ಕೋಲಾರ, ಸೆ.09: ದೇವರ ದರ್ಶನಕ್ಕಾಗಿ ಸಾಲಾಗಿ ನಿಂತಿರುವ ಭಕ್ತರು, ಹರಕೆ ತೀರಿಸಲು ಮುಡಿಕೊಟ್ಟು ಕಲ್ಯಾಣಿಯಲ್ಲಿ ಮುಳುಗೇಳುತ್ತಿರುವ ಭಕ್ತರು, ಮತ್ತೊಂದೆಡೆ ಭಕ್ತರಿಂದ ದೇವರ ಸ್ಮರಣೆ ಇಂಥಾದೊಂದು ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ (KGF) ತಾಲ್ಲೂಕು ಗುಟ್ಟಹಳ್ಳಿಯ ಬಂಗಾರ ತಿರುಪತಿ ದೇವಾಲಯದಲ್ಲಿ. ಈ ಬಂಗಾರ ತಿರುಪತಿಯ ವೆಂಕಟರಮಣಸ್ವಾಮಿಯನ್ನು ಏಕಾಂತ ಶ್ರೀನಿವಾಸ, ಬಂಗಾರಗಿರಿವಾಸ, ನೇತ್ರವೆಂಕಟರಣಸ್ವಾಮಿ ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇಂಥ ಪ್ರಸಿದ್ದಿ ಪಡೆದ ದೇವಾಲಯದಲ್ಲಿ ಇಂದು ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ಬಂಗಾರ ತಿರುಪತಿ ನೇತ್ರ ವೆಂಕಟರಮಣ ಸ್ವಾಮಿಯ ದೇವಾಲಯದಲ್ಲಿ ಭಕ್ತ ಸಾಗವೇ ಹರಿದು ಬಂದಿತ್ತು.
ಮುಂಜಾನೆಯಿಂದಲೇ ಭಕ್ತರು ವೆಂಕಟರಮಣ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಸಾಲುಗಟ್ಟಿ ನಿಂತಿತ್ತು. ಮುಂಜಾನೆ ಮೂರು ಗಂಟೆಯಿಂದ ದೇವಾಲಯದಲ್ಲಿ ವಿಶೇಷ ಅಭಿಷೇಕ, ದೇವರಿಗೆ ಅಲಂಕಾರ, ಹಾಗೂ ಪೂಜೆಗಳು ನಡೆಯುತ್ತಿವೆ. ಬಂಗಾರ ತಿರುಪತಿ ಎಂದು ಕರೆಯಲಾಗುವ ಈ ಕ್ಷೇತ್ರ ಬೃಗುಮಹರ್ಷಿಗಳು ತಪಸ್ಸು ಮಾಡಿದ ಸ್ಥಳವಾಗಿದ್ದು, ಈ ಪ್ರದೇಶದಲ್ಲಿ ಬೃಗು ಮಹರ್ಷಿಗಳಿಗೆ ದರ್ಶನ ನೀಡಲು ಶ್ರೀವೆಂಕಟೇಶ್ವರ ಸ್ವಾಮಿಯು ನೇತ್ರದಲ್ಲಿ ದರ್ಶನ ನೀಡಿದ್ದಾನೆಂಬ ಪ್ರತೀತಿ ಇದೆ. ಈ ಸಲುವಾಗಿಯೇ ಇಲ್ಲಿ ಆರು ಕಿಂಡಿಗಳಲ್ಲಿ ಒಂದೇ ಕಣ್ಣಿನಿಂದ ಭಕ್ತರು ವೆಂಕಟೇಶ್ವರಸ್ವಾಮಿಯ ದರ್ಶನ ಮಾಡುತ್ತಾರೆ. ಇದರ ಸಲುವಾಗಿ ನೇತ್ರವೆಂಕಟೇಶ್ವರ ಸ್ವಾಮಿ ಅನ್ನೋ ಹೆಸರು ಕೂಡ ಈ ಕ್ಷೇತ್ರಕ್ಕಿದೆ.
ಇದನ್ನೂ ಓದಿ:ಬೀದರ್: ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಜಗಜಟ್ಟಿಗಳ ಸೆಣಸಾಟ, ಮುಗಿಲು ಮುಟ್ಟಿದ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ
ಆರು ಕಿಂಡಿಗಳಲ್ಲಿ ದೇವರು ಭಕ್ತರಿಗೆ ದರ್ಶನ ನೀಡುವ ಮೂಲಕ, ಮನುಷ್ಯನ ಹರಿಷಡ್ವರ್ಗಗಳನ್ನು ನಿಯಂತ್ರಿಸಿ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ ಅನ್ನೋದು ನಂಬಿಕೆ ಇಲ್ಲಿದೆ. ಹಾಗಾಗಿನೇ ಇಲ್ಲಿಗೆ ರಾಜ್ಯವೇ ಅಲ್ಲದೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಶ್ರಾವಣ ಮಾಸದಂದು ಆಗಮಿಸುತ್ತಾರೆ. ಬಂಗಾರ ತಿರುಪತಿಯ ಶ್ರೀ ನೇತ್ರವೆಂಕಟರಮಣಸ್ವಾಮಿಯು ನೂರಾರು ವರ್ಷಗಳಿಂದ ಇಲ್ಲಿ ನೆಲೆಸಿ ಭಕ್ತರ ಕಷ್ಟಗಳನ್ನು, ಅವರ ಕೋರಿಕೆಗಳನ್ನು ಈಡೇರಿಸುತ್ತಾನೆ ಅದಕ್ಕಾಗಿಯೇ ಪ್ರತಿ ಶ್ರಾವಣ ಮಾಸದಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಶ್ರೀನೇತ್ರವೆಂಕಟರಮಣ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಇಲ್ಲಿಗೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಭಕ್ತ ಸಾಗರ ಹರಿದು ಬರುತ್ತದೆ. ಈ ವಿಶೇಷ ದಿನದಲ್ಲಿ ಭಕ್ತರು ವೆಂಕಟರವಣಸ್ವಾಮಿಗೆ ತಮ್ಮ ಮುಡಿಕೊಟ್ಟು, ಇಲ್ಲಿನ ಕಲ್ಯಾಣಿಯಲ್ಲಿ ಸ್ನಾನಮಾಡಿ ವೆಂಕಟರಮಣ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಇನ್ನೂ ಈಬಾರಿ ವಿಶೇಷವಾಗಿ ಕಾರ್ಯ ಕೋಲಾರ ಮೂಲದ ಸಿಎಂ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಬಂಗಾರ ತಿರುಪತಿಗೆ ಬಂದು ದೇವರ ದರ್ಶನ ಪಡೆದರು. ಅಷ್ಟೇ ಅಲ್ಲದೆ ದೂರದ ಊರುಗಳಿಂದಲೂ ಕೂಡ ಹಲವು ಜನ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಒಟ್ಟಾರೆ ಶ್ರಾವಣ ಮಾಸದಲ್ಲಿ ವೆಂಕಟೇಶ್ವರ ಸ್ವಾಮಿಯನ್ನು ಸ್ಮರಿಸಿದ್ರೆ, ಭೂಲೋಕದಲ್ಲಿ ಭಕ್ತರ ಬೇಡಿಕೆಗಳು ಈಡೇರುತ್ತವೆ ಅನ್ನೋ ನಂಬಿಕೆ ಇದೆ. ಹಾಗಾಗಿ ಭಕ್ತರು ವಿಶೇಷವಾಗಿ ವೆಂಕಟೇಶ್ವರಸ್ವಾಮಿಯ ದೇವಾಲಯಕ್ಕೆ ಬೇಟಿ ನೀಡಿದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸೆಂದು ದೇವರೆದುರು ತಮ್ಮ ಪಾರ್ಥನೆಗಳನ್ನು ಸಲ್ಲಿಸಿದ್ದು ಮಾತ್ರ ವಿಶೇಷವಾಗಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Sat, 9 September 23