ಕೋಲಾರ: ಟೊಮೆಟೋ ತವರೂರಲ್ಲೇ ಬೆಳೆಗೆ, ಬೆಳೆಗಾರರಿಗೆ ಆಘಾತ, ಭರ್ಜರಿ ದರವಿದ್ದರೂ ರೈತರಿಗಿಲ್ಲ ಲಾಭ!

| Updated By: Ganapathi Sharma

Updated on: Oct 12, 2024 | 3:28 PM

ಕೋಲಾರ ಜಿಲ್ಲೆ ಕರ್ನಾಟಕದ ಟೊಮೆಟೋ ಬೆಳೆಯ ತವರೂರು. ವರ್ಷದ 365 ದಿನವೂ ಆ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಬೆಳೆಯುವಂತಹ ಟೊಮೆಟೋವನ್ನು ದೇಶದ ವಿವಿದ ರಾಜ್ಯಗಳು ಹಾಗೂ ವಿದೇಶಗಳಿಗೂ ರಪ್ತು ಮಾಡಲಾಗುತ್ತದೆ. ಇಂಥ ಜಾಗದಲ್ಲೇ ಇದೀಗ ಬೆಳೆಗೆ, ಬೆಳೆಗಾರರಿಗೆ ಆಘಾತ ಎದುರಾಗಿದೆ. ಭರ್ಜರಿ ದರವಿದ್ದರೂ ಲಾಭವಿಲ್ಲದಾಗಿದೆ! ಕಾರಣವೇನು? ತಿಳಿಯಲು ಮುಂದೆ ಓದಿ.

ಕೋಲಾರ: ಟೊಮೆಟೋ ತವರೂರಲ್ಲೇ ಬೆಳೆಗೆ, ಬೆಳೆಗಾರರಿಗೆ ಆಘಾತ, ಭರ್ಜರಿ ದರವಿದ್ದರೂ ರೈತರಿಗಿಲ್ಲ ಲಾಭ!
ಕೋಲಾರ: ಟೊಮೆಟೋ ತವರೂರಲ್ಲೇ ಬೆಳೆಗೆ, ಬೆಳೆಗಾರರಿಗೆ ಆಘಾತ
Follow us on

ಕೋಲಾರ, ಅಕ್ಟೋಬರ್ 12: ಕೋಲಾರದ ನರ್ಸರಿಗಳಲ್ಲಿ ಮಾರಾಟವಾಗದೆ ಉಳಿದಿರುವ ಲಕ್ಷಾಂತರ ಟೊಮೆಟೋ ಸಸಿಗಳು, ಇನ್ನೊಂದೆಡೆ ಟೊಮೆಟೋ ತೋಟಗಳಲ್ಲಿ ರೋಗಕ್ಕೆ ತುತ್ತಾಗಿರುವ ಬೆಳೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿರುವ ಟೊಟೋ. ಈ ಎಲ್ಲಾ ದೃಷ್ಯಗಳು ನಮಗೆ ಕಂಡುಬಂದಿದ್ದು ಕೋಲಾರದಲ್ಲಿ. ಕೋಲಾರ ಜಿಲ್ಲೆಯೊಂದರಲ್ಲೇ ಸರಿ ಸುಮಾರು 20 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ರೈತರು ವರ್ಷದ 365 ದಿನವೂ ಟೊಮೆಟೋ ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಟೊಮೆಟೋವನ್ನು ಬಾಂಗ್ಲಾ, ದುಬೈ, ಪಾಕಿಸ್ತಾನ, ಅಂಡಮಾನ್ ನಿಕೋಬಾರ್ ಸೇರಿದಂತೆ ನಮ್ಮ ದೇಶದ ವಿವಿದ ರಾಜ್ಯಗಳಿಗೂ ರಪ್ತು ಮಾಡುತ್ತಾರೆ. ಅದಕ್ಕಾಗಿಯೇ ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಮಾರುಕಟ್ಟೆ ಅನ್ನೋ ಹೆಗ್ಗಳಿಕೆ ಇದೆ.

ಟೊಮೆಟೋ ಬೆಳೆಯಲು ಹಿಂದೇಟು ಹಾಕುತ್ತಿರುವ ರೈತರು

ಇಷ್ಟೆಲ್ಲ ಹೆಗ್ಗಳಿಕೆ ಹೊಂದಿರುವ ಕೋಲಾರಕ್ಕೀಗ ದೊಡ್ಡದೊಂದು ಆಘಾತ ಎದುರಾಗಿದೆ. ಜಿಲ್ಲೆಯಲ್ಲಿ ಏಕಾಏಕಿ ರೈತರು ಟೊಮೆಟೋ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಟೊಮೆಟೋ ಸೇರಿದಂತೆ ವಿವಿದ ಬೆಳೆಗಳಿಗೆ ಬಾಧಿಸುತ್ತಿರುವ ಕೀಟಗಳು. ಇದರಿಂದಾಗಿ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ.

ಟೊಮೆಟೊ ಬೆಳೆಗೆ ಹಾನಿಯಾಗಿರುವುದು

ಇದಕ್ಕೆ ಪರಿಹಾರ ಕಂಡುಕೊಳ್ಳಲಾಗದೆ ಮೇಲಿಂದ ಮೇಲೆ ನಷ್ಟಕ್ಕೆ ತುತ್ತಾಗಿರುವ ಜಿಲ್ಲೆಯ ಟೊಮೆಟೋ ಬೆಳೆಗಾರರು ಈವರ್ಷ ಬೆಳೆಯೋದನ್ನೇ ನಿಲ್ಲಿಸಿದ್ದಾರೆ. ಪರಿಣಾಮ ಟೊಮೆಟೋ ಸುಗ್ಗಿಕಾಲದಲ್ಲಿ ಕೋಲಾರ ಜಿಲ್ಲೆಯ ನರ್ಸರಿಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರಬೇಕಿದ್ದ​ ಟೊಮೆಟೋ ಸಸಿಗಳು ಮಾರಾಟವಾಗದೆ ಉಳಿದಿವೆ. ಜಿಲ್ಲೆಯ ರೈತರು ಈ ಬಾರಿ ಕೇವಲ ಶೇ 10 ರಷ್ಟು ಬೆಳೆ ಕೂಡಾ ಬೆಳೆದಿಲ್ಲ ಎಂದು ನರ್ಸರಿ ಮಾಲೀಕ ಮುನಿಕೃಷ್ಣ ತಿಳಿಸಿದ್ದಾರೆ.

ಟೊಮೆಟೋ ಸುಗ್ಗಿ ಕಾಲದಲ್ಲೇ ಬೆಳೆಗೆ ಬರ

ಪ್ರತಿ ವರ್ಷ ಜೂನ್​ ತಿಂಗಳಿಂದ ಅಕ್ಟೋಬರ್​ವರೆಗೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಸುಗ್ಗಿಕಾಲ. ಅದಕ್ಕಾಗಿ ಟೊಮೆಟೋಗೆ ಬೇರೆ ರಾಜ್ಯಗಳ ಹಾಗೂ ಬೇರೆ ದೇಶಗಳಿಂದ ವ್ಯಾಪಾರಸ್ಥರು ಬಂದು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಈ ವೇಳೆ ಬೇಕಿರುವ ಅಷ್ಟೂ ಟೊಮೆಟೋ ಬೇಡಿಕೆಯನ್ನು ಕೋಲಾರ ಜಿಲ್ಲೆಯಿಂದಲೇ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೋಲಾರ ಜಿಲ್ಲೆಯ ರೈತರು ರೋಗ ಬಾಧೆಯಿಂದ ಟೊಮೆಟೋ ಬೆಳೆದಿಲ್ಲ. ಹಾಗಾಗಿ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ರಾಮನಗರ, ಮಂಡ್ಯ, ಮಡಿಕೇರಿ, ತುಮಕೂರು, ಚಾಮರಾಜನಗರ, ಸೇರಿದಂತೆ ಆಂಧ್ರದಿಂದ ರೈತರು ಬೆಳೆದ ಟೊಮೆಟೋ ಮಾರಾಟವಾಗುತ್ತಿದೆ.

ಟೊಮೆಟೋ ಬೆಲೆ ಏರಿಕೆಗೂ ಇದುವೇ ಕಾರಣ!

ಬೇಡಿಕೆಗೆ ತಕ್ಕಷ್ಟು ಗುಣಮಟ್ಟದ ಟೊಮೆಟೋ ಮಾರುಕಟ್ಟೆಯಲ್ಲಿಲ್ಲದ ಕಾರಣ ಬೆಲೆ ಕೂಡಾ ಗಗನಕ್ಕೇರಿದೆ. ಒಂದು ಕೆಜಿ ಟೊಮೆಟೊ 80-100 ರೂಪಾಯಿಯಗೆ ಮಾರಾಟವಾಗುತ್ತಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹದಿನೈದು ಕೆಜಿಯ ಬಾಕ್ಸ್​ ಟೊಮೆಟೋ 1000-1200 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗೆ ಟೊಮೆಟೋ ಬೆಲೆ ಏರಿಕೆಯಾಗಲು ಕೋಲಾರ ಜಿಲ್ಲೆಯಲ್ಲಿ ಟೊಮೆಟೋ ಸೇರಿದಂತೆ ವಿವಿಧ ಬೆಳೆಗಳಿಗೆ ಬಾಧಿಸುತ್ತಿರುವ ರೋಗಗಳು ಹಾಗೂ ಕೀಟಬಾಧೆ ಕಾರಣ ಎಂಬುದು ರೈತರ ಮಾತು.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಗುಡ್​ನ್ಯೂಸ್ ಕೊಟ್ಟ ಸಚಿವ ಮುನಿಯಪ್ಪ

ಒಟ್ಟಾರೆ ಟೊಮೆಟೋ ಸೇರಿದಂತೆ ತರಕಾರಿ ಬೆಳೆಗಳ ತವರೂರಾಗಿದ್ದ ಕೋಲಾರ ಜಿಲ್ಲೆಗೆ ಸದ್ಯ ರೋಗಬಾಧೆ, ವೈರಸ್ ಸೇರಿದಂತೆ ಹಲವು ಕೀಟ ಬಾಧೆ ಕಾಡುತ್ತಿದ್ದು, ಕೂಡಲೇ ಸರ್ಕಾರ ಮತ್ತು ತೋಟಗಾರಿಕಾ ಇಲಾಖೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಕೋಲಾರ ಜಿಲ್ಲೆಯಲ್ಲಿ ಕೃಷಿಯನ್ನೇ ನಿಲ್ಲಿಸಬೇಕಾದ ದಿನ ಬಂದರೂ ಆಶ್ಚರ್ಯವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:27 pm, Sat, 12 October 24