ಟಿವಿ9 ಇಂಪ್ಯಾಕ್ಟ್: ಒಂದೂವರೆ ವರ್ಷದ ಬಳಿಕ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ, ಜನರು ಫುಲ್ ಖುಷ್

| Updated By: ರಮೇಶ್ ಬಿ. ಜವಳಗೇರಾ

Updated on: Nov 12, 2024 | 7:27 PM

ವಿದ್ಯುತ್ ಸಮಸ್ಯೆ ಎದುರಾಗಿ ಕಾಡು ಪ್ರಾಣಿಗಳ ಭಯದಲ್ಲೇ ಕಗ್ಗತ್ತಲಲ್ಲಿ ಜೀವನ ನಡೆಸುತ್ತಿದ್ದ ಗ್ರಾಮಕ್ಕೆ ಟಿವಿ9 ಮೂಲಕ ಬೆಳಕು ಬಂದಿದೆ. ವಿದ್ಯಾರ್ಥಿಗಳು, ಮಹಿಳೆಯರು ಬದುಕು ಸವೆಸುತ್ತಾ ಪರದಾಡುತ್ತಿದ್ದ ಗ್ರಾಮಕ್ಕೆ ಪರಿಸ್ಥಿತಿಯ ಕುರಿತು ಟಿವಿ9 ನಲ್ಲಿ ಪವರ್​ ಪುಲ್​ ವರದಿ ಪ್ರಸಾರವಾದ ಒಂದು ತಿಂಗಳಲ್ಲೇ ಗ್ರಾಮಕ್ಕೆ ಹೊಸದಾಗಿ ಪವರ್ ಕನೆಕ್ಷನ್​ ಸಿಕ್ಕಿದೆ. ಬುಡ್ಡಿ ದೀಪದ ಕೆಳಗೆ ಬದುಕು ಕಳೆಯುತ್ತಿದ್ದ ಹಳ್ಳಿಗೆ ವಿದ್ಯುತ್ ಸಂಪರ್ಕ ಸಿಗುವ ಮೂಲಕ ಬಿಗ್ ಇಂಪ್ಯಾಕ್ಟ್ ಆಗಿದೆ.

ಟಿವಿ9  ಇಂಪ್ಯಾಕ್ಟ್: ಒಂದೂವರೆ ವರ್ಷದ ಬಳಿಕ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ, ಜನರು ಫುಲ್ ಖುಷ್
Follow us on

ಕೋಲಾರ, (ನವೆಂಬರ್ 12): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮನೆ ಮನೆಗೆ ಉಚಿತ ವಿದ್ಯುತ್ ಕೊಡುತ್ತಿದ್ದರೆ, ಇತ್ತ ಇಲ್ಲೊಂದು ಗ್ರಾಮಕ್ಕೆ ಕತ್ತಲೆ ಆವರಿಸಿತ್ತು. ಕತ್ತಲಾದರೆ ಈ ಗ್ರಾಮದ ಜನರು, ಶಾಲಾ ಮಕ್ಕಳು ಬುಡ್ಡಿ ದೀಪದ ಕೆಳಗೆ ಬದುಕು ಕಳೆಯುವ ಸ್ಥಿತಿ ಎದುರಾಗಿತ್ತು. ಇದೆ ವೇಳೆ ಗ್ರಾಮದ ಜನರು ನೀಡಿದ ಮಾಹಿತಿ ಮೇರೆಗೆ ಟಿವಿ9 ಸುದ್ದಿ ಪ್ರಸಾರ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೋಲಾರ ತಾಲ್ಲೂಕು ಜನ್ನಘಟ್ಟ ಮಜರಾ ಓಬೇನಹಳ್ಳಿ ಗ್ರಾಮದಲ್ಲಿ ಸದ್ಯ ಗೃಹ ಜ್ಯೋತಿ ಬೆಳಗುತ್ತಿದೆ.

ವಿದ್ಯುತ್​ ಇಲ್ಲ ಅನ್ನೋ ಕಾರಣಕ್ಕೆ ಗ್ರಾಮಕ್ಕೆ ಯಾರೂ ಹುಡುಗಿಯರನ್ನು ಮದುವೆ ಮಾಡಿಕೊಡುತ್ತಿರಲಿಲ್ಲ. ಅಷ್ಟೇ ಅಲ್ಲದೆ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಓದಲು ಸಮಸ್ಯೆ ಎದುರಾಗಿತ್ತು. ಸುಮಾರು 50ಕ್ಕೂ ಹೆಚ್ಚು ವಿದ್ಯುತ್​ ಕಂಬಗಳನ್ನು ಅಳವಡಿಸಿ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಜನ್ನಘಟ್ಟ ಮಜರಾ ಓಬೇನಹಳ್ಳಿ ಗ್ರಾಮಸ್ಥರು ಖುಷಿಯಾಗಿದ್ದು ಟಿವಿ9 ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಕಳೆದ ತಿಂಗಳ ಸೆಪ್ಟೆಂಬರ್ 3 ರಂದು ಗ್ರಾಮದ ಪರಿಸ್ಥಿತಿಯ ಕುರಿತು ವರದಿ ಪ್ರಸಾರ ಮಾಡಲಾಗಿತ್ತು.

ಇದನ್ನೂ ಓದಿ: ಬೆಳಕು ನೀಡದ ಗೃಹಜ್ಯೋತಿ: ನಿತ್ಯ ಬುಡ್ಡಿ ದೀಪದ ಕೆಳಗೆ ಬದುಕು ಕಳೆಯುತ್ತಿದೆ ಓಬೇನಹಳ್ಳಿ ಗ್ರಾಮ

ಗೃಹಲಕ್ಷ್ಮೀ ಯೋಜನೆ ಮೂಲಕ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುವ ಮನೆ ಮನೆ ಬೆಳಗುವ ಉದ್ದೇಶ ಸರ್ಕಾರದ್ದಾಗಿತ್ತು. ಆದ್ರೆ ಅದೇ ಯೋಜನೆಯ ಫಲ ಈ ಓಬೇನಹಳ್ಳಿ ಗ್ರಾಮಕ್ಕೆ ಸಿಕ್ಕಿರಲಿಲ್ಲ, ತಾಂತ್ರಿಕ ಸಮಸ್ಯೆ ಎದುರಾಗಿ ಗೃಹಜ್ಯೋತಿ ಯೋಜನೆ ಜಾರಿಯಾದ ಬಳಿಕ ಓಬೇನಹಳ್ಳಿ ಗ್ರಾಮಕ್ಕೆ ಕೇವಲ ಮೂರು ಪೇಸ್ ವಿದ್ಯುತ್ ನೀಡಲಾಗುತ್ತಿತ್ತು. ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ವಿದ್ಯುತ್ ನೀಡಲಾಗುತ್ತಿತ್ತು. ಇದರಿಂದ ಗ್ರಾಮಸ್ಥರು ಈ ಕಾಲದಲ್ಲೂ ಕ್ಯಾಂಡಲ್​, ಬುಡ್ಡಿ ದೀಪ ಹಿಡಿದು ಬದುಕು ಸವೆಸುವ ಸ್ಥಿತಿ ನಿರ್ಮಾಣ ವಾಗಿತ್ತು.ಕಾಡು ಪ್ರಾಣಿಗಳ ಭಯದಲ್ಲೇ ಕಗ್ಗತ್ತಲಲ್ಲೇ ಬದುಕು ಸವೆಸುತ್ತಾ ಪರದಾಡುತ್ತಿದ್ದರು. ಬಳಿಕ ಟಿವಿ9 ನಲ್ಲಿ ಪವರ್​ ಪುಲ್​ ವರದಿ ಪ್ರಸಾರವಾದ ಬೆನ್ನಲ್ಲೇ ಗ್ರಾಮಕ್ಕೆ ಪವರ್ ಬಂದಿದೆ.

ಇನ್ನು ಗ್ರಾಮಕ್ಕೆ ವ್ಯವಸಾಯಕ್ಕೆಂದು ರಾತ್ರಿಹೊತ್ತು ಮಾತ್ರವೇ ಮೂರು ಪೇಸ್​ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು ಅದು ಮೂರು ನಾಲ್ಕು ಗಂಟೆ, ಉಳಿದ ಸಮಯದಲ್ಲಿ ಜನರು ವಿದ್ಯುತ್​ ಸಂಪರ್ಕವೇ ಇಲ್ಲದೆ ಜನರು ಮನೆಯಲ್ಲಿ ಲೈಟಿಂಗ್ಸ್ ಹಾಗೂ ಗೃಹಪಯೋಗಕ್ಕೆ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿತ್ತು. ಗ್ರಾಮದ ಹೊರಗೆ ತೋಟಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದ ಜನರು ಸಂಜೆಯಾಯಿತು ಎಂದರೆ ಜೀವ ಭಯದಲ್ಲಿ ಜೀವನ ಸಾಗಿಸುವ ಸ್ಥಿತಿ ಎದುರಾಗಿತ್ತು.ಮನೆಯ ಹೊರಗೆ ಹೋದರೆ, ಹಾವುಗಳು, ಕಾಡು ಹಂದಿ, ಕರಡಿ, ಚಿರತೆಗಳ ಕಾಟ, ಸಂಜೆಯಾಗುತ್ತಲೇ ಮನೆಯಲ್ಲಿ ಚಾರ್ಜಿಂಗ್ ಟೈಟ್ ಹಾಗೂ ಕ್ಯಾಂಡಲ್ ದೀಪದಲ್ಲಿ ಜೀವನ ಸಾಗಿಸುತ್ತಿದ್ರು. ಟಿವಿ9 ವರದಿ ಪ್ರಸಾರವಾಗಿ ಕೇವಲ ಒಂದು ತಿಂಗಳಲ್ಲಿ ಹೊಸದಾಗಿ 50 ವಿದ್ಯುತ್​ ಕಂಬಗಳನ್ನು ಅಳವಡಿಸಿ ಪ್ರತ್ಯೇಕ ವಿದ್ಯುತ್​ ಸಂಪರ್ಕವನ್ನೇ ನೀಡಲಾಗಿದ್ದು, ದಿನದ 24 ಗಂಟೆಯೂ ಗ್ರಾಮದಲ್ಲಿ ವಿದ್ಯುತ್​ ಜಗಮಗಿಸುತ್ತಿದೆ, ಇದರಿಂದ ಗ್ರಾಮದ ಮಹಿಳೆಯರು ಮಕ್ಕಳು ಎಲ್ಲರೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಮೂಲಕ ಇಡೀ ರಾಜ್ಯದಲ್ಲಿ 24 ಗಂಟೆಯೂ ವಿದ್ಯುತ್ ನಳನಳಿಸುತ್ತಿದ್ರೆ ಈ ಗ್ರಾಮದಲ್ಲಿ ಅದು ಕನಸಾಗಿತ್ತು.ವಿದ್ಯುತ್ ಸಿಗದೆ ಕತ್ತಲೆಯಲ್ಲಿದ್ದ ಓಬೇನಹಳ್ಳಿಗೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟು ಆ ಜನರ ಕನಸು ನನಸು ಮಾಡಿದ ಟಿವಿ9 ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ