ಕೋಲಾರ: ಚಿನ್ನದ ನಾಡಿನಲ್ಲಿವೆ ಅಪರೂಪದ ಕೃಷ್ಣಮೃಗಗಳು!; ಬೇಕಿದೆ ಜವಾಬ್ದಾರಿಯುತ ರಕ್ಷಣೆಯ ಹೊಣೆ

| Updated By: guruganesh bhat

Updated on: Aug 26, 2021 | 5:44 PM

ಪ್ರಭಾವಿಗಳು ಜಿಂಕೆಯನ್ನು ಕೊಂದು ಮಾಂಸ, ಚರ್ಮ, ಕೊಂಬನ್ನು ಬೆಂಗಳೂರು ಸೇರಿದಂತೆ ಆಂಧ್ರ ತಮಿಳುನಾಡಿಗೆ ಮಾರಾಟ ಮಾಡುತ್ತಿರುವ ದಂದೆಯೂ ಕೂಡಾ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.

ಕೋಲಾರ: ಚಿನ್ನದ ನಾಡಿನಲ್ಲಿವೆ ಅಪರೂಪದ ಕೃಷ್ಣಮೃಗಗಳು!; ಬೇಕಿದೆ ಜವಾಬ್ದಾರಿಯುತ ರಕ್ಷಣೆಯ ಹೊಣೆ
ಕೃಷ್ಣಮೃಗ
Follow us on

ಕೋಲಾರ: ಅದು ಚಿನ್ನವನ್ನು ಬೆಳೆದಿದ್ದ ಅತಿ ಬೆಲೆಬಾಳುವ ಭೂಮಿ. ಅಲ್ಲಿ ಚಿನ್ನದಷ್ಟೇ ಬೆಲೆಬಾಳುವ ಪ್ರಕೃತಿಯಲ್ಲಿನ ಅತಿ ಅಪರೂಪದ ಪ್ರಬೇಧದ ಕೃಷ್ಣಮೃಗಗಳು ವಾಸಮಾಡುತ್ತಿವೆ. ಸದಾ ಸ್ವಚ್ಚಂದವಾಗಿ ಕಾಡಿನಲ್ಲಿ ಆಡುತ್ತ ನಲಿಯುತ್ತಿರುವ ಕೃಷ್ಣಮೃಗಗಳ ಹಿಂಡು ನಿಮಗೆ ಅಲ್ಲಿ ಕಾಣಸಿಗುತ್ತದೆ. ಒಮ್ಮೆ ನೀವು ಆ ರಸ್ತೆಯಲ್ಲಿ ಹೋದರೆ ಸಾಕು, ನೀವೇ ಮನಸೋತು ಕೃಷ್ಣಮೃಗಗಳ ಸೌಂದರ್ಯಕ್ಕೆ ಮರುಳಾಗಿಬಿಡುತ್ತೀರಿ. ಇಂತಹ ಸುಂದರವಾದ ದೃಶ್ಯವನ್ನು ನೀವು ಕಣ್ಣತುಂಬಿಕೊಳ್ಳಬೇಕೆಂದರೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರಕ್ಕೆ ಹೊಂದಿಕೊಂಡಿರುವ ಕೃಷ್ಣಾವರಂ ಬಳಿಗೆ ಬರಬೇಕು. ಕೆಜಿಎಫ್ ನಗರಕ್ಕೆ ಹೊಂದಿಕೊಂಡಂತಿರುವ ಚಿನ್ನದ ಗಣಿ ಪ್ರದೇಶದಲ್ಲಿ ಸಾವಿರಾರು ಕೃಷ್ಣಮೃಗಗಳು ವಾಸಮಾಡುತ್ತಿವೆ. 

ಕೋಲಾರ ಜಿಲ್ಲೆಯಲ್ಲಿ ಸುಮಾರು 1 ರಿಂದ 2 ಸಾವಿರ ಕೃಷ್ಣಮೃಗಗಳು ಇವೆ. ಅರಣ್ಯ ಒತ್ತುವರಿ ಹಾಗೂ ವನ್ಯ ಸಂಪತ್ತು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕಾಡಿನಲ್ಲಿರುವ ಇಂಥ ಸುಂದರ ಪ್ರಾಣಿಗಳ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಬೇಟೆಗಾರರ ಹಾವಳಿ, ಆಹಾರ-ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಕೃಷ್ಣಮೃಗಗಳು ಬೀದಿ ನಾಯಿಗಳ ದಾಳಿಗೆ ಅಥವಾ ರಸ್ತೆ ದಾಟುವಾಗಲೋ, ವಾಹನಗಳಿಗೆ ಸಿಕ್ಕಿ ಸಾವನ್ನಪ್ಪುತ್ತಿವೆ. ಇನ್ನು ಕೆಲವು ನೀರಿಗಾಗಿ ಬಾವಿ, ಹಳ್ಳಗಳಲ್ಲಿ ಬಿದ್ದು ಸಾವನ್ನಪ್ಪುತ್ತಿರುವುದು ಒಂದೆಡೆಯಾದರೆ, ಬೆಂಗಳೂರು ಸೇರಿದಂತೆ ಹಲವೆಡೆಯಿಂದ ಬಂದು ಜಿಂಕೆಗಳನ್ನು ಬೇಟೆಯಾಡುವ ದಂದೆಯಿಂದಲೂ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿವೆ.

ಕೃಷ್ಣಮೃಗ ಹಾಗೂ ಜಿಂಕೆ ವನ ಮಾಡುವ ಪ್ರಸ್ತಾಪ ಕೈಬಿಟ್ಟ ಸರ್ಕಾರ
ಪ್ರಮುಖವಾಗಿ ಕೋಲಾರ ಜಿಲ್ಲೆಯ ಕೆಜಿಎಫ್‌ನ ಕೃಷ್ಣಾವರಂ, ಬಡಮಾಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಹಾಗೂ ಕೃಷ್ಣಮೃಗಗಳು ಹೆಚ್ಚಿನ ಸಂಖ್ಯೆಯಲ್ಲಿವೆ.  ಹಾಗಾಗಿ ಜಿಲ್ಲೆಯಲ್ಲಿ ಜಿಂಕೆವನ ನಿರ್ಮಾಣಮಾಡಿ ಅವುಗಳ ರಕ್ಷಣೆಗೆ ಯೋಜನೆ ರೂಪಿಸಬೇಕು ಅನ್ನೋದು ಪ್ರಾಣಿಪ್ರಿಯರ ಬಹಳ ವರ್ಷಗಳ ಬೇಡಿಕೆ ಇತ್ತು. ಅದರಂತೆ ಅರಣ್ಯ ಇಲಾಖೆ ಕೂಡಾ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ಸರ್ಕಾರ ಸದ್ಯಕ್ಕೆ ಆ ಪ್ರಸ್ತಾವನ್ನೆಯನ್ನು ತಿರಸ್ಕರಿಸಿದ್ದು ಪ್ರಾಣಿಪ್ರಿಯರಿಗೆ ನಿರಾಸೆಯುಂಟು ಮಾಡಿದೆ.

ಸದ್ದಿಲ್ಲದೆ ಕರಗುತ್ತಿದೆ ಕೃಷ್ಣಮೃಗಗಳ ಸಂಖ್ಯೆ
ಕೃಷ್ಣಮೃಗಗಳು ವಾಸವಿರುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಒತ್ತುವರಿ ನಿರಂತರವಾಗಿ ನಡೆಯುತ್ತಿದೆ. ಒತ್ತುವರಿ ಜಾಗದಲ್ಲಿ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಈ ವೇಳೆ ರೈತರು ಬೆಳೆದ ಬೆಳೆಗಳನ್ನು ಜಿಂಕೆಗಳು ಹಾಗೂ ಕೃಷ್ಣಮೃಗಗಳು ಬಂದು ತಿನ್ನುತ್ತವೆ ಅನ್ನೋ ಕಾರಣಕ್ಕೆ ಕೆಲ ರೈತರು ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಕೊಂಡು ವಿದ್ಯುತ್ ಹರಿ ಬಿಡುವುದು, ಉರುಳು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರಿಂದಲೂ ಜಿಂಕೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಸಾವನ್ನಪ್ಪುವ ಮೂಲಕ ಕಾಡು ಪ್ರಾಣಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತಿದೆ. ಇಷ್ಟು ಮಾತ್ರವಲ್ಲದೇ ರಾತ್ರೋರಾತ್ರಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕೆಲ ಪ್ರಭಾವಿಗಳು ಜಿಂಕೆಯನ್ನು ಕೊಂದು ಮಾಂಸ, ಚರ್ಮ, ಕೊಂಬನ್ನು ಬೆಂಗಳೂರು ಸೇರಿದಂತೆ ಆಂಧ್ರ ತಮಿಳುನಾಡಿಗೆ ಮಾರಾಟ ಮಾಡುತ್ತಿರುವ ದಂದೆಯೂ ಕೂಡಾ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ. ಆದರೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಅಂಥಹದ್ದೇನೂ ಇಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಕೋಲಾರದಲ್ಲಿ ಜಿಂಕೆ ಹಾಗೂ ಕೃಷ್ಣಮೃಗಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಜಿಂಕೆ ವನ ಮಾಡುವ ಮೂಲಕ ಪ್ರಕೃತಿಯ ಸುಂದರ ಜೀವಗಳನ್ನು ರಕ್ಷಿಸುವ ಕೆಲಸ ಮಾಡಬೇಕಿದೆ. ಇಲ್ಲವಾದಲ್ಲಿ ಕೊನೆಗೆ ಅವುಗಳನ್ನು ಚಿತ್ರಗಳಲ್ಲಿ ನೋಡುವ ಸ್ಥಿತಿ ತಲುಪಬೇಕಾಗುತ್ತದೆ.

ವಿಶೇಷ ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: 

ಕೊಪ್ಪಳ: ಜಾನಪದ ಶ್ರೀ ಪುರಸ್ಕೃತ ಶತಾಯುಷಿ ಅಜ್ಜಿಯೂ ಸೇರಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಒಂದೇ ಕುಟುಂಬದ 6 ಸದಸ್ಯರು

Ram Dhun: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಗುಜರಾತ್​ನಲ್ಲಿ ವಿಶೇಷ ಕಾರ್ಯಕ್ರಮ; 7100 ಹಳ್ಳಿಗಳಲ್ಲಿ ನಡೆಯಲಿದೆ ರಾಮ್​ ಧುನ್​

(Kolar special news Rare species of blackbuck deer Need Responsible Care)