AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಪಾಲಿಗೆ ಲಕ್ಷ್ಮಿಯಾದ ಹೂವು! ಕೆಜಿ ಕನಕಾಂಬರಕ್ಕೆ 2 ಸಾವಿರ; ಚೆಂಡು, ಸೇವಂತಿಗೆ ಎಷ್ಟು ಗೊತ್ತಾ?

ಕಳೆದ ಮೂರು ತಿಂಗಳಿಂದ ಬೆಲೆ ಏರಿಕೆಯ ಕಾರಣಕ್ಕೆ ಸದ್ದು ಮಾಡುತ್ತಿದ್ದ ಟೊಮ್ಯಾಟೋ ಸ್ವಲ್ಪ ಸೈಲೆಂಟಾಗಿದೆ. ಸದ್ಯ ಈಗ ಹೂವಿನ ಸರದಿ ಶುರುವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದ್ದು ಹೂವು ಬೆಳೆದ ರೈತರ ಮನಗೆ ಸಾಕ್ಷಾತ್​ ವರಮಹಾಲಕ್ಷ್ಮಿಯೇ ಪ್ರವೇಶ ಮಾಡಿದಂತಾಗುತ್ತಿದೆ.

ರೈತರ ಪಾಲಿಗೆ ಲಕ್ಷ್ಮಿಯಾದ ಹೂವು! ಕೆಜಿ ಕನಕಾಂಬರಕ್ಕೆ 2 ಸಾವಿರ; ಚೆಂಡು, ಸೇವಂತಿಗೆ ಎಷ್ಟು ಗೊತ್ತಾ?
ಕೋಲಾರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 24, 2023 | 9:20 PM

Share

ಕೋಲಾರ, ಆ.24: ಸಮೃದ್ದವಾಗಿ ಬೆಳೆದಿರುವ ಚೆಂಡು, ಸೇವಂತಿಗೆ ಹೂವನ್ನು (Flowers) ಬಿಡಿಸುತ್ತಿರುವ ಮಹಿಳೆಯರುವ, ಮಾರುಕಟ್ಟೆಯಲ್ಲಿ ಹೂವು ಖರೀದಿಗೆ ಮುಗಿಬಿದ್ದಿರುವ ಗ್ರಾಹಕರು. ಇಂಥಾದೊಂದು ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ (Kolar) ದಲ್ಲಿ. ನಗರದಲ್ಲಿ ರೈತರು ಕಳೆದ ಮೂರು ತಿಂಗಳಿಂದ ಟೊಮ್ಯಾಟೋಗೆ ಬಂಗಾರದ ಬೆಲೆ ಬಂದಿದ್ದ ಕಾರಣದಿಂದ ಟೊಮ್ಯಾಟೋ ಬೆಳೆದಿದ್ದ ರೈತರ ಬದುಕು ಅಕ್ಷರಶ: ಬಂಗಾರವಾಗಿತ್ತು. ಸದ್ಯ ಈಗ ಟೊಮ್ಯಾಟೋ ಬೆಲೆ ಯಲ್ಲಿ ಸ್ವಲ್ಪ ಇಳಿಮುಖವಾಗಿ ಸಹಜ ಸ್ಥಿತಿಗೆ ಬಂದಿದೆ. ಇದರ ಬೆನ್ನಲ್ಲೇ ಈಗ ಶ್ರಾವಣ ಮಾಸ ಆರಂಭವಾಗಿದ್ದು, ಇನ್ನು ಸಾಲು ಸಾಲು ಹಬ್ಬಗಳಿವೆ. ಈ ಹಿನ್ನೆಲೆಯಲ್ಲಿ ಹೂವಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇಷ್ಟು ದಿನ ಕೆಜಿಗೆ 80 ರಿಂದ 100 ರೂಪಾಯಿ ಇದ್ದ ಬೆಲೆ ದುಪ್ಪಾಟ್ಟಾಗಿದೆ.

ಕೆಜಿ ಕನಕಾಂಬರಕ್ಕೆ 2 ಸಾವಿರ

ಹೌದು, ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕೇಳಿದರೆ ನಿಮ್ಮ ಹೂವಿನಂತ ಹೃದಯ ಕೂಡ ಒಡೆದು ಹೋಗಬಹುದು, ಅಷ್ಟರ ಮಟ್ಟಿಗೆ ಬೆಲೆ ಏರಿಕೆ ಕಂಡಿದೆ. ಕೋಲಾರದ ಮಾರುಕಟ್ಟೆಯಲ್ಲಿ ಒಂದು ಕೆಜಿ ಕನಕಾಂಬರ ಹೂವಿನ ಬೆಲೆ ಬರೋಬ್ಬರಿ 2000 ರೂಪಾಯಿ ಇದ್ದರೆ, ಮಲ್ಲಿಗೆಹೂ 1000 ರೂಪಾಯಿ ಇದೆ. ಇನ್ನು ನಿತ್ಯ ಪೂಜೆಗೆ ಬಳಸುವ ಸೇವಂತಿಗೆ, ಮಾರಿಗೋಲ್ಡ್​, ಚೆಂಡುಹೂವು, ಬಟನ್ಸ್​ ರೋಜ್​, ಬೆಲೆಯೂ 250 ರಿಂದ 300 ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಹಿಂದೆದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬಕ್ಕೆಂದು ತಾವರೆ ಹೂವು ಕೀಳಲು ಹೋಗಿ ತಂದೆ-ಮಗ ದುರಂತ ಸಾವು

ಇನ್ನು ಈ ಹಿಂದೆ ರೈತರು ಕೇವಲ ಟೊಮ್ಯಾಟೋ ಗುಂಗಿನಲ್ಲಿ ಮುಳುಗಿಹೋಗಿದ್ದರು. ಹೆಚ್ಚಿನ ರೈತರು ಟೊಮ್ಯಾಟೋ ಬೆಳೆ ಬೆಳೆಯಲು ಹೆಚ್ಚಾಗಿ ಉತ್ಸುಕರಾಗಿದ್ದರು. ಈ ಹಿನ್ನಲೆ ಹೆಚ್ಚಿನ ರೈತರು ಹೂವು ಬೆಳೆದಿಲ್ಲ. ಆ ಕಾರಣಕ್ಕಾಗಿ ಹಬ್ಬದ ಸಮಯಕ್ಕೆ ಹೂವಿನ ಪೂರೈಕೆ ಕಡಿಮೆಯಾಗಿದೆ. ಅದರ ಜೊತೆಗೆ ಹೂವಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಹಾಗಾಗಿ ಹೂವಿಗೆ ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಇನ್ನು ರೈತರು ಒಂದು ಎಕರೆ ಹೂವು ಬೆಳೆಯಲ್ಲಿ ಕನಿಷ್ಠ ಒಂದು ಲಕ್ಷದಷ್ಟು ಖರ್ಚು ಬರುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ರೈತರಿಗೆ ಕೆಜಿ ಹೂವಿಗೆ ಕನಿಷ್ಠ 100 ರಿಂದ150 ರೂಪಾಯಿ ಬೆಲೆ ಬಂದರೆ, ರೈತರಿಗೆ ಒಳ್ಳೆಯ ಲಾಭ ಸಿಗುತ್ತದೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆ ಏರಿಕೆ

ಇಷ್ಟು ದಿನ ಕೆಜಿ ಹೂವಿಗೆ ಕೇವಲ 60ರಿಂದ80 ರೂಪಾಯಿ ಬೆಲೆ ಇತ್ತು. ಆದರೆ, ಈಗ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದ ಪರಿಣಾಮ ಹೂವಿನ ಬೆಲೆ 250ರಿಂದ300 ರೂಪಾಯಿ ಆಗಿದ್ದು, ಸದ್ಯ ಹೂವು ಬೆಳೆದಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಅದರ ಜೊತೆಗೆ ಇನ್ನು ವರಮಹಾಲಕ್ಷ್ಮಿ ಹಬ್ಬದ ನಂತರ ಗೌರಿ-ಗಣೇಶ ಹಬ್ಬ, ದಸರಾ, ದೀಪಾವಳಿ, ಹೀಗೆ ಸಾಲು ಸಾಲು ಹಬ್ಬಗಳು ಇದೆ. ಇನ್ನು ಎರಡರಿಂದ ಮೂರು ತಿಂಗಳು ಒಳ್ಳೆಯ ಬೆಲೆ ಇರುತ್ತದೆ. ಹೂವು ಬೆಳೆದ ರೈತರಿಗೆ ಸಂತೋಷವಾಗಿ ಹೂವು ಬೆಳೆದ ರೈತನ ಬದುಕು ಒಂದಷ್ಟು ಸುಧಾರಿಸುತ್ತದೆ ಎನ್ನುವುದು ರೈತರ ಮಾತು.

ಇದನ್ನೂ ಓದಿ:ಮಂಡ್ಯ-ಮೈಸೂರಿನಲ್ಲಿ ಜೋರಾದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ ಸಿಡಿದೆದ್ದ ರೈತರು

ಒಟ್ಟಾರೆ ವರಮಹಾಲಕ್ಷ್ಮಿಯ ಕೃಪೆಯೋ ಏನೋ ಗೊತ್ತಿಲ್ಲ. ಸದ್ಯ ಹೂವಿಗೆ ಉತ್ತಮ ಬೆಲೆ ಬಂದಿದ್ದು, ಹೂವು ಬೆಳೆದಿರುವ ರೈತರ ಮನೆಗೆ ವರಮಹಾಲಕ್ಷ್ಮಿಯೇ ಪ್ರವೇಶ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪದೇ ಪದೇ ನಷ್ಟದ ಸುಳಿಗೆ ಸಿಲುಕುತ್ತಿದ್ದ ರೈತರಿಗೆ ಈ ವರ್ಷ ಹೂವು ಬೆಳೆದಿರುವ ರೈತರ ಮನೆಗೆ ಲಕ್ಷ್ಮಿ ಪ್ರವೇಶ ಮಾಡೋದಂತು ಸುಳ್ಳಲ್ಲ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ