ಬೆಂಗಳೂರು-ಮೈಸೂರು ಹೈವೇ ಟೋಲ್ ಸಂಗ್ರಹಕ್ಕೆ ಆಕ್ಷೇಪಣೆ; ಎನ್​​ಹೆಚ್ಎಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Rakesh Nayak Manchi

|

Updated on:Mar 15, 2023 | 7:55 PM

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಯ ಟೋಲ್ ಸಂಗ್ರಹದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ವ್ಯಕ್ತವಾಗುತ್ತಿದ್ದು, ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಬೆಂಗಳೂರು-ಮೈಸೂರು ಹೈವೇ ಟೋಲ್ ಸಂಗ್ರಹಕ್ಕೆ ಆಕ್ಷೇಪಣೆ; ಎನ್​​ಹೆಚ್ಎಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ (Bengaluru-Mysuru Expressway) ಟೋಲ್ ಸಂಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಕರ್ನಾಟಕ ಹೈಕೋರ್ಟ್ (High Court Of Karnataka) ಸೂಚನೆ ನೀಡಿದೆ. ಹೈವೇ ಕಾಮಗಾರಿ ಮುಗಿಯುವ ಮುನ್ನವೇ ಟೋಲ್ ಸಂಗ್ರಹ (Toll Collecting) ಮಾಡುತ್ತಿರುವ ಹಾಗೂ ಫಾಸ್ಟ್​ಟ್ಯಾಗ್ (FASTag) ಇಲ್ಲದೇ ಮ್ಯಾನುಯಲ್ ಆಗಿ ಟೋಲ್ ಸಂಗ್ರಹ ಮಾಡುತ್ತಿರುವುದು ಸೇರಿದಂತೆ ಇತ್ಯಾದಿ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಸೂಚಿಸಿದೆ. ಸಾರ್ವಜನಿಕ ಆಕ್ಷೇಪಣೆಗಳ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ಪ್ರೇರಿತ ವಿಚಾರಣೆ ನಡೆಸಿ ಮೂರು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಬೆಂಗಳೂರು ಕನಕಪುರ ಹೆದ್ದಾರಿ ಕಾಮಗಾರಿ ಕುರಿತಾಗಿ 2022ರಲ್ಲಿ ದಾಖಲಾಗಿದ್ದ ಅರ್ಜಿ ವಿಚಾರಣೆಯನ್ನು ಬುಧವಾರ (ಮಾರ್ಚ್ 15) ಕೈಗೆತ್ತಿಕೊಂಡಿತು. ಈ ವೇಳೆ ಪೀಠವು ಬೆಂಗಳೂರು ಕನಕಪುರ ಹೆದ್ದಾರಿ ಸಮಸ್ಯೆಗಳು ಮತ್ತು ಇತ್ತೀಚೆಗೆ ಲೋಕಾರ್ಪಣೆಗೊಂಡ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ಹೈವೇಯಲ್ಲಿ ಸಮಸ್ಯೆಗಳು ಒಂದೇ ರೀತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​​ವೇ ‌ದಶಪಥ ಅಲ್ಲ, ಟೋಲ್ ದರ ಬಗ್ಗೆಯೂ ಮಾಹಿತಿ ನೀಡಿದ ಯೋಜನಾ ನಿರ್ದೇಶಕ

ದಶಪಥ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸಂಗ್ರಹಿಸುತ್ತಿರುವ ಟೋಲ್ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ವರದಿಗಳು ಬಿತ್ತರವಾಗಿರುವುದನ್ನು ಗಮನಿಸಿರುವುದಾಗಿ ಹೇಳಿದ ಪೀಠ, ಟೋಲ್ ಸಂಗ್ರಹಿಸುವ ಮುನ್ನ ಸಾರ್ವಜನಿಕರಿಗೆ ತಿಳಿಸಬೇಕು. ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿತ್ತು. ಆದರೆ ಪಾಲನೆ ಆಗಿಲ್ಲ ಎಂದು ಬೊಟ್ಟು ಮಾಡಿದ ಪೀಠ, ವಿಚಾರಣೆಯನ್ನು ಏಪ್ರಿಲ್ 11ಕ್ಕೆ ಮುಂದೂಡಿತು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ NHAI ಟೋಲ್‌ ಸಂಗ್ರಹ ಆರಂಭಿಸಿದೆ. ನಿನ್ನೆಯಷ್ಟೇ (ಮಾರ್ಚ್ 14) ಆರಂಭವಾದ ಟೋಲ್ ಸಂಗ್ರಹಕ್ಕೆ ಅನೇಕ ವಿರೋಧಗಳು ವ್ಯಕ್ತವಾಗಿದ್ದವು. ಎಕ್ಸ್‌ಪ್ರೆಸ್‌ ವೇನಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಟೆಕ್ನಿಕಲ್ ಎರರ್ ಆಗುತ್ತಿದೆ. ಫಾಸ್ಟ್ಯಾಗ್ ಇದ್ರೂ ಟೋಲ್ ಪ್ಲಾಜಾ ಸ್ಕ್ಯಾನ್ ತೆಗೆದುಕೊಳ್ಳುತ್ತಿಲ್ಲ. ಸ್ಕ್ಯಾನ್ ಆಗೋದ್ರಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಟೋಲ್ ಕಂಬಿ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಸ್ಕ್ಯಾನ್ ಆಗಿ ವಾಹನ ಚಲಿಸುವಾಗಲೇ ವಾಹನದ ಮೇಲೆ ಕಂಬಿ ಬೀಳುತ್ತಿದೆ. ಹೀಗಾಗಿ ವಾಹನ ಚಾಲಕರು ಗರಂ ಆಗಿದ್ದರು.

ಈ ಎರಡು ಹೆದ್ದಾರಿಗಳಲ್ಲಿ ಮಾತ್ರವಲ್ಲ, ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರಲ್ಲಿಯೂ ಇಂತಹ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಜತಾದ್ರಿ ಪುರ ಬಳಿ ಟೋಲ್​ ಸಂಗ್ರಹ ಮಾಡಲಾಗುತ್ತಿದ್ದು, ಇನ್ನೂ ಸಮರ್ಪಕವಾಗಿ ರಸ್ತೆ, ಬ್ರಿಡ್ಜ್​ಗಳು ಆಗಿಲ್ಲ, ಸರ್ವೀಸ್ ರಸ್ತೆ ಸೇರಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಹೀಗಿದ್ದರೂ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada