲಾಗುತ್ತಿದೆ. ಇದುವೇ ಬೆಂಗಳೂರು- ಮೈಸೂರು ದಶಪಥದಲ್ಲಿ ದುರ್ಘಟನೆಗಳಿಗೆ ಕಾರಣ ಎನ್ನಲಾಗಿದೆ. ಮಾತ್ರವಲ್ಲದೆ, ವೇಗದ ಮಿತಿಯ ಸೂಚನಾ ಫಲಕವಿಲ್ಲದ ಪರಿಣಾಮ ವಾಹನ ಸವಾರರು ವೇಗವಾಗಿ ಚಾಲನೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರ ಕೈಯಿಂದ ಅದ್ದೂರಿಯಾಗಿ ಹೈವೇ ಉದ್ಘಾಟಿಸಿದ ದಿನವೇ ಮದ್ದೂರು ಬಳಿ ಅಪಘಾತ ಸಂಭವಿಸಿತ್ತು. ಕಾಮಗಾರಿ ಆರಂಭಗೊಂಡ ನಂತರದಿಂದ ಇಂದಿನವರೆಗೆ ನೂರಾರು ಅಪಘಾತ ಪ್ರಕರಣಗಳು ಸಂಭವಿಸಿದ್ದು, ಹತ್ತಾರು ಮಂದಿ ಪ್ರಾಣಕಳೆದುಕೊಂಡರೆ ಇನ್ನೂ ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದ್ದರೂ ಅಪಘಾತ ತಡೆಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅಳವಡಿಸದೇ ಇರುವುದು ಅಪಘಾತ, ಸಾವು-ನೋವುಗಳಿಗೆ ಕಾರಣವಾಗಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 84ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Toll collection row: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಟೋಲ್ ಸಂಗ್ರಹಣೆ ಸರಿ ಎಂದ ಸಂಸದ ಪ್ರತಾಪ್ ಸಿಂಹ

ರಾಮನಗರ ಜಿಲ್ಲಾ ವ್ಯಾಪ್ತಿಯೊಂದರಲ್ಲೇ ಸಂಭವಿಸಿದ ಅಪಘಾತಗಳ ಸಂಖ್ಯೆ ಶತಕ (110ಕ್ಕೂ ಹೆಚ್ಚು) ದಾಟಿದ್ದು, 41 ಮಂದಿ ಸಾವನ್ನಪ್ಪಿದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ದ್ವೀಶತಕ ದಾಟಿದೆ. ನಡೆದ 225 ಅಪಘಾತದಲ್ಲಿ 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಲಕ್ಷ್ಮೀಪುರ ಗೇಟ್‌-ಮಣಿಪಾಲ್ ಆಸ್ಪತ್ರೆವರೆಗಿನ ಹೆದ್ದಾರಿಯಲ್ಲಿ ಈವರೆಗೆ ಸಂಭವಿಸಿದ 30 ಆ್ಯಕ್ಸಿಡೆಂಡ್ ಕೇಸ್​ನಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಮೈಸೂರಿನವರೆಗೂ ಸುಮಾರು 130 ಕಿಲೋ ಮೀಟರ್ ದೂರದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಯನ್ನ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಶೇ 80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬೆಂಗಳೂರಿನಿಂದ ಮಂಡ್ಯದವರೆಗೂ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಸುಂದರವಾದ ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಇದುವರೆಗೂ ಕಡಿವಾಣ ಬಿದ್ದಿಲ್ಲ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ, ಅಪಘಾತದಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇದು ವಾಹನ ಸವಾರರು, ಸ್ಥಳೀಯರ ಆತಂಕಕ್ಕೂ ಕೂಡ ಕಾರಣವಾಗಿದೆ. ಹೆದ್ದಾರಿಯಲ್ಲಿನ ಅನಾಹುತಗಳ ಬಗ್ಗೆ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಸಮಾಧಾನ ಹೊರಹಾಕುತ್ತಿದ್ದು, ಅಪೂರ್ಣ ಕಾಮಗಾರಿಯೇ ಇವೆಲ್ಲದಕ್ಕೆ ಕಾರಣ ಎಂದು ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada