ಕೋಲಾರ: ವಿಶ್ವ ಯೋಗ ದಿನಾಚರಣೆಯಂದು(International Yoga Day 2022) ವಿಶ್ವದ ಗಮನ ಸೆಳೆಯಲು ಕೋಲಾರ ಜಿಲ್ಲಾಡಳಿತ ವಿಭಿನ್ನ ಹಾಗೂ ವಿಶಿಷ್ಟವಾದ ಪ್ರಯತ್ನವೊಂದು ಮಾಡುತ್ತಿದೆ. ಕೋಲಾರದ ಶತಶೃಂಗ ಪರ್ವತದ(Shatashrunga Parvat) ಮೇಲೆ ಬೃಹತ್ ಪ್ರದೇಶದಲ್ಲಿ ಸಾವಿರಾರು ಜನರೊಂದಿಗೆ ಯೋಗ ಮಾಡಲು ಸಿದ್ದತೆ ಮಾಡಲಾಗುತ್ತಿದೆ ಬೆಟ್ಟಗುಡ್ಡಗಳ ಮೇಲಿನ ಪ್ರದೇಶದಲ್ಲಿ ತಯಾರಿ ಕುರಿತ ವರದಿ ಇಲ್ಲಿದೆ.
ಶತಶೃಂಗ ಪರ್ವತದ ಮೇಲೆ ಯೋಗ ಮಾಡಲು ಸಿದ್ದತೆ
ಜೂನ್-21 ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಕೋಲಾರದಲ್ಲಿ ಮಾತ್ರ ಕೋಲಾರ ಜಿಲ್ಲಾಡಳಿತ ಹಾಗೂ ಸಂಸದ ಮುನಿಸ್ವಾಮಿ ವಿಶೇಷ ಪ್ರಯತ್ನದ ಫಲವಾಗಿ ವಿಶ್ವದ ಗಮನ ಸೆಳೆಯುವ ಸಲುವಾಗಿ ಕೋಲಾರದ ಶತಶೃಂಗ ಪರ್ವತ ಅಂತರಗಂಗೆ ಬೆಟ್ಟಗಳ ಸಾಲಿನ ತಪ್ಪಲಿನಲ್ಲಿ ಸಾವಿರಾರು ಜನರು ಯೋಗ ಮಾಡಲು ಸಿದ್ದತೆ ಮಾಡಲಾಗಿದೆ. ದೇಶದ ಪ್ರಧಾನಿ ಮೋದಿ ಹೇಳಿದಂತೆ ವಿಭಿನ್ನ ಐತಿಹಾಸಿಕ ಪ್ರದೇಶದಲ್ಲಿ ಯೋಗ ಮಾಡಿ ಅನ್ನೋ ಮಾತಿನಂತೆ, ಕೋಲಾರದಲ್ಲಿ ವಿಶ್ವಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ವಿಶೇಷವಾಗಿ ಆಚರಣೆ ಮಾಡಬೇಕು ಎನ್ನುವ ಸಲುವಾಗಿ ಬೆಟ್ಟಗುಡ್ಡಗಳ ಮೇಲೆ ಪ್ರಕೃತಿ ಮಡಿಲಲ್ಲಿ ಅಂದರೆ ಕೋಲಾರದ ಶತಶೃಗಂಗ ಪರ್ವತಗಳ ಮಧ್ಯೆ ಯೋಗ ಮಾಡಲು ಸಿದ್ದತೆ ಮಾಡಲಾಗಿದೆ.
40 ಎಕರೆ ಪ್ರದೇಶದಲ್ಲಿ 15 ದಿನಗಳಿಂದ ಸಿದ್ದತೆ ಬೇಕಾದ ತಯಾರಿ
ಸುಮಾರು 40 ಎಕರೆ ಪ್ರದೇಶದಲ್ಲಿ ಜಾಗವನ್ನು ಕಳೆದ ಹದಿನೈದು ದಿನಗಳಿಂದ ಕ್ಲೀನ್ ಮಾಡಿ ಅಗತ್ಯ ರಸ್ತೆ, ಹಾಗೂ ಮೂಲಭೂತ ಸೌಲಭ್ಯಗಳನ್ನು ಮಾಡಲಾಗಿದೆ. ಇದಕ್ಕೆ ಕೋಲಾರ ಸಂಸದ ಮುನಿಸ್ವಾಮಿ ವಿಶೇಷ ಕಾಳಜಿ ವಹಿಸಿ ಈ ವಿಶೇಷ ಸ್ಥಳದಲ್ಲಿ ಯೋಗ ಮಾಡಬೇಕೆಂದು ಪಟ್ಟು ಹಿಡಿದು ಕೆಲಸ ಮಾಡಿಸುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಮಳೆ ಬಂದರೂ ಸಮಸ್ಯೆ ಬಾರದ ರೀತಿಯಲ್ಲಿ ಪ್ಲಾಸ್ಟಿಕ್ ಕವರ್ ಸಹಿತ ಮ್ಯಾಟ್ಗಳನ್ನು ಹಾಕಿ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಬೃಹತ್ತಾದ ವೇದಿಕೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆ ವೇಳೆ 30 ಸೆಕೆಂಡ್ ಲೇಟ್ ಆಗಿ ಬಂದ ಪ್ರಿಂನ್ಸಿಪಾಲ್ ಕೆನ್ನೆಗೆ ಬಾರಿಸಿದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್
ಬೆಟ್ಟದ ಮೇಲೆ 10 ರಿಂದ 15 ಸಾವಿರ ಜನರಿಂದ ಯೋಗ
ಶತಶೃಂಗ ಪರ್ವದತ ಮೇಲೆ ಶಾಲಾ ಮಕ್ಕಳು ಸೇರಿದಂತೆ ಯೋಗ ಪಟುಗಳು, ಜಿಲ್ಲೆಯ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು, ವಿವಿದ ಯೋಗ ಸಮಿತಿಗಳ ಯೋಗ ಪಟುಗಳು ಸೇರಿ ಸುಮಾರು 10 ರಿಂದ 15 ಸಾವಿರ ಜನರು ಏಕಕಾಲದಲ್ಲಿ ಯೋಗ ಮಾಡುವ ಮೂಲಕ ವಿಭಿನ್ನ ಸ್ಥಳದಲ್ಲಿ ದೇಶದ ಗಮನ ಸೆಳೆಯಲಾಗುತ್ತದೆ. ವಾಹನಗಳ ಮೂಲಕ ಶಾಲಾ ಮಕ್ಕಳು ಶಿಕ್ಷಕರು ಬಂದರೆ, ಸಂಸದ ಮುನಿಸ್ವಾಮಿ ಜೊತೆಗೆ ಸಾವಿರಾರು ಜನರು ನಡೆದುಕೊಂಡು ಮ್ಯಾರಥಾನ್ ಮೂಲಕ ಯೋಗದ ಸ್ಥಳಕ್ಕೆ ಬಂದು ಸೇರಲಿದ್ದಾರೆ, ಎಲ್ಲ ಸೇರಿ ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ.
ಬೆಟ್ಟದ ಮೇಲೆ ಯೋಗ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಿರುವ ಪೊಲೀಸ್ ಇಲಾಖೆ
ನಾಳಿನ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಎಸ್ಪಿ ದೇವರಾಜ್ ಬೇಟಿ ನೀಡಿ ಶತಶೃಂಗ ಬೆಟ್ಟದ ಮೇಲಿನ ಪ್ರದೇಶದವನ್ನು ಪರಿಶೀಲನೆ ನಡೆಸಿದ್ದಾರೆ, ಸಾವಿರಾರು ಜನರು ಸೇರುವ ಹಿನ್ನೆಲೆಯಲ್ಲಿ ಇಡೀ ಬೆಟ್ಟದಲ್ಲಿ ಭದ್ರತೆ ಹಾಗೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸುಮಾರು 250 ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಬೆಟ್ಟದ ಬುಡದ ಕೆಳಗಿನ ವರೆಗೆ ಶಾಲಾ ಮಕ್ಕಳು ತಮ್ಮ ಶಾಲಾ ಬಸ್ಗಳಲ್ಲಿ ಬಂದು ನಂತರ, ಅಲ್ಲಿಂದ ಬೇರೆ ವಾಹನಗಳಲ್ಲಿ ಮಕ್ಕಳನ್ನು ಯೋಗದ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
ಬೆಟ್ಟದ ಪ್ರದೇಶವಾಗಿರುವ ಕಾರಣ ವಾಹನ ಸುರಕ್ಷತೆ ಎಲ್ಲವನ್ನೂ ಈಗಾಗಲೇ ತಪಾಸಣೆ ಮಾಡಲಾಗಿದೆ,ಆಯ್ದ ವಾಹನಗಳಲ್ಲಿ ಮಾತ್ರ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಸೂಚನೆ ನೀಡಲಾಗಿದೆ. ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಪ್ರತಿ 200 ಮೀಟರ್ಗೆ ಒಬ್ಬೊಬ್ಬ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯೋಗ ಮಾಡುವ ಸ್ಥಳದ ಸುತ್ತಲೂ ಬೆಟ್ಟದ ಎತ್ತರದ ಪ್ರದೇಶದಲ್ಲೂ ಕೂಡಾ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ: ಸಿಎಂ ಬೊಮ್ಮಾಯಿ ಬಗ್ಗೆ ತಮಾಷೆ ಮಾಡಿ ಮಾತನಾಡಿದ ಸುತ್ತೂರು ಶ್ರೀ
ಬೆಟ್ಟದ ಇತಿಹಾಸ
ಶತಶೃಂಗ ಪರ್ವತಕ್ಕೆ ತನ್ನದೇ ಆದ ಇತಿಹಾಸ ಇದೆ. ಈ ಬೆಟ್ಟದಲ್ಲಿ ಮುಕುಚುಂದ ಮುನಿಗಳು ತಪ್ಪಸ್ಸು ಮಾಡಿದ ಸ್ಥಳ ಎಂದು ಪ್ರಸಿದ್ದಿ ಇದೆ. ಇದೇ ಬೆಟ್ಟದ ಮೇಲಿನ ಅಂತರಗಂಗೆ ಬಸವನ ಬಾಯಿಂದ ಕಾಶಿಯಿಂದಲೇ ಗಂಗೆ ಹರಿದು ಬರುತ್ತಾಳೆ ಅನ್ನೋ ಪ್ರತೀತಿ ಹಾಗೂ ನಂಬಿಕೆ ಇದೆ. ಇನ್ನು ಪಾಂಡವರು ವನವಾಸಕ್ಕೆಂದು ಬಂದಂತ ಸಂದರ್ಭದಲ್ಲಿ ಈ ಬೆಟ್ಟದ ಮೇಲೆ ವಾಸವಿದ್ದರು ಅನ್ನೊದಕ್ಕೆ ಕೆಲವೊಂದು ಕುರುಹುಗಳು ನಮಗೆ ಸಿಗುತ್ತದೆ. ಇದೇ ಬೆಟ್ಟದ ಮೇಲೆ ಗುಹೆಯೊಂದರಲ್ಲಿ ಪಾಂಡವರು ವಾಸವಿದ್ದ ಸ್ಥಳ ಪಾಂಡವರ ಪಡಸಾಲೆ ಇಂದಿಗೂ ನಾವು ನೋಡಬಹುದು. ಪಾಂಡವರು ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗ ಕೂಡಾ ಇದೇ ಬೆಟ್ಟದ ಮೇಲಿದೆ. ಇದೇ ಬೆಟ್ಟದ ಮೇಲೆ ಗಂಗರು, ಚೋಳರು, ಹಾಗೂ ಬಾದಾಮಿ ಚಾಲುಕ್ಯರ ಕಾಲದಲ್ಲಿ ಸುಂದರ ಕೆತ್ತನೆಗಳ ಮೂಲಕ ಕೆತ್ತಲಾಗಿರುವ ಸುಂದರ ದೇವಾಲಯಗಳು ಇವೆ. ಇಂದಿಗೂ ಈ ಬೆಟ್ಟದ ಮೇಲೆ ಏಳು ಊರುಗಳಿವೆ.
ಒಟ್ಟಾರೆ ಯೋಗ ಅಂದರೆ ನಿಜಕ್ಕೂ ಅದೊಂದು ಆರೋಗ್ಯ ಎನ್ನುವಂತಾಗಿದ್ದು ಅದರಲ್ಲೂ ಇಂಥ ಅದ್ಬುತವಾದ ಪ್ರದೇಶದಲ್ಲಿ ಯೋಗ ಮಾಡೋದೆ ಒಂದು ವಿಶೇಷ, ಹಾಗಾಗಿ ನಾಳೆ ಯೋಗ ದಿನದಂದು ಕೋಲಾರದಲ್ಲಿ ನಡೆಯುವ ಯೋಗ ದಿನಾಚರಣೆ ನಿಜಕ್ಕೂ ವಿಶ್ವದ ಗಮನ ಸೆಳೆಯೋದರಲ್ಲಿ ಅನುಮಾನವಿಲ್ಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕೋಲಾರದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:22 pm, Mon, 20 June 22