ಕೆಎಚ್ ಮುನಿಯಪ್ಪ ಹಾದಿಯಲ್ಲಿ ಸಿದ್ದರಾಮಯ್ಯ ಮುಂದುವರಿಯಲಿ: ಕೋಲಾರಕ್ಕೆ ಬರಬೇಕೆಂದುಕೊಂಡಿರುವ ಮುಂಚೂಣಿ ನಾಯಕನಿಗೆ ಸ್ವಪಕ್ಷೀಯರ ತಾಕೀತು
ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ ನಂತರದಲ್ಲಿ ವಿವಿದ ಪಕ್ಷಗಳ ಲೆಕ್ಕಾಚಾರಗಳು ಜೋರಾಗಿದೆ. ಸಿದ್ದರಾಮಯ್ಯ ನಿಜಕ್ಕೂ ಬರುತ್ತಾರಾ, ಬಂದರೆ ಅವರನ್ನು ಯಾವ ರೀತಿ ಸೋಲಿಸುವುದು? ಸಿದ್ದು ಪರ ನಿಲ್ಲುವವರು ಯಾರು? ಸಿದ್ದುಗೆ ಕೈಕೊಡುವವರು ಯಾರು? ಎನ್ನುವ ಚರ್ಚೆಗಳು ನಡೆಯುತ್ತಿದೆ.
ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆ (Karnataka Election 2023) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಹಲವು ಪ್ರಶ್ನೆಗಳಿಗೆ ಬಹುತೇಕ ಉತ್ತರ ಸಿಕ್ಕಿದಂತಾಗಿದೆ. ನಿನ್ನೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಪ್ರವಾಸ ನಡೆಸಿದ ನಂತರ ಅವರ ಮಾತುಗಳನ್ನು ಕೇಳಿದಾಗ ಬಹುತೇಕ ಕೋಲಾರ ಕ್ಷೇತ್ರದಿಂದಲೇ ಅವರು ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿದೆ. ಈ ನಡುವೆ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಪಕ್ಷಗಳಲ್ಲಿ ಲೆಕ್ಕಾಚಾರಗಳು ಕೂಡ ಆರಂಭಗೊಂಡಿವೆ. ರಾಜ್ಯ ನಾಯಕರುಗಳು ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲಿಸುತ್ತೇವೆ ಎಂದು ಹೇಳಿದರೆ, ಸ್ಥಳೀಯ ನಾಯಕರುಗಳು ಕೂಡಾ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೂ ಅವರ ಸೋಲು ಖಚಿತ ಎಂದು ಮಾತನಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಸಚಿವ ವರ್ತೂರ್ ಪ್ರಕಾಶ್ (Varthur Prakash) ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಕೋಲಾರ ಕ್ಷೇತ್ರಕ್ಕೆ ಬರುವುದಿಲ್ಲ. ಅವರು ರಮೇಶ್ ಕುಮಾರ್ ಹಾಗೂ ಕೆಲವು ಶಾಸಕರುಗಳ ಒತ್ತಾಯಕ್ಕೆ ಬಂದು ಹೋಗಿದ್ದಾರೆ. ಅವರೊಬ್ಬರು ರಾಜ್ಯ ನಾಯಕರು, ಅವರಿಗೆ ಇಡೀ ರಾಜ್ಯ ಪ್ರವಾಸ ಮಾಡುವ ಜವಾಬ್ದಾರಿ ಇರುತ್ತದೆ. ಅದರಂತೆ ಕೋಲಾರಕ್ಕೂ ಬಂದು ಹೋಗಿದ್ದಾರೆ. ಸಿದ್ದರಾಮಯ್ಯ ಎಲ್ಲೂ ಕೂಡಾ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಲ್ಲ. ಸಿದ್ದರಾಮಯ್ಯ ಏನು ಎಂದು ನನಗೆ ಚೆನ್ನಾಗಿ ಗೊತ್ತು. ನಾನು ಏನು ಎಂದು ಅವರಿಗೆ ಗೊತ್ತು. ನಾನು ಕುರುಬ ಸಮುದಾಯದವನು, ಒಂದು ವೇಳೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ರಾಜ್ಯದ ಜನರೇ ಅವರಿಗೆ ಉಗಿಯುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಂಸದ ಮುನಿಸ್ವಾಮಿ (Muniswamy) ಕೂಡಾ ಸಿದ್ದರಾಮಯ್ಯ ಪ್ರವಾಸವನ್ನು ವ್ಯಂಗ್ಯಮಾಡಿದ್ದು, ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಒಂದು ಕ್ಷೇತ್ರದಲ್ಲಿ ನಿಲ್ಲಲು ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಅವರು ಇನ್ನು ಹತ್ತು ಬಾರಿ ಬಂದು ಹೋದರೂ ಅವರು ಗೆಲ್ಲುವುದಿಲ್ಲ. ಅವರು ಜನ ಪರವಾಗಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಅವರು ಕ್ಷೇತ್ರ ಹುಡುಕಾಡುವ ಪರಿಸ್ಥಿತಿ ಇರುತ್ತಿರಲಿಲ್ಲ, ಸಿದ್ದರಾಮಯ್ಯ ಅವರನ್ನು ಬೇರೆ ಪಕ್ಷದವರಲ್ಲ ಕಾಂಗ್ರೆಸ್ನವರೇ ಸೋಲಿಸುತ್ತಾರೆ ಎಂದರು.
ಸಿಎಂ ಆಗಿದ್ದವರು ಚಾಮುಂಡೇಶ್ವರಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ, ಜೊತೆಗೆ ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ, ಅವರೆಷ್ಟೆ ತಿಪ್ಪರಲಾಗ ಹಾಕಿದರೂ ಅವರು ಗೆಲ್ಲುವುದಿಲ್ಲ. ಇನ್ನು ಅವರ ಪಕ್ಷದಲ್ಲಿಯೇ ಆಂತರಿಕ ಒಳಜಗಳ ಭಿನ್ನಾಭಿಪ್ರಾಯಗಳಿವೆ, ನಿನ್ನೆ ನಡೆದ ಕಾರ್ಯಕ್ರಮದಿಂದ ಕೆ.ಎಚ್.ಮುನಿಯಪ್ಪ ಬಣದವರು ಹಾಗೂ ಕೆಜಿಎಫ್ ಶಾಸಕಿ ದೂರ ಉಳಿದಿದ್ದು ಅದಕ್ಕೆ ಉದಾಹರಣೆಯಾಗಿದೆ ಎಂದರು. ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ಕೆಲವರಿಗೆ ಸೋಲುವ ಭಯ ಕಾಡುತ್ತಿರುವುದರಿಂದ ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಕರೆತರುತ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರನ್ನ ಕರೆತರುತ್ತಿರುವ ನಾಯಕರೇ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರನ್ನ ಕೋಲಾರ ಅಭ್ಯರ್ಥಿ ಎಂದು ಹೇಳಿ ಇದೀಗ ಮೋಸ ಮಾಡುತ್ತಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿ ದಲಿತ ವಿರೋಧಿ, ಹಿಂದುಳಿದವರ ವಿರೋಧಿ ಎಂದರೆ ಅದು ಸಿದ್ದರಾಮಯ್ಯ, ಪರಮೇಶ್ವರ್ ಅವರ ಸೋಲಿಗೆ ಮಲ್ಲಿಕಾರ್ಜುನ ಅವರ ಸೋಲಿಗೆ ಕಾರಣರಾಗಿದ್ದವರು ಇವರು, ಇದಲ್ಲದೆ ಅವರದ್ದೆ ಸಮುದಾಯದವರಾದ ಎಂಟಿಬಿ ನಾಗರಾಜ್, ಶಂಕರ್ ಅವರ ರಾಜಕೀಯ ಪರಿಸ್ಥಿತಿಯನ್ನ ಯಾವ ರೀತಿ ಮಾಡಿದ್ದಾರೆಂದು ಗೊತ್ತಿದೆ ಎಂದರು.
ಸಿದ್ದು ಕೋಲಾರ ಭೇಟಿ ವಿಚಾರದಲ್ಲಿ ಸ್ವಪಕ್ಷೀಯರಲ್ಲೇ ಭಿನ್ನರಾಗ
ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಹೋಗಿರುವ ವಿಚಾರವಾಗಿ ಕಾಂಗ್ರೇಸ್ ಸ್ವಪಕ್ಷೀಯರಲ್ಲೇ ಭಿನ್ನರಾಗ ಉಂಟಾಗಿದೆ. ಕೆ.ಎಚ್ ಮುನಿಯಪ್ಪ ಬೆಂಬಲಿಗರು ಮಾತನಾಡಿ, ನಿನ್ನೆ ಸಿದ್ದರಾಮಯ್ಯ ಬಂದಿದ್ದ ವೇಳೆಯಲ್ಲಿ ಕೇವಲ ಕೋಲಾರ ಕ್ಷೇತ್ರದ ಜನರು ಬಂದಿರಲಿಲ್ಲ. ಇಡೀ ಜಿಲ್ಲೆಯಿಂದ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯ ಜನ ಬಂದಿದ್ದರು. ರಮೇಶ್ ಕುಮಾರ್ ಸೇರಿದಂತೆ ಘಟಬಂಧನ್ ಅವರನ್ನು ನೋಡಿ ಯಾರು ಬಂದಿರಲಿಲ್ಲ. ಇದು ಕೆ.ಎಚ್ ಮುನಿಯಪ್ಪರನ್ನು ನೋಡಿ ಬಂದಿದ್ದ ಜನರು. ಹೀಗಾಗಿ ಸಿದ್ದರಾಮಯ್ಯ ಅವರು ಕೆ.ಎಚ್. ಮುನಿಯರಪ್ಪ ಅವರ ಹಾದಿಯಲ್ಲಿ ನಡೆಯಬೇಕು ಎಂದಿದ್ದಾರೆ.
ಅಲ್ಲದೆ, ಘಟ ಬಂಧನ್ ನಾಯಕರುಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿಯೇ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದ್ದವರು. ಹಾಗಾಗಿ ಪಕ್ಷಕ್ಕೆ ನಿಷ್ಠರಿರುವರ ಜೊತೆಗೆ ಸಿದ್ದರಾಮಯ್ಯ ಹೋಗಬೇಕು. ಸಿದ್ದರಾಮಯ್ಯ ಕೋಲಾರಕ್ಕೆ ಬರುವುದು ನಮ್ಮ ಭಾಗ್ಯ. ಆದರೆ ಅವರು ಕೆ.ಎಚ್ ಮುನಿಯಪ್ಪರನ್ನು ಕಡೆಗಣಿಸಬಾರದು. ಅವರನ್ನು ಪರಿಗಣನೆಗೆ ತೆಗೆದುಕೊಂಡು ಹೋಗಬೇಕು. ಹಾಗೊಂದು ವೇಳೆ ಕಡೆಗಣಿಸಿದ್ದೇ ಆದಲ್ಲಿ ಮುನಿಯಪ್ಪನವರ ಆದೇಶಕ್ಕೆ ನಾವು ಬದ್ಧರಾಗಿರುವುದಾಗಿ ಕಾಂಗ್ರೇಸ್ ಮುಖಂಡರೂ ಆಗಿರುವ ಮುನಿಯಪ್ಪ ಬೆಂಬಲಿಗ ಜಯದೇವ್ ಹೇಳಿದ್ದಾರೆ.
ಒಟ್ಟಾರೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಂಚಾರ ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಭಿನ್ನ ವಿಭಿನ್ನ ರಾಗಗಳನ್ನು ಹುಟ್ಟು ಹಾಕಿದೆ. ಸಿದ್ದು ಕೋಲಾರಕ್ಕೆ ಬರುವುದಿಲ್ಲ ಎಂದು ಕೆಲವರು ಹೇಳಿದರೆ, ಸಿದ್ದರಾಮಯ್ಯ ಬಂದರೆ ಏನು ಮಾಡುವುದು ಎನ್ನುವ ಭಯವೋ? ಅಥವಾ ಬಂದರೆ ಅವರ ಪಕ್ಷದವರೇ ಅವರನ್ನು ಸೋಲಿಸುತ್ತಾರೆ ಎಂದು ಹೇಳುತ್ತಾ ಸಿದ್ದರಾಮಯ್ಯರನ್ನು ಭಯಪಡಿಸುತ್ತಿದ್ದಾರೋ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Tue, 15 November 22