ಮುಳಬಾಗಿಲಲ್ಲಿ ತಲೆ ಎತ್ತಲಿದ್ದ ಡ್ರಗ್ಸ್ ಮಾಫಿಯಾ ಚೆನ್ನೈ ಪೊಲೀಸರ ಸಕಾಲಿಕ ಮಾಹಿತಿಯಿಂದ ಛಿದ್ರ ಛಿದ್ರ! 7 ಆರೋಪಿಗಳ ಬಂಧನ, ಕಿಂಗ್ ಪಿನ್ಗಳು ಪರಾರಿ
ಒಂದೂವರೆ ತಿಂಗಳ ಹಿಂದೆಯಷ್ಟೇ ಮುಳಬಾಗಿಲು ನಗರದಲ್ಲಿ ಶುರುಮಾಡಲು ಹೊರಟಿದ್ದ ಡ್ರಗ್ಸ್ ತಯಾರಿಕಾ ಘಟಕವನ್ನು ಚೆನ್ನೈ ಪೊಲೀಸರು ನೀಡಿದ ಖಚಿತ ಮಾಹಿತಿ ಮೇರೆಗೆ ಮುಳಬಾಗಿಲು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕೋಲಾರ: ರಾಜ್ಯದ ಗಡಿಯಲ್ಲಿ ಗುಪ್ತವಾಗಿ ತಲೆ ಎತ್ತುತ್ತಿದ್ದ ಅಂತರರಾಜ್ಯ ಡ್ರಗ್ಸ್ ಮಾಫಿಯಾವೊಂದು ಆರಂಭದಲ್ಲೇ ಪೊಲೀಸರು ಚಿವುಟಿ ಹಾಕಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಈಗಷ್ಟೇ ಸಿದ್ದವಾಗುತ್ತಿದ್ದ ಡ್ರಗ್ಸ್ ತಯಾರಿಕಾ ಪ್ಯಾಕ್ಟರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಏಳು ಜನ ಅಂತರ ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಕಿಂಗ್ ಪಿನ್ಗಳು ಪರಾರಿಯಾಗಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಟೀಚರ್ಸ್ ಕಾಲೋನಿಯಲ್ಲಿ, ಕರ್ನಾಟಕದ ಗಡಿಭಾಗದ ಮೂಲಕ ರಾಜ್ಯಕ್ಕೆ ಎಂಟ್ರಿಕೊಡಲು ಸಿದ್ದವಾಗುತ್ತಿದ್ದ ಡ್ರಗ್ಸ್ ಮಾಫಿಯಾದ ಘಟಕ ಇದೆ. ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಡ್ರಗ್ಸ್ ಮಾಫಿಯಾ ಕ್ರಮಿನಲ್ಸ್ಗಳಾದ ಫಾಯಾಜ್ ಹಾಗೂ ರಮೇಶ್ ಎಂಬುವರು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಮುಳಬಾಗಿಲು ನಗರದಲ್ಲಿ ಶುರುಮಾಡಲು ಹೊರಟಿದ್ದ ಡ್ರಗ್ಸ್ ತಯಾರಿಕಾ ಘಟಕವನ್ನು ಚೆನ್ನೈ ಪೊಲೀಸರು ನೀಡಿದ ಖಚಿತ ಮಾಹಿತಿ ಮೇರೆಗೆ ಮುಳಬಾಗಿಲು ಪೊಲೀಸರು ಕಾರ್ಯಾಚರಣೆ ನಡೆಸಿ ಏಳು ಜನ ಆರೋಪಿಗಳನ್ನು ಬಂಧಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ತಯಾರಿಕಾ ಸಾಮಗ್ರಿಗಳು, ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ಮಾಫಿಯಾದ ಘಟಕದಲ್ಲಿ ಮೆಥಾಂಪ್ಟಮೈನ್ ಅನ್ನೋ ಡ್ರಗ್ಸ್ನ್ನು ತಯಾರು ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಈ ಮೆಥಾಂಪ್ಟಮೈನ್ ಅನ್ನೋ ಡ್ರಗ್ಸ್ ತಯಾರು ಮಾಡಲು ಕ್ಲೋರೋಫಾರಂ, ಮಿಥೈಲ್, ಟಾರ್ಟಾರಿಕ್ ಆಸಿಡ್, ಅಸಿಟೋನ್ ಲಿಕ್ವಿಡ್ ನ್ನು ಬಳಸಿ ಅದನ್ನು ಸಣ್ಣ ಸಣ್ಣ ಟ್ಯಾಬ್ಲೆಟ್ ಅಥವಾ ಪಿಲ್ಸ್ ರೂಪದಲ್ಲಿ ಮಾಡಿ ಅದನ್ನು ನಾಲ್ಕೈದು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಅನ್ನೋ ಮಾಹಿತಿ ಸಿಕ್ಕಿದೆ.
ಡ್ರಗ್ಸ್ ಮಾಫಿಯಾ ಕಿಂಗ್ ಪಿನ್ಗಳು ತಮ್ಮ ಕೃತ್ಯಕ್ಕೆ ಮುಳಬಾಗಿಲನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಮುಳಬಾಗಿಲು ಕರ್ನಾಟಕ ರಾಜ್ಯದ ಗಡಿ ಪ್ರದೇಶ ಇಲ್ಲಿಂದ ಕೇವಲ ಹತ್ತು ಕಿ.ಮೀ. ದೂರ ಹೋದರೆ ಆಂಧ್ರ ಹಾಗೂ ತಮಿಳುನಾಡು ಗಡಿಗಳು ಸಿಗುತ್ತವೆ ಅದಕ್ಕಾಗಿಯೇ ಡ್ರಗ್ಸ್ ತಯಾರು ಮಾಡುವ ಫಯಾಜ್ ಹಾಗೂ ರಮೇಶ್ ಮುಳಬಾಗಿಲನ್ನು ಆಯ್ಕೆ ಮಾಡಿಕೊಂಡಿರು. ಕಳೆದ ಒಂದೂವರೆ ತಿಂಗಳ ಹಿಂದೆ ಬಾಂಬೆ ಮೂಲದ ಫಯಾಜ್ ಬೆಂಗಳೂರಿಗೆ ಬಂದು ಅಲ್ಲಿ ಆಟೋ ಡ್ರೈವರ್ ಮನ್ಸೂರ್ ಪಾಷಾ ಎಂಬುವನನ್ನು ಪರಿಚಯ ಮಾಡಿಕೊಂಡು ಅವನ ಜೊತೆಗೆ ಸೀದಾ ಮುಳಬಾಗಿಲಿಗೆ ಬಂದಿದ್ದಾನೆ. ಮುಳಬಾಗಿಲು ನಗರದ ಟೀಚರ್ಸ್ ಕಾಲೋನಿಯಲ್ಲಿ ಶೇಖರ್ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ನಾವು ಗ್ರಾನೈಟ್ ಕೆಲಸ ಮಾಡುವವರು ನಮ್ಮ ಕೆಲವೊಂದು ಮೆಷೆನ್ಗಳಿವೆ ಎಂದು ಹೇಳಿ ಈ ಮೆಷಿನರಿಗಳನ್ನು ತಂದಿಟ್ಟುಕೊಂಡಿದ್ದಾರೆ. ನಂತರ ಏಳೆಂಟು ಜನ ಇರ್ತಾರೆ ಎಂದು ಎರಡೂ ಪ್ಲೋರನ್ನು ಇಪ್ಪತ್ತು ಸಾವಿರ ಬಾಡಿಗೆ ಹಾಗೂ ಎರಡು ಲಕ್ಷ ಅಡ್ವಾನ್ಸ್ ಕೊಟ್ಟು ಬಾಡಿಗೆ ಪಡೆದುಕೊಂಡಿದ್ದಾರೆ.
ಇದಾದ ನಂತರ ಮನೆ ಮಾಲೀಕ ಬಾಸ್ಕರ್ ಅಗ್ರಿಮೆಂಟ್ ಮಾಡಿಕೊಂಡು ಮನೆ ಕೊಟ್ಟು ತಮ್ಮ ಪಾಡಿಗೆ ತಾವಿದ್ದರು ಆದರೆ, ಚೆನೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಮುಳಬಾಗಿಲು ಪೊಲೀಸರು ಹೋಗಿ ಮನೆ ಮೇಲೆ ದಾಳಿ ಮಾಡಿದಾಗಲೇ ಅಸಲಿ ವಿಷಯ ತಿಳಿದು ಬಂದಿದೆ. ಸದ್ಯ ಮನೆಯಲ್ಲಿದ್ದ ಬಾಂಬೆ ಮೂಲದ ಮೂರು ಜನ ಹಾಗೂ ಅಸ್ಸಾಂ ಮೂಲದ ಮೂರು ಜನ, ಹಾಗೂ ಬೆಂಗಳೂರಿನ ಆಟೋ ಡ್ರೈವರ್ ಮನ್ಸೂರ್ ಪಾಷಾ ಸೇರಿ ಒಟ್ಟು ಏಳು ಜನರನ್ನು ಬಂಧಿಸಿದ್ದು, ಪ್ರಮುಖ ಕಿಂಗ್ ಪಿನ್ಗಳಾದ ಫಯಾಜ್ ಹಾಗೂ ರಮೇಶ್ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ವಿಷಯ ತಿಳಿದ ಮನೆಯ ಮಾಲೀಕ ಶೇಖರ್ ಗಾಬರಿಗೊಂಡಿದ್ದು ನಡೆದ ವಿಷಯವನ್ನೆಲ್ಲಾ ಪೊಲೀಸರ ಮುಂದೆ ತಿಳಿಸಿದ್ದಾರೆ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ