ಕೋಲಾರ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಕೆ.ಹೆಚ್. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ನಡುವಿನ ಶೀತಲ ಸಮರ ಶಮನ ಕೊನೆಗೊಳ್ಳುವ ಲಕ್ಷಣಗಳು ಕಂಡುಬಂದಿವೆ. ಸ್ವತಃ ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪ ಮಾಧ್ಯಮದೊಂದಿಗೆ ಮಾತನಾಡಿದ್ದು, ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್‌ನಲ್ಲಿ ಯಾರೂ ಸಂಚು ಮಾಡುತ್ತಿಲ್ಲ, ಆದರೆ, ಅವರು ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ನಾವೆಲ್ಲ ಒಗ್ಗಾಟ್ಟಾಗಿ ಕೆಲಸ ಮಾಡುತ್ತೇವೆ ಜೊತೆಗೆ ಜಿಲ್ಲೆಯಲ್ಲಿ ಸಿದ್ದು ಪರವಾಗಿ ಕೆಲಸ ಮಾಡಲು ಬದ್ದನಾಗಿದ್ದೇನೆ, ಹಳೆಯ ಬೇಸರವನ್ನೆಲ್ಲಾ ಮರೆತಿದ್ದೇನೆ, ಆಗಿದ್ದು ಆಗೋಯ್ತು ಎನ್ನುವ ಮೂಲಕ ಕಾಂಪ್ರಮೈಸ್ ಮಾತುಗಳನ್ನಾಡುತ್ತಿದ್ದಾರೆ.
ರಾಜ್ಯದ ಮಾಸ್ ಲೀಡರ್ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ, ಎನ್ನುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಜಿಲ್ಲೆಯ ಕೈ ನಾಯಕರಲ್ಲಿನ ಮುನಿಸು ತಗ್ಗುವ ಮುನ್ಸೂಚನೆ ಸಿಕ್ಕಿದೆ. ಹಾವು ಮುಂಗುಸಿಯಂತಿದ್ದ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಿದ್ದುಗಾಗಿ ಸಾಫ್ಟ್ ಆಗಿದ್ದು ಮತ್ತೊಂದು ವಿಶೇಷ. ಈಗಾಗಲೇ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಹಾಗೂ ಮುನಿಯಪ್ಪ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ವೇಳೆ ಕ್ಷೇತ್ರ ಯಾವುದು ಎನ್ನುವುದನ್ನ ಖಾಲಿ ಬಿಟ್ಟಿದ್ದಾರೆ.
ಕೆ.ಎಚ್.ಮುನಿಯಪ್ಪ ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ನಾಯಕರನ್ನು ಸೇರಿಸಿ ಸಭೆಗಳನ್ನ ಮಾಡಿದ್ದಾರೆ, ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಗೆಲುವು ಕಷ್ಟ, ಕೋಲಾರ ಕಾಂಗ್ರೆಸ್‌ನಲ್ಲಿ ಗೊಂದಲ ಸಮಸ್ಯೆ ಇದೆ, ಅದನ್ನು ಸರಿಪಡಿಸಿಕೊಂಡು ಕೋಲಾರಕ್ಕೆ ಬಂದರೆ ಅನುಕೂಲ ಎಂದು ಸಿದ್ದುಗೆ ಸಲಹೆ ಹಾಗೂ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿಯಿಂದ ಕೋಲಾರ ರಾಜಕೀಯ ಸಮೀಕರಣ ಸಾಕಷ್ಟು ಬದಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಆಗಿರುವ ರಮೇಶ್ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಅವರ ಬಣ ಒಗ್ಗಟ್ಟಾಗಿ ಪೊಲಿಟಿಕಲ್ ಗೇಮ್ ಶುರು ಮಾಡುವ ದಿನಗಳು ಸಮೀಪಿಸುತ್ತಿದೆ. ಇಬ್ಬರು ನಾಯಕರಿಗೆ ಅನಿವಾರ್ಯ ಎನ್ನುವಂತೆ ತಾವು ಗೆಲ್ಲಬೇಕು, ತಮ್ಮ ಪಕ್ಷವನ್ನ ಗೆಲ್ಲಿಸಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಬೇಕು ಎನ್ನುವುದು ಸದ್ಯ ಇಬ್ಬರು ರೆಬಲ್ ನಾಯಕರಿಗೆ ಅರ್ಥವಾಗಿದೆ.
ಯಾವುದೇ ಸನ್ನಿವೇಶದಲ್ಲೂ ಒಟ್ಟಿಗೆ ಕೆಲಸ ಮಾಡೋಣ ಜಿಲ್ಲೆಯಲ್ಲಿ ಕಾಂಗ್ರೆಸ್ನ್ನು ಕಟ್ಟೋಣ ಎನ್ನುವಂತಹ ಸಾಫ್ಟ್ ಮನಸ್ಥಿತಿ ಇಬ್ಬರು ನಾಯಕರಲ್ಲೂ ಕಾಣಿಸಿಕೊಂಡಿದೆ. ಅದರಂತೆ ಸಿದ್ದರಾಮಯ್ಯಗಾಗಿ ಜಿಲ್ಲೆಯ 2ನೇ ಪ್ರವಾಸದ ಸಿದ್ದತೆಯಲ್ಲಿರುವ ರಮೇಶ್ ಕುಮಾರ್ ಬಣದ ನಾಯಕರು ಸಹ ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸಿದ್ದರಾಮಯ್ಯ ಅವರನ್ನ ಆಹ್ವಾನ ಮಾಡುತ್ತೇವೆ. ಕೆಹೆಚ್ ಮುನಿಯಪ್ಪ ಅವರ ಬಣವನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಅವರು ನಮ್ಮ ಜೊತೆಗೆ ಬರಲಿ ಎನ್ನುವುದು ರಮೇಶ್ ಕುಮಾರ್ ಅವರ ಮಾತು.
ಇದನ್ನೂ ಓದಿ:ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ರಮೇಶ್ ಕುಮಾರ ಮತ್ತು ಮುನಿಯಪ್ಪ ಬಣಗಳ ನಡುವೆ ವಾಗ್ವಾದ
ಒಟ್ಟಾರೆ ಸಿದ್ದರಾಮಯ್ಯ ಕೋಲಾರ ಎಂಟ್ರಿಯಿಂದ ವಿರೋಧಿ ಅಲೆ ಹೊಡೆತದ ಬದಲಾಗಿ ಹೈಕಮಾಂಡ್ ಸೂಚನೆಯಂತೆ ತಾವು ಒಂದಾಗುವುದೇ ಲೇಸು ಎನ್ನುವ ತೀರ್ಮಾನಕ್ಕೆ ರೆಬಲ್ ನಾಯಕರು ಬಂದಿದ್ದಾರೆ. ಅವರನ್ನು ನಾವು ನಮ್ಮನ್ನು ಅವರು ಮುಗಿಸಿದರೆ ಯಾರೂ ಉದ್ದಾರ ಆಗಲ್ಲ ಎನ್ನುವುದು ಬಹುಷ: ಅರ್ಥವಾಗಿರಬೇಕು ಅದಕ್ಕೆ ಒಳಜಗಳ ಒಳಗೇ ಇರಲಿ ಎನ್ನುತ್ತಿದ್ದಾರೆ ನಾಯಕರುಗಳು.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ