ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಗುಡ್ನ್ಯೂಸ್ ಕೊಟ್ಟ ಸಚಿವ ಮುನಿಯಪ್ಪ
ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ವಿಳಂಬ ವಿಚಾರವಾಗಿ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ಮುನಿಯಪ್ಪ, ಪ್ರತಿ ತಿಂಗಳು 10ರಂದು ಹಣ ಬಿಡುಗಡೆಯಾಗುತ್ತಿತ್ತು. ಸರ್ವರ್ ಸಮಸ್ಯೆಯಿಂದ ಹಣ ಬಿಡುಗಡೆ ವಿಳಂಬವಾಗುತ್ತಿದೆ. ಬಾಕಿ ಹಣ ಮುಂದಿನ ವಾರ ಬಿಡುಗಡೆಯಾಗಲಿದೆ ಎಂದು ಗುಡ್ ನ್ಯೂಸ್ ನೀಡಿದ್ದಾರೆ.
ಕೋಲಾರ, ಅಕ್ಟೋಬರ್ 11: ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಇದೇ ಅನ್ನಭಾಗ್ಯ ಯೋಜನೆಗೆ (Anna Bhagya scheme) ಗ್ರಹಣ ಹಿಡಿದುಕೊಂಡಿತ್ತು. ಸರ್ಕಾರ ಎರಡು ತಿಂಗಳಿನಿಂದ ಡಿಬಿಟಿ ಹಣ ಕೊಟ್ಟಿರಲಿಲ್ಲ. ಹೀಗಾಗಿ ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ವಿಚಾರವಾಗಿ ಆಹಾರ ಸಚಿವ ಮುನಿಯಪ್ಪ ಪ್ರತಿಕ್ರಿಯಿಸಿದ್ದು, ಪ್ರತಿ ತಿಂಗಳು 10ರಂದು ಹಣ ಬಿಡುಗಡೆಯಾಗುತ್ತಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ಹಣ ಬಿಡುಗಡೆ ವಿಳಂಬವಾಗಿದೆ. ಬಾಕಿ ಹಣ ಮುಂದಿನ ವಾರ ಬಿಡುಗಡೆಯಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಅರ್ಹತೆ ಪರಿಶೀಲಿಸಿ ಅನರ್ಹರನ್ನ ಎಪಿಎಲ್ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗೆ ಹಿಡಿದ ಗ್ರಹಣ: 3 ತಿಂಗಳಿನಿಂದ ಬರದ ಡಿಬಿಟಿ ಹಣ!
ಅನ್ನಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡುವ ವಿಚಾರಕ್ಕೆ ಕೇಂದ್ರ ಮತ್ತು ರಾಜ್ಯದ ಮಧ್ಯೆ ಜಟಾಪಟಿ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದಿದ್ದರೂ ಖರೀದಿಸುತ್ತಿಲ್ಲವೆಂಬ ಆರೋಪ ಕೂಡ ಕೇಳಿಬಂದಿತ್ತು. ಇದೆಲ್ಲದರ ಮಧ್ಯೆ 5ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದನ್ನು ಮುಂದುವರೆಸುವುದಾಗಿ ಇತ್ತೀಚೆಗೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಇಷ್ಟಾದರೂ ಕೂಡ ಸರ್ಕಾರ ಎರಡು ತಿಂಗಳಿನಿಂದ ಡಿಬಿಟಿ ಹಣ ಹಾಕಿರಲಿಲ್ಲ.
ಇದನ್ನೂ ಓದಿ: ರಾಜ್ಯದ ಜನರಿಗೆ ಆದಷ್ಟು ಬೇಗ ಸಿಗಲಿದೆ ಅನ್ನಭಾಗ್ಯ ಯೋಜನೆಯ ಅಕ್ಕಿ: ಸಚಿವ ಮುನಿಯಪ್ಪ ಹೇಳಿದ್ದಿಷ್ಟು
ಬಿಪಿಎಲ್ ಕಾರ್ಡ್‌ದಾರ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿತ್ತು. ಪ್ರತಿ ಕೆಜಿ ಅಕ್ಕಿಗೆ ತಲಾ 34ರೂ.ನಂತೆ ಒಟ್ಟು 5 ಕೆಜಿ ಅಕ್ಕಿಗೆ 170ರೂ ನೀಡಲಾಗುತ್ತಿತ್ತು. ಅದರಂತೆ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮಾವಣೆಯಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಯಾವುದೇ ಹಣ ಪಾವತಿ ಆಗಿಲ್ಲ. ಹೀಗಾಗಿ ಫಲಾನುಭವಿಗಳು ಪ್ರತಿದಿನ ಬೆಂಗಳೂರು ಒನ್ ಹಾಗೂ ಬ್ಯಾಂಕ್ಗಳನ್ನ ಸುತ್ತುವಂತ್ತಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:27 pm, Fri, 11 October 24